ಸಾರಾಂಶ
ಭಾರತವನ್ನು ಪರಮಾಣು ಬಾಂಬ್ ದಾಳಿಯ ಬ್ಲ್ಯಾಕ್‌ಮೇಲ್‌ಗೆ ಗುರಿ ಮಾಡುತ್ತಿರುವ ಪಾಕಿಸ್ತಾನ ವಿರುದ್ಧ ಕಿಡಿಕಾರಿರುವ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್
ಶ್ರೀನಗರ: ಭಾರತವನ್ನು ಪರಮಾಣು ಬಾಂಬ್ ದಾಳಿಯ ಬ್ಲ್ಯಾಕ್‌ಮೇಲ್‌ಗೆ ಗುರಿ ಮಾಡುತ್ತಿರುವ ಪಾಕಿಸ್ತಾನ ವಿರುದ್ಧ ಕಿಡಿಕಾರಿರುವ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ‘ರಾಕ್ಷಸ ದೇಶದ ಬಳಿ ಪರಮಾಣು ಅಸ್ತ್ರ ಇರುವುದು ಸುರಕ್ಷಿತವೇ’ ಎಂದು ಜಾಗತಿಕ ಸಮುದಾಯವನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಪಾಕಿಸ್ತಾನವನ್ನು ಪರಮಾಣು ಬಾಂಬ್ ಇರುವ ಭಿಕ್ಷುಕ ದೇಶ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿ ಪಂಜಾಬ್‌ನ ಆದಂಪುರ ವಾಯುನೆಲೆಗೆ ಭೇಟಿ ಬೆನ್ನಲ್ಲೇ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಕಾಶ್ಮೀರದ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿದ್ದರು. ‘ಆಪರೇಷನ್ ಸಿಂದೂರ’ ಬಳಿಕದ ಈ ಮೊದಲ ಭೇಟಿ ವೇಳೆ ಸೈನಿಕರೊಂದಿಗೆ ಸಂವಾದ ನಡೆಸಿದ ಸಿಂಗ್, ಅವರ ಪರಾಕ್ರಮ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಯೋಧರನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ರಾಷ್ಟ್ರದ ಅಣ್ವಸ್ತ್ರಗಳ ಬಗ್ಗೆ ಮಾತನಾಡಿದ್ದು ‘ ರಾಕ್ಷಸ ಮತ್ತು ಬೇಜವಾಬ್ದಾರಿ ರಾಷ್ಟ್ರವಾಗಿರುವ ಪಾಕಿಸ್ತಾನದ ಕೈಯಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುವುದು ಸುರಕ್ಷಿತವೇ? ಎಂದು ಜಗತ್ತಿಗೆ ಕೇಳಲು ಬಯಸುತ್ತೇನೆ. ಅದು ಭಾರತಕ್ಕೆ ಎಷ್ಟು ಬೇಜವಾಬ್ದಾರಿಯಿಂದ ಪರಮಾಣು ಬೆದರಿಕೆಗಳನ್ನು ಹಾಕಿದೆ ಎಂಬುದನ್ನು ಇಡೀ ಜಗತ್ತು ನೋಡಿದೆ’ ಎಂದರು. ಇದೇ ವೇಲೆ ಅವರು ‘ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ( ಐಎಇಒ) ಮೇಲ್ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಪಾಕ್ ಭಯೋತ್ಪಾದನೆ ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದ ಸಚಿವರು, ‘ಗಡಿಯಾಚೆಗಿನ ಭಯೋತ್ಪಾದನೆ ವಿಷಯದಲ್ಲಿ ನಮ್ಮ ತಾಳ್ಮೆಯ ಮಿತಿ ಮೀರಿದೆ. ನಾವು ಪರಮಾಣು ಬ್ಲ್ಯಾಕ್‌ಮೆಲ್ ಅನ್ನು ಸಹಿಸುವುದಿಲ್ಲ. ಭಯೋತ್ಪಾದನೆಯನ್ನು ನಿರ್ಣಾಯಕ ರೀತಿಯಲ್ಲಿ ದಮನ ಮಾಡಲು ನಾವು ಸಜ್ಜಾಗಿದ್ದೇವೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.
ಜೊತೆಗೆ ಆಪರೇಷನ್ ಸಿಂದೂರವು ಉಗ್ರ ಸಂಘಟನೆಗಳು ಮತ್ತು ಪಾಕಿಸ್ತಾನದಲ್ಲಿರುವ ಅದರ ಯಜಮಾನರಿಗೆ ನಾವು ಎಲ್ಲಿಯೂ ಸುರಕ್ಷಿತವಲ್ಲ ಎಂಬುದರ ಸಂದೇಶ. ಅವರು ಪಹಲ್ಗಾಂ ದಾಳಿ ನಡೆಸಿ ನಮ್ಮ ಹಣೆಯ ಮೇಲೆ ದಾಳಿ ಮಾಡಿದರು. ನಾವು ಅವರ ಎದೆಯ ಮೇಲೆ ದಾಳಿ ಮಾಡಿದ್ದೇವೆ. ಸದ್ಯ ಪಾಕಿಸ್ತಾನ ಗಾಯ ಗುಣಪಡಿಸುವ ಏಕೈಕ ಮಾರ್ಗ ವೆಂದರೆ ಭಾರತ ವಿರೋಧಿ ಮತ್ತು ಉಗ್ರ ಸಂಘಟನೆಗಳು ಆಶ್ರಯ ನೀಡುವುದು ನಿಲ್ಲಿಸುವುದು’ ಎಂದರು.
ಭಿಕ್ಷುಕ ದೇಶ:
ಇದೇ ವೇಳೆ ಪಾಕಿಸ್ತಾನದ ದಯನೀಯ ಆರ್ಥಿಕ ಪರಿಸ್ಥಿತಿ ಬಗ್ಗೆ ವ್ಯಂಗ್ಯವಾಡಿದ ರಾಜ್‌ನಾಥ್, ‘ಅವರ (ಪಾಕ್) ಬಗ್ಗೆ ನಾವು ಹೇಳುವುದೇನಿದೆ. ಭಿಕ್ಷೆ ಬೇಡುವುದರಲ್ಲಿನ ಅವರ ಅಜ್ಞಾನ ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ಪಾಕಿಸ್ತಾನ ಎಲ್ಲಿ ನಿಲ್ಲುತ್ತದೆಯೋ ಅಲ್ಲಿಂದಲೇ ಭಿಕ್ಷುಕರ ಸಾಲು ಆರಂಭವಾಗುತ್ತದೆ. ನಾವು ಬಡ ದೇಶಗಳಿಗೆ ನೆರವಾಗಲೆಂದು ಐಎಂಎಫ್‌ಗೆ ಸಾಲ ನೀಡುತ್ತೇವೆ. ಮತ್ತೊಂದೆಡೆ ಪಾಕಿಸ್ತಾನ ಸಾಲದ ಹಣಕ್ಕಾಗಿ ಐಎಂಎಫ್ ಮುಂದೆ ಅಂಗಲಾಚುತ್ತದೆ’ ಎಂದು ಹೇಳಿದ್ದಾರೆ.