ಪಿಒಕೆ ಹೋರಾಟಕ್ಕೆ ಮಂಡಿಯೂರಿದ ಪಾಕ್‌

| Published : Oct 05 2025, 01:00 AM IST

ಸಾರಾಂಶ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ವಿದ್ಯುತ್‌, ಶಿಕ್ಷಣ, ಆರೋಗ್ಯ ಸೌಲಭ್ಯ ಸೇರಿ ವಿವಿಧ 38 ಬೇಡಿಕೆಗಳನ್ನು ಮುಂದಿಟ್ಟು ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಕೊನೆಗೂ ಪಾಕಿಸ್ತಾನ ಸರ್ಕಾರ ಮಂಡಿಯೂರಿದೆ. ಪ್ರತಿಭಟನಕಾರರ ಎಲ್ಲಾ 38 ಬೇಡಿಕೆಗಳಲ್ಲಿ ಕೆಲವನ್ನು ಈಡೇರಿಸಿ ಕೆಲವನ್ನು ಪರಿಶೀಲಿಸುವುದಾಗಿ ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಕೆಜೆಎಎಸಿ) ಜೊತೆ ಶನಿವಾರ ಒಪ್ಪಂದಕ್ಕೆ ಸಹಿ ಹಾಕಿದೆ.

- ಎಲ್ಲ 38 ಬೇಡಿಕೆ ಈಡೇರಿಕೆ, ಪರಿಶೀಲನೆಗೆ ಅಸ್ತು

-10 ಜನರನ್ನು ಬಲಿಪಡೆದಿದ್ದ ಹೋರಾಟ ಅಂತ್ಯ-25 ಅಂಶಗಳುಳ್ಳ ಒಪ್ಪಂದಕ್ಕೆ ಸರ್ಕಾರ ಸಹಿ

ಪಿಟಿಐ ಇಸ್ಲಾಮಾಬಾದ್‌

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ವಿದ್ಯುತ್‌, ಶಿಕ್ಷಣ, ಆರೋಗ್ಯ ಸೌಲಭ್ಯ ಸೇರಿ ವಿವಿಧ 38 ಬೇಡಿಕೆಗಳನ್ನು ಮುಂದಿಟ್ಟು ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಕೊನೆಗೂ ಪಾಕಿಸ್ತಾನ ಸರ್ಕಾರ ಮಂಡಿಯೂರಿದೆ. ಪ್ರತಿಭಟನಕಾರರ ಎಲ್ಲಾ 38 ಬೇಡಿಕೆಗಳಲ್ಲಿ ಕೆಲವನ್ನು ಈಡೇರಿಸಿ ಕೆಲವನ್ನು ಪರಿಶೀಲಿಸುವುದಾಗಿ ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಕೆಜೆಎಎಸಿ) ಜೊತೆ ಶನಿವಾರ ಒಪ್ಪಂದಕ್ಕೆ ಸಹಿ ಹಾಕಿದೆ.

ಇದರೊಂದಿಗೆ 10 ಜನರನ್ನು ಬಲಿಪಡೆದಿದ್ದ ಹೋರಾಟ ಅಂತ್ಯಗೊಂಡಿದ್ದು, ಜನರ ಹೋರಾಟಕ್ಕೆ ಜಯ ಪ್ರಾಪ್ತಿಯಾಗಿದೆ.ಪ್ರತಿಭಟನೆ ಯಾತಕ್ಕೆ?: ಪಿಒಕೆ ಜನರನ್ನು ಪಾಕ್‌ ಸರ್ಕಾರ ಎರಡನೇ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಿದೆ, ಅಭಿವೃದ್ಧಿಯಿಂದ ವಂಚಿತರನ್ನಾಗಿಸಿದೆ ಎಂಬುದು ದಶಕಗಳಿಂದಲೂ ಕೇಳಿಬರುತ್ತಿರುವ ಕೂಗು.

ಪಾಕಿಸ್ತಾನದ ಈ ಮಲತಾಯಿ ಧೋರಣೆಯಿಂದ ಬೇಸತ್ತಿದ್ದ ಜನ, ಸೇನಾ ದೌರ್ಜನ್ಯ ನಿಲ್ಲಿಸುವುದು, ಕಾಶ್ಮೀರಿ ನಿರಾಶ್ರಿತರಿಗೆ ವಿಧಾನಸಭೆಯಲ್ಲಿ ಮೀಸಲಿಟ್ಟಿರುವ 12 ಸ್ಥಾನಗಳನ್ನು ರದ್ದುಪಡಿಸುವುದು, ಮೂಲಸೌಕರ್ಯ ಅಭಿವೃದ್ಧಿಪಡಿಸುವುದು, ವಿದ್ಯುತ್‌ ಸೌಲಭ್ಯ ಕಲ್ಪಿಸುವುದು ಸೇರಿ ಒಟ್ಟು 38 ಬೇಡಿಕೆಗಳನ್ನು ಮುಂದಿಟ್ಟು ಸೆ.29ರಂದು ಬೀದಿಗಿಳಿದಿದ್ದರು. ಈ ಹೋರಾಟ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿ, 10 ಜನ ಸಾವನ್ನಪ್ಪಿದರೆ, ನೂರಾರು ಮಂದಿ ಗಾಯಗೊಂಡಿದ್ದರು.

ಒಪ್ಪಂದದಲ್ಲೇನಿದೆ?:

ಇದೀಗ ಸರ್ಕಾರ ಪ್ರತಿಭಟನೆಯ ಕಾವಿಗೆ ಮಂಡಿಯೂರಿ, ಹೋರಾಟದ ನೇತೃತ್ವ ವಹಿಸಿದ್ದ ಅವಾಮಿ ಕ್ರಿಯಾ ಸಮಿತಿ ಜೊತೆ ಶನಿವಾರ 25 ಅಂಶಗಳುಳ್ಳ ಒಪ್ಪಂದಕ್ಕೆ ಸಹಿ ಹಾಕಿದೆ.

ಹಿಂಸಾಚಾರದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ, ಹೋರಾಟಗಾರ ಮೇಲೆ ದೌರ್ಜನ್ಯ ಎಸಗಿದವರ ಮೇಲೆ ಭಯೋತ್ಪಾದನೆ ಕೃತ್ಯ ಪ್ರಕರಣ ದಾಖಲು ಮಾಡುವುದು, ಪಿಒಕೆಯ ಮೀರಾಪುರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿ ಮೂಲಸೌಕರ್ಯಕ್ಕೆ 3000 ಕೋಟಿ ರು. ನೀಡುವುದು ಪ್ರಮುಖವಾದವು.

ಕಾಶ್ಮೀರಿ ವಲಸಿಗರಿಗೆ ಮೀಸಲಾಗಿರಿಸಿದ್ದ 12 ಪಿಒಕೆ ಅಸೆಂಬ್ಲಿ ಸೀಟುಗಳ ಮೀಸಲು ರದ್ದುಗೊಳಿಸುವ ಬಗ್ಗೆ ಉನ್ನತಾಧಿಕಾರ ಸಮಿತಿ ರಚಿಸಿ ಪರಿಶೀಲಿಸಲು ಸಮ್ಮತಿಸಲಾಗಿದೆ.

ಇನ್ನುಳಿದಂತೆ ಪಿಒಕೆಯಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ ಸೇರಿದಂತೆ ಉಚಿತ ಚಿಕಿತ್ಸೆಗಾಗಿ 15 ದಿನಗಳ ಒಳಗಾಗಿ ಆರೋಗ್ಯ ಕಾರ್ಡ್‌ ವಿತರಣೆ, ವಿದ್ಯುತ್‌ ಪೂರೈಕೆ ಉತ್ತಮಪಡಿಸಲು 1000 ಪಾಕಿಸ್ತಾನಿ ರು. ಅನುದಾನ ಮೊದಲಾದವುಗಳಿಗೆ ಒಪ್ಪಿಗೆ ನೀಡಲಾಗಿದೆ. ಪಿಒಕೆ ಸಚಿವರು ಮತ್ತು ಸಲಹಗಾರರ ಸಂಖ್ಯೆಯನ್ನು 20ಕ್ಕೆ ಸೀಮಿತಗೊಳಿಸಲು ಮತ್ತು ಕೆಲ ಇಲಾಖೆಗಳ ಗಾತ್ರವನ್ನು ಕುಗ್ಗಿಸಲು ಸಹ ಸರ್ಕಾರ ಸಮ್ಮತಿಸಿದೆ.

==

ತಿರುಗೇಟು ನೀಡ್ತೇವೆ: ಭಾರತಕ್ಕೆ ಪಾಕ್‌

ಇಸ್ಲಾಮಾಬಾದ್‌: ‘ಇನ್ನು ಭಾರತ ದಾಳಿ ಮಾಡಿದರೆ ಪಾಕ್ ಭೂಪಟದಲ್ಲೇ ಇರಲ್ಲ’ ಎಂಬ ಭಾರತದ ರಕ್ಷಣಾ ಸಚಿವರು, ಸೇನಾ ಮತ್ತು ವಾಯುಪಡೆ ಮುಖ್ಯಸ್ಥರು ಹೇಳಿಕೆಗಳಿಗೆ ಪಾಕಿಸ್ತಾನ ಸೇನೆ ಪ್ರತಿಕ್ರಿಯಿಸಿದೆ. ‘ಮತ್ತೊಂದು ಯುದ್ಧ ಭುಗಿಲೆದ್ದರೆ, ಪಾಕಿಸ್ತಾನ ಹಿಂದೆ ಸರಿಯುವುದಿಲ್ಲ’ ಎಂದು ಹೇಳಿದೆ.