ಸಾರಾಂಶ
ಪಾಕಿಸ್ತಾನ ಉಗ್ರ ಪೋಷಕ ದೇಶವಲ್ಲ. ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕ್‌ನಲ್ಲಿ ಉಗ್ರರ ನೆಲೆಗಳೇ ಇಲ್ಲ ಎಂದ ಪಾಕ್ ವಾರ್ತಾ ಸಚಿವ ಅತಾವುಲ್ಲಾ ತರಾರ್ ಪೇಚಿಗೆ ಸಿಲುಕಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನ ಉಗ್ರ ಪೋಷಕ ದೇಶವಲ್ಲ. ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕ್‌ನಲ್ಲಿ ಉಗ್ರರ ನೆಲೆಗಳೇ ಇಲ್ಲ ಎಂದು ವಿದೇಶಿ ಟೀವಿ ಸಂವಾದದಲ್ಲಿ ಪಾಲ್ಗೊಂಡಿದ್ದ ಪಾಕ್ ವಾರ್ತಾ ಸಚಿವ ಅತಾವುಲ್ಲಾ ತರಾರ್ ಪೇಚಿಗೆ ಸಿಲುಕಿದ್ದಾರೆ. ಸ್ಕೈ ನ್ಯೂಸ್ ಪತ್ರಕರ್ತೆ ಯಾಲ್ದಾ ಹಕೀಂ ಜತೆ ಅವರು ಮಾತನಾಡುವಾಗ ಪಾಕಲ್ಲಿ ಉಗ್ರರಿಲ್ಲ ಎಂದರು. ಇದಕ್ಕೆ ಕೂಡಲೇ ತಿರುಗೇಟು ನೀಡಿದ ಯಾಲ್ದಾ, ‘ಹಾಕಿದ್ದರೆ ಅಲ್ ಖೈದಾ ಸಂಸ್ಥಾಪಕ ಒಸಾಮ ಬಿನ್ ಲಾಡೆನ್ ಇದ್ದದ್ದು ಎಲ್ಲಿ? ಆತ ಹತ್ಯೆ ಆಗಿದ್ದು ಎಲ್ಲಿ?’ ಎಂದು ಕೇಳಿ ತರಾರ್‌ರ ಬಾಯಿ ಮುಚ್ಚಿಸಿದರು.
ಪಾಕ್ ಟೀವಿ ನಿರೂಪಕಿ ಅಳುವ ವಿಡಿಯೋ ವೈರಲ್
ನವದೆಹಲಿ: ಭಾರತವು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಪಾಕಿಸ್ತಾನದ ಸುದ್ದಿ ವಾಹಿನಿಯ ನಿರೂಪಕರೊಬ್ಬರು ತೀವ್ರವಾಗಿ ಅಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಹಳೆಯ ವಿಡಿಯೋನೇ ಅಥವಾ ಹೊಸ ದೃಶ್ಯಾವಳಿಯೇ ಎಂಬುದು ಖಚಿತವಾಗಿಲ್ಲ.ಆದರೆ ಈ ವೈರಲ್ ವಿಡಿಯೋಗೆ ಭಾರತೀಯರು ಪ್ರತಿಕ್ರಿಯಿಸಿ, ‘ನಿರೂಪಕಿಯು ದಾಳಿಯಲ್ಲಿ ಸಾವನ್ನಪ್ಪಿದ ಜನರಿಗಾಗಿ ಅಳುತ್ತಾ ದುಃಖ ವ್ಯಕ್ತಪಡಿಸುತ್ತಿದ್ದಾರೆ ಮತ್ತು ದೇವರು ಅವರಿಗೆ ಶಕ್ತಿ ನೀಡಲಿ’ ಎಂದು ವ್ಯಂಗ್ಯವಾಡಿದ್ದಾರೆ.
ಮತ್ತೊಬ್ಬರು, ‘ಪಾಕಿಸ್ತಾನಿ ಟಿವಿ ನಿರೂಪಕರು ಇನ್ನೂ ಹೆಚ್ಚು ಅಳಬೇಕು. ಸಿಂಧೂರವನ್ನು ನಾಶಮಾಡುವವರ ಗತಿ ಇದೇ ಆಗಿರುತ್ತದೆ.. ಭಾರತ ಭಯೋತ್ಪಾದನೆಯ ಎಲ್ಲಾ ಕುರುಹುಗಳನ್ನು ಅಳಿಸಿಹಾಕುತ್ತದೆ.. ಜೈ ಹಿಂದ್’ ಎಂದು ಬರೆದಿದ್ದಾರೆ.
ಸಂಘರ್ಷ ಪ್ರದೇಶ ತೊರೆಯಿರಿ’: ತನ್ನ ದೇಶದ ಪ್ರಜೆಗಳಿಗೆ ಅಮೆರಿಕ ಸಲಹೆ
ನ್ಯೂಯಾರ್ಕ್: ಪಾಕಿಸ್ತಾನದ ಮೇಲೆ ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬೆನ್ನಲ್ಲೇ ಪಾಕ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯು ಅಲ್ಲಿರುವ ತನ್ನ ದೇಶದ ನಾಗರಿಕರಿಗೆ ಭದ್ರತಾ ಎಚ್ಚರಿಕೆಯನ್ನು ನೀಡಿದ್ದು, ‘ಸಂಘರ್ಷ ನಡೆಯುತ್ತಿರುವ ಪ್ರದೇಶಗಳನ್ನು ತೊರೆಯಿರಿ’ ಎಂದು ಸಲಹೆ ನೀಡಿದೆ.
ಪಾಕಿಸ್ತಾನದಲ್ಲಿರುವ ದೇಶದ ನಾಗರಿಕರಿಗೆ ಭದ್ರತಾ ಎಚ್ಚರಿಕೆ ನೀಡಿರುವ ಅಮೆರಿಕ ‘ಭಾರತ ಮತ್ತು ಪಾಕಿಸ್ತಾನದ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯ ಬಳಿ ಭಯೋತ್ಪಾದನೆ ಕಾರಣಕ್ಕೆ ಸೇನಾ ಉದ್ವಿಗ್ನತೆ ಹಿನ್ನೆಲೆಯಲ್ಲಿ ಅಮೆರಿಕದ ನಾಗರಿಕರು ಅಂತಹ ಪ್ರದೇಶಗಳಿಗೆ ತೆರಳಬಾರದು. ಸಂಘರ್ಷದ ಸಾಧ್ಯತೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯ ಸುತ್ತಲಿನ ಪ್ರದೇಶಗಳಿಗೆ ಪ್ರಯಾಣಮಾಡಬೇಡಿ. ಸಂಘರ್ಷ ಪೀಡಿತ ಪ್ರದೇಶಗಳನ್ನು ಬಿಟ್ಟು ಹೋಗಲು ಸಾಧ್ಯವಾದರೆ ಅಲ್ಲಿಂದ ತೊರೆಯಿರಿ. ಮಿಲಿಟರಿ ಚಟುವಟಿಕೆ ಪ್ರದೇಶದಲ್ಲಿ ಅನಿರೀಕ್ಷಿತ ಘಟನೆ ನಡೆದರೆ ಆ ಸ್ಥಳವನ್ನು ತೊರೆಯಿರಿ. ಅದು ಸಾಧ್ಯವಾಗದಿದ್ದರೆ ಆಶ್ರಯ ಪಡೆಯಿರಿ. ವೈಯಕ್ತಿಕ ಭದ್ರತೆ ಪರಿಶೀಲಿಸಿಕೊಳ್ಳಿ. ಅಲ್ಲಿನ ಅಧಿಕಾರಿಗಳೊಂದಿಗೆ ಸಹಕರಿಸಿ’ ಎಂದಿದೆ.
ಜೊತೆಗೆ ‘ ವಿಮಾನ ಸೇವೆಗಳು ಸ್ಥಗಿತಗೊಂಡಿವೆ. ಹಲವು ವಿಮಾನಗಳು ರದ್ದಾಗಿವೆ ಎಂಬ ಅರಿವಿದೆ. ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದು ಹೇಳಿದೆ.
ಪಾಕ್ ಷೇರು ಮಾರುಕಟ್ಟೆ ತತ್ತರ; ಒಂದೇ ದಿನ 6,200 ಅಂಕ ಕುಸಿತ
ಕರಾಚಿ: ಕಾಶ್ಮೀರದ ಪಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆ ಬಳಿಕ ಪಾಕಿಸ್ತಾನ ಷೇರುಮಾರುಕಟ್ಟೆ ತತ್ತರಿಸಿದ್ದು, ಒಂದೇ ದಿನ 6,200 ಅಂಕಗಳ ಕುಸಿತವಾಗಿದೆ.ಪಾಕಿಸ್ತಾನ ಷೇರು ವಿನಿಮಯ ಕೇಂದ್ರ ಪಿಎಸ್‌ಎಕ್ಸ್ ಸೂಚ್ಯಂಕ ಬುಧವಾರ ಒಂದೇ ದಿನ ಬರೊಬ್ಬರಿ 6560.82 ಅಂಕಗಳು ಅಂದರೆ ಶೇ.5.78ರಷ್ಟು ಕುಸಿತ ಕಂಡು 107,007.68 ಅಂಕಗಳಿಗೆ ತಲುಪಿತು. ಹಿಂದಿನ ದಿನ 112,403.94 ಅಂಕಗಳಷ್ಟಿತ್ತು. ಭಾರಿ ಕುಸಿತದಿಂದಾಗಿ, ಮಾರುಕಟ್ಟೆಯನ್ನು ತಕ್ಷಣವೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.