ಸಾರಾಂಶ
ಪಾಕ್ ಜತೆಗಿನ ಸಿಂಧು ಜಲ ಒಪ್ಪಂದ ತಡೆಹಿಡಿದ ಭಾರತದ ವಿರುದ್ಧ ಗುಡುಗಿರುವ ಪಾಕ್ ಸೇನೆ ವಕ್ತಾರ ಲೆ।ಜ। ಅಹ್ಮದ್ ಷರೀಫ್ ಚೌಧರಿ, ‘ನಮ್ಮತ್ತ ಹರಿಯುವ ನೀರನ್ನು ತಡೆದರೆ ನಾವು ನಿಮ್ಮನ್ನು ಉಸಿರುಗಟ್ಟಿಸುತ್ತೇವೆ’ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಇಸ್ಲಾಮಾಬಾದ್: ಪಾಕ್ ಜತೆಗಿನ ಸಿಂಧು ಜಲ ಒಪ್ಪಂದ ತಡೆಹಿಡಿದ ಭಾರತದ ವಿರುದ್ಧ ಗುಡುಗಿರುವ ಪಾಕ್ ಸೇನೆ ವಕ್ತಾರ ಲೆ।ಜ। ಅಹ್ಮದ್ ಷರೀಫ್ ಚೌಧರಿ, ‘ನಮ್ಮತ್ತ ಹರಿಯುವ ನೀರನ್ನು ತಡೆದರೆ ನಾವು ನಿಮ್ಮನ್ನು ಉಸಿರುಗಟ್ಟಿಸುತ್ತೇವೆ’ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಈ ಮೊದಲು ಉಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್, ‘ನಾವು ನಿಮ್ಮ ಉಸಿರು ನಿಲ್ಲಿಸಿ, ನದಿಯಲ್ಲಿ ರಕ್ತ ಹರಿಸುತ್ತೇವೆ’ ಎಂದಿದ್ದ. ಈಗ ಸೇನಾಧಿಕಾರಿಯ ಬಾಯಲ್ಲೂ ಇಂತಹ ಹೇಳಿಕೆ ಬಂದಿದ್ದು, ಟೀಕೆಗೆ ಗುರಿಯಾಗಿದೆ.
ಪಾಕ್ ಪರ ಬೇಹುಗಾರಿಕೆ: ಉ.ಪ್ರ.ದಲ್ಲಿ ಗುಜರಿ ವ್ಯಾಪಾರಿ ಬಂಧನ
ಲಖನೌ: ಭಾರತದಲ್ಲಿ ಅಕ್ರಮವಾಗಿ ನೆಲೆಸಿ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಶಂಕಿತನನ್ನು ಉತ್ತರಪ್ರದೇಶದ ಉಗ್ರ ನಿಗ್ರಹ ದಳದ ಅಧಿಕಾರಿಗಳು ನೋಯ್ಡಾದಲ್ಲಿ ಗುರುವಾರ ಬಂಧಿಸಿದ್ದಾರೆ.ದೆಹಲಿಯ ಸೀಲಂಪುರದವನಾದ ಮೊಹಮ್ಮದ್ ಹರೂನ್ (45) ಎಂಬ ಗುಜರಿ ವ್ಯಾಪಾರಿ, ಭಾರತದಲ್ಲಿರುವ ಪಾಕಿಸ್ತಾನದ ರಾಜಭಾರಿ ಕಚೇರಿಯ ಸಿಬ್ಬಂದಿ ಮುಜಾಮಿಲ್ ಹುಸೇನ್ ಜತೆ ಸಂಪರ್ಕದಲ್ಲಿದ್ದು, ಅಕ್ರಮವಾಗಿ ಪಾಕ್ ವೀಸಾ ಪಡೆದಿದ್ದ ಹಾಗೂ ಅನ್ಯರಿಂದ ದುಡ್ಡು ಪಡೆದು ಪಾಕ್ ವೀಸಾ ಒದಗಿಸುತ್ತಿದ್ದ. ಜತೆಗೆ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಬಹುದಾದ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದ ಎಂದು ಆರೋಪಿಸಲಾಗಿದೆ.ಇತ್ತೀಚೆಗಷ್ಟೇ ಹುಸೇನ್‌ಗೆ ಭಾರತದ ಸರ್ಕಾರ ದೇಶ ತೊರೆಯುವಂತೆ ಆದೇಶಿಸಿತ್ತು.
ಭಾರತ, ಪಾಕ್ ವಾಯುವಲಯ ನಿರ್ಬಂಧ 1 ತಿಂಗಳು ವಿಸ್ತರಣೆ
ನವದೆಹಲಿ: ಭಾರತ ಮತ್ತು ಪಾಕಿಸ್ತಾನಗಳು, ಪರಸ್ಪರರ ವಾಯುಲಯದಲ್ಲಿ ತಮ್ಮತಮ್ಮ ವಿಮಾನ ಪ್ರವೇಶಕ್ಕೆ ವಿಧಿಸಿಕೊಂಡಿದ್ದ ನಿರ್ಬಂಧವನ್ನು ಇನ್ನೂ 1 ತಿಂಗಳು ವಿಸ್ತರಿಸಿ ಆದೇಶ ಹೊರಡಿಸಿವೆ.ಭಾರತದ ನಾಗರಿಕ ವಿಮಾನಯಾನ ಸಂಸ್ಥೆ ಶುಕ್ರವಾರ ಪ್ರಕಟಣೆ ಹೊರಡಿಸಿ, ’ಪಾಕಿಸ್ತಾನ ಯಾವುದೇ ವಿಮಾನಗಳಿಗೆ ಜೂ.23ರ ತನಕ ಭಾರತ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದು ಪಾಕ್ ಮಿಲಿಟರಿ ವಿಮಾನಗಳಿಗೂ ಅನ್ವಯಿಸುತ್ತದೆ’ ಎಂದಿದೆ. ಇನ್ನು ಪಾಕಿಸ್ತಾನ ವಿಮಾನ ಪ್ರಾಧಿಕಾರ ಕೂಡ ಪ್ರಕಟಣೆ ನೀಡಿ, ‘ಭಾರತ ವಿಮಾನಗಳಿಗೆ ಜೂ.24ರ ತನಕ ಪಾಕಿಸ್ತಾನದ ವಾಯುನೆಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ’ ಎಂದಿದೆ.
ನಮ್ಮ ದಾಳಿ ಉಗ್ರರ ಮೇಲೆ, ಉತ್ತರಿಸಿದ್ದು ಪಾಕ್ ಸೇನೆ: ಶಾ ವ್ಯಂಗ್ಯ
ನವದೆಹಲಿ: ‘ಉಗ್ರವಾದವು ಪಾಕಿಸ್ತಾನ ಪ್ರಾಯೋಜಿತ ಎಂಬುದು ಆಪರೇಷನ್ ಸಿಂದೂರದಿಂದ ಸಾಬೀತಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ‘ಭಾರತೀಯ ಸೇನೆ ಆಪರೇಷನ್ ಸಿಂದೂರದ ಅಡಿಯಲ್ಲಿ ಪಾಕಿಸ್ತಾನದಲ್ಲಿದ್ದ 9 ಉಗ್ರ ನೆಲೆಗಳ ಮೇಲೆ ದಾಳಿ ಮಾಡಿ ಉಡಾಯಿಸಿದೆವು. ಈ ವೇಳೆ ಸೇನಾ ಕಟ್ಟಡಗಳ ಮೇಲೆ ದಾಳಿಯಾಗಿರಲಿಲ್ಲ. ಆದರೆ ಇದಕ್ಕೆ ಪಾಕ್ ಸೇನೆ ಪ್ರತೀಕಾರ ತೀರಿಸಕೊಳ್ಳಲು ಮುಂದಾಯಿತು. ಈ ಮೂಲಕ, ಪಾಕಿಸ್ತಾನವೇ ಉಗ್ರ ಪ್ರಾಯೋಜಕ ಎಂಬುದು ಸಾಬೀತಾಗಿದೆ’ ಎಂದರು.ಇದೇ ವೇಳೆ, ‘ಪಾಕ್ ಸೇನೆ ನಮ್ಮ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಲು ಯತ್ನಿಸಿತು. ಆದರೆ ನಮ್ಮ ವಾಯು ರಕ್ಷಣಾ ವ್ಯವಸ್ಥೆ ಅದನ್ನು ವಿಫಲಗೊಳಿಸಿತು. ಬಳಿಕವಷ್ಟೇ ನಾವು ಅವರ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆವು’ ಎಂದು ಹೇಳಿದರು.