ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಮಾಜಿ ಮುಖ್ಯಸ್ಥ, ನಿವೃತ್ತ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ವಿರುದ್ಧದ ದುಷ್ಕೃತ್ಯ ಮತ್ತು ಸೇವಾ ನಿಯಮಗಳ ಉಲ್ಲಂಘನೆ ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಲಯ 14 ವರ್ಷಗಳ ಕಠಿಣ ಜೈಲುಶಿಕ್ಷೆ ವಿಧಿಸಿದೆ.
ಇಸ್ಲಾಮಾಬಾದ್: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಮಾಜಿ ಮುಖ್ಯಸ್ಥ, ನಿವೃತ್ತ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ವಿರುದ್ಧದ ದುಷ್ಕೃತ್ಯ ಮತ್ತು ಸೇವಾ ನಿಯಮಗಳ ಉಲ್ಲಂಘನೆ ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಲಯ 14 ವರ್ಷಗಳ ಕಠಿಣ ಜೈಲುಶಿಕ್ಷೆ ವಿಧಿಸಿದೆ. ಪಾಕ್‌ನ ಗುಪ್ತಚರ ಸಂಸ್ಥೆಯ ಇತಿಹಾಸದಲ್ಲಿಯೇ ಅತ್ಯಂತ ಪ್ರಭಾವಿ ನಾಯಕ ಎನಿಸಿಕೊಂಡಿದ್ದ ಫೈಜ್‌ಗೆ ಮಿಲಿಟರಿಯ ಸಾರ್ವಜನಿಕ ವ್ಯವಹಾರಗಳ ವಿಭಾಗವಾದ ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ (ಎಫ್‌ಜಿಸಿಎಂ) ಕಠಿಣ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ರಾಜಕೀಯ ಚಟುವಟಿಕೆಯಲ್ಲಿ ತೊಡಗುವಿಕೆ, ರಾಜ್ಯದ ಭದ್ರತೆಗೆ ವಿರುದ್ಧವಾಗಿ ರಹಸ್ಯ ಕಾಯ್ದೆಗಳ ಉಲ್ಲಂಘನೆ, ಅಧಿಕಾರ ಮತ್ತು ಸರ್ಕಾರಿ ಸಂಪನ್ಮೂಲಗಳ ದುರ್ಬಳಕೆ ಮತ್ತು ನಷ್ಟ ಸೇರಿ ಒಟ್ಟು 4 ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆ ಕಠಿಣ ಶಿಕ್ಷೆ ವಿಧಿಸಲಾಗಿದೆ.
==ಅರುಣಾಚಲದಲ್ಲಿ ಟ್ರಕ್ ಅಪಘಾತಕ್ಕೆ 18 ಬಲಿ: 2 ದಿನ ಬಳಿಕ ಬೆಳಕಿಗೆ
ತಿನ್ಸುಕಿಯಾ/ದಿಬ್ರೂಗಢ: ಟ್ರಕ್ 1000 ಅಡಿ ಆಳದ ಕಣಿವೆಗೆ ಉರುಳಿದ ಪರಿಣಾಮ 18 ಕಾರ್ಮಿಕರು ಸಾವನ್ನಪ್ಪಿ, ನಾಲ್ವರು ನಾಪತ್ತೆಯಾದ ಘಟನೆ ಅರುಣಾಚಲಪ್ರದೇಶದ ಅಂಜಾವ್ ಜಿಲ್ಲೆಯ ಹಯುಲಿಯಾಂಗ್-ಚಾಗ್ಲಗಂ ರಸ್ತೆಯಲ್ಲಿ ನಡೆದಿದೆ. ಅರುಣಾಚಲ ಪ್ರದೇಶ ತಿನ್ಸುಕಿಯಾದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಸ್ಸಾಂನ 22 ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಡಿ.8ರಂದೇ ಈ ಘಟನೆ ನಡೆದಿದ್ದು, ದುರಂತ ನಡೆದ 2 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಬದುಕುಳಿದಿದ್ದ ಓರ್ವ ವ್ಯಕ್ತಿ ಕಮರಿಯಿಂದ ಮೇಲೆ ಬಂದು ಕುಟುಂಬಸ್ಥರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ಆ ಬಳಿಕ ಘಟನೆ ಬಯಲಾಗಿದೆ.
==ಡಾಲರ್ ಎದುರು ರುಪಾಯಿ ಮೌಲ್ಯ ₹90.32ಗೆ ಕುಸಿತ: ಇದು ಸಾರ್ವಕಾಲಿಕ ಕನಿಷ್ಠ
ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ, ಅಮೆರಿಕದ ಡಾಲರ್ ಎದುರು ರುಪಾಯಿ ಮೌಲ್ಯದ ಕುಸಿತ ಮುಂದುವರಿದಿದ್ದು, ಗುರುವಾರ 38 ಪೈಸೆ ಕುಸಿತವಾಗಿ 90.32 ರು.ಗೆ ತಲುಪಿದೆ. ಇದು ರುಪಾಯಿ ಮೌಲ್ಯದ ಸಾರ್ವಕಾಲಿಕ ಕನಿಷ್ಠ ಮೊತ್ತವಾಗಿದೆ. ಬುಧವಾರ, ರುಪಾಯಿ ಮೌಲ್ಯವು 7 ಪೈಸೆ ಕುಸಿತ ಕಂಡು 89.94ಕ್ಕೆ ತಲುಪಿತ್ತು. ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಇರುವ ಅನಿಶ್ಚಿತತೆಯು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ. ಇದು ರುಪಾಯಿ ಮೌಲ್ಯದ ಇಳಿಕೆಗೆ ಕಾರಣವಾಗಿದೆ ಎನ್ನಲಾಗಿದೆ.
==ಯೂನಸ್ ಆಡಳಿತದ ಬಾಂಗ್ಲಾದಲ್ಲಿ ಫೆ.12ಕ್ಕೆ ಸಾರ್ವತ್ರಿಕ ಚುನಾವಣೆ
ಢಾಕಾ: ಕಳೆದೊಂದು ವರ್ಷದಿಂದ ಚುನಾವಣೆ ನಡೆಯದೆ, ಅರಾಜಕತೆ, ಮಾಜಿ ಪ್ರಧಾನಿ ಶೇಖ್ ಹಸೀನಾ ಉಚ್ಛಾಟನೆಗೆ ಸಾಕ್ಷಿಯಾಗಿದ್ದ ಬಾಂಗ್ಲಾದೇಶದಲ್ಲಿ ಮುಂದಿನ ವರ್ಷ ಫೆ.12ರಂದು ಚುನಾವಣೆ ಘೋಷಣೆಯಾಗಿದೆ. ಅಲ್ಲಿನ ಮುಖ್ಯ ಚುನಾವಣಾಧಿಕಾರಿ ಎಎಂಎಂ ನಾಸಿರ್ ಉದ್ದೀನ್ ಅವರು ಚುನಾವಣಾ ಘೋಷಣೆ ಮಾಡಿದ್ದು, ಅದೇ ದಿನ ಮೊಹಮ್ಮದ್ ಯೂನಸ್ ಸರ್ಕಾರದ ಬಗ್ಗೆ ಜನಾಭಿಪ್ರಾಯದ ಸಂಗ್ರಹವು ನಡೆಯಲಿದೆ. ಡಿ.29ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಜ.22ರಿಂದ ಪ್ರಚಾರ ಆರಂಭವಾಗಲಿದೆ. ಹಸೀನಾ ಅವರ ಅವಾಮಿ ಲೀಗ್ ನಿಷೇಧಕ್ಕೊಳಗಾಗಿರುವ ಕಾರಣ, ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಿಎನ್‌ಪಿ ಮತ್ತು ಜಮಾತ್ ಇ ಇಸ್ಲಾಮಿ ಪಕ್ಷಗಳು ಈಗಾಗಲೇ 300 ಕ್ಷೇತ್ರಗಳ ಸಂಸತ್ ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ.