ಉಪರಾಷ್ಟ್ರಪತಿ ವಿರುದ್ಧ ಅವಿಶ್ವಾಸ: ದೇಶದ ಇತಿಹಾಸದಲ್ಲೇ ಮೊದಲು

| Published : Dec 11 2024, 12:48 AM IST

ಉಪರಾಷ್ಟ್ರಪತಿ ವಿರುದ್ಧ ಅವಿಶ್ವಾಸ: ದೇಶದ ಇತಿಹಾಸದಲ್ಲೇ ಮೊದಲು
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಬಗ್ಗೆ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿ ಕೂಟವು ರಾಜ್ಯಸಭೆ ಸ್ಪೀಕರ್‌ ಕೂಡ ಆದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ವಿರುದ್ಧ ಮಂಗಳವಾರ ಅವಿಶ್ವಾಸ ನಿರ್ಣಯದ ನೋಟಿಸ್‌ ನೀಡಿವೆ.

ನವದೆಹಲಿ: ತಮ್ಮ ಬಗ್ಗೆ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿ ಕೂಟವು ರಾಜ್ಯಸಭೆ ಸ್ಪೀಕರ್‌ ಕೂಡ ಆದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ವಿರುದ್ಧ ಮಂಗಳವಾರ ಅವಿಶ್ವಾಸ ನಿರ್ಣಯದ ನೋಟಿಸ್‌ ನೀಡಿವೆ.

ಈ ಹಿಂದೆ 3 ಬಾರಿ ಲೋಕಸಭೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿತ್ತು. ಮೂರೂ ವಿಫಲವಾಗಿದ್ದವು. ಆದರೆ ರಾಜ್ಯಸಭೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಇದೇ ಮೊದಲು.ಕಾಂಗ್ರೆಸ್‌ , ತೃಣಮೂಲ ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ, ಡಿಎಂಕೆ, ಆರ್‌ಜೆಡಿಯ ಒಟ್ಟು 60 ಜನರು ಸಂಸದರ ಸಹಿಯೊಂದಿಗೆ ಅವಿಶ್ವಾಸದ ಪತ್ರವನ್ನು ರಾಜ್ಯಸಭೆ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ. ಅವಿಶ್ವಾಸ ನಿರ್ಣಯ ಮಂಡನೆಗೆ 14 ದಿನ ಮೊದಲೇ ನೋಟಿಸ್‌ ನೀಡಬೇಕು. ಇದಕ್ಕೆ ರಾಜ್ಯಸಭೆ ಉಪಸಭಾಪತಿ ಒಪ್ಪಿಗೆ ಬೇಕು.ಈ ಬಗ್ಗೆ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು ‘ರಾಜ್ಯಸಭೆಯ ಪರಿಷತ್ತಿನ ಕಲಾಪಗಳನ್ನು ಅತ್ಯಂತ ಪಕ್ಷಪಾತದ ರೀತಿಯಲ್ಲಿ ನಡೆಸುತ್ತಿರುವ ರಾಜ್ಯಸಭೆಯ ಸಭಾಪತಿಯೂ ಆದ ಅವರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸುವುದು ಬಿಟ್ಟು ಇಂಡಿಯಾ ಕೂಟಕ್ಕೆ ಬೇರೆ ಆಯ್ಕೆಗಳಿಲ್ಲ. ಇದು ಅತಿ ನೋವಿನ ನಿರ್ಧಾರ. ಆದರೆ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ’ ಎಂದಿದ್ದಾರೆ.ತೃಣಮೂಲ ಕಾಂಗ್ರೆಸ್‌ ಸಂಸದೆ ಸಾಗರಿಕಾ ಘೋಷ್‌ ಪ್ರತಿಕ್ರಿಯಿಸಿ, ‘ಸರ್ಕಾರ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದೆ. ನಮ್ಮ ಹಕ್ಕುಗಳನ್ನು, ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಅವಿಶ್ವಾಸ ನಿರ್ಣಯವನ್ನು ನೀಡಿದ್ದೇವೆ. ಅವರು ನಮಗೆ ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಅವಕಾಶ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ರಿಜಿಜು ಕಿಡಿ:

ಕೇಂದ್ರ ಸಂಸದೀಯ ಸಚಿವ ಕಿರಣ್‌ ರಿಜಿಜು ಇದನ್ನು ಖಂಡಿಸಿ. ‘ಎನ್‌ಡಿಎಗೆ ರಾಜ್ಯಸಭೆಯಲ್ಲಿ ಬಹುಮತವಿದೆ. ನೋಟಿಸ್ ಅನ್ನು ತಿರಸ್ಕರಿಸಲಾಗುವುದು ಮತ್ತು ಈ ರೀತಿಯ ಕ್ರಮವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ಧನಕರ್‌ ಬಗ್ಗೆ ಗೌರವವಿದೆ’ ಎಂದರು.

ನಿರ್ಣಯ ಅಂಗೀಕಾರ ಅನುಮಾನ:

ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿಪಕ್ಷಗಳು ಅಗತ್ಯವಿರುವಷ್ಟು ಸಂಖ್ಯಾಬಲವನ್ನು ಹೊಂದಿಲ್ಲ. ಹೀಗಾಗಿ ಇದು ಕೇವಲ ಸಾಂಕೇತಿಕ ಪ್ರತಿಭಟನೆ ಇರಬಹುದು ಎಂದು ವಿಶ್ಲೇಷಿಸಲಾಗಿದೆ.

ನಿಯಮಗಳ ಪ್ರಕಾರ ಧನಕರ್‌ ಅವರನ್ನು ಪದಚ್ಯುತಗೊಳಿಸಬೇಕು ಎಂದಾದರೆ ಸರಳ ಬಹುಮತದಲ್ಲಿ ಅಂಗೀಕರಿಸಬೇಕು. ಅಂದರೆ ಶೇ.50ಕ್ಕಿಂತ ಹೆಚ್ಚು ಮತ ವಿಪಕ್ಷಕ್ಕೆ ರಾಜ್ಯಸಭೆಯಲ್ಲಿ ಲಭ್ಯವಾಗಬೇಕು. ಲೋಕಸಭೆಯಲ್ಲಿಯೂ ಇದೇ ಅಂತರವಿರಬೇಕು. ಆದರೆ ವಿಪಕ್ಷಗಳಿಗೆ ಸ್ಪಷ್ಟಬಹುಮತವಿಲ್ಲದ ಕಾರಣ ಧನಕರ್‌ ಕಷ್ಟ.

543 ಸದಸ್ಯರ ಲೋಕಸಭೆಯಲ್ಲಿ ಎನ್‌ಡಿಎಗೆ 293 ಹಾಗೂ ಇಂಡಿಯಾ ಕೂಟಕ್ಕೆ 233 ಸದಸ್ಯರ ಬೆಂಬಲವಿದೆ. ಇತರರು 17 ಜನ ಇದ್ದಾರೆ. 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಪ್ರಸ್ತುತ 231 ಸದಸ್ಯರು ಮಾತ್ರ ಇದ್ದು 14 ಸೀಟು ಖಾಲಿ ಇವೆ. ಎನ್‌ಡಿಎ 122 ಸಂಸದರನ್ನು ಹೊಂದಿದ್ದರೆ. ವಿರೋಧ ಪಕ್ಷವು 113 ಸದಸ್ಯರ ಬೆಂಬಲವನ್ನು ಹೊಂದಿದೆ.