ಅಗ್ನಿ ಅವಘಢದಲ್ಲಿ ಪುತ್ರ ಪಾರಾಗಿದ್ದಕ್ಕೆ ತಿರುಪತಿಗೆ ಪವನ್‌ರ ರಷ್ಯನ್‌ ಪತ್ನಿ ಮುಡಿ

| N/A | Published : Apr 15 2025, 12:51 AM IST / Updated: Apr 15 2025, 04:49 AM IST

ಸಾರಾಂಶ

ಸಿಂಗಾಪುರದ ಶಾಲೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಢದಲ್ಲಿ ಗಾಯಗೊಂಡಿದ್ದ ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಪುತ್ರ ಮಾರ್ಕೋ ಶಂಕರ್‌ ಅಪಾಯದಿಂದ ಪಾರಾಗಿ ಭಾರತಕ್ಕೆ ಮರಳಿದ್ದು, ಈ ಬೆನ್ನಲ್ಲೇ ಪವನ್ ಪತ್ನಿ, ರಷ್ಯಾ ಮೂಲದ ಅನ್ನಾ ಕೊನಿಡೇಲಾ ಅವರು ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ.

ತಿರುಪತಿ: ಸಿಂಗಾಪುರದ ಶಾಲೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಢದಲ್ಲಿ ಗಾಯಗೊಂಡಿದ್ದ ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಪುತ್ರ ಮಾರ್ಕೋ ಶಂಕರ್‌ ಅಪಾಯದಿಂದ ಪಾರಾಗಿ ಭಾರತಕ್ಕೆ ಮರಳಿದ್ದು, ಈ ಬೆನ್ನಲ್ಲೇ ಪವನ್ ಪತ್ನಿ, ರಷ್ಯಾ ಮೂಲದ ಅನ್ನಾ ಕೊನಿಡೇಲಾ ಅವರು ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ.

ಸಿಂಗಾಪುರದಲ್ಲಿ ಬೆಂಕಿ ದುರಂತದಲ್ಲಿ ಸಿಲುಕಿದ್ದ ಮಗ ಅಪಾಯದಿಂದ ಪಾರಾದರೆ ತಿರುಪತಿಗೆ ಮುಡಿ ನೀಡುವುದಾಗಿ ಪವನ್ ಪತ್ನಿ ಹರಕೆ ಹೊತ್ತಿದ್ದರು. ಅದರಂತೆ ಭಾರತಕ್ಕೆ ಬಂದಿಳಿದ ಬಳಿಕ ಭಾನುವಾರ ತಿರುಮಲಕ್ಕೆ ಭೇಟಿ ನೀಡಿ ಕೇಶ ಮುಂಡನ ಮಾಡಿಸಿಕೊಂಡು ಹರಕೆ ತೀರಿಸಿದ್ದಾರೆ.

ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಅನ್ನಾ ಟಿಟಿಡಿಯ ನಿಯಮಗಳ ಪ್ರಕಾರ ಹರಕೆ ತೀರಿಸಿದ್ದಾರೆ. ಗಾಯತ್ರಿ ಸದನದಲ್ಲಿ ದೇಗುಲದ ಅಧಿಕಾರಿಗಳ ಸಮ್ಮುಖದಲ್ಲಿ ತಮ್ಮ ನಂಬಿಕೆ ಘೋಷಿಸುವ ಘೋಷಣೆ ಪತ್ರಗಳಿಗೆ ಸಹಿ ಹಾಕಿ, ಮುಡಿಕೊಟ್ಟರು ಎಂದು ಜನಸೇನಾ ಪಕ್ಷ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಯೋಧ್ಯೆ ರಾಮಮಂದಿರ ಸ್ಫೋಟದ ಕುರಿತು ಬೆದರಿಕೆ ಇಮೇಲ್‌: ತನಿಖೆ ಆರಂಭ

ಅಯೋಧ್ಯಾ: ಅಯೋಧ್ಯೆಯ ರಾಮ ಮಂದಿರದ ಭದ್ರತೆಗೆ ಸಂಬಂಧಿಸಿದಂತೆ ರಾಮಮಂದಿರ ಟ್ರಸ್ಟ್‌ ಬೆದರಿಕೆಯ ಇಮೇಲ್‌ ಒಂದನ್ನು ರವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತಮಿಳುನಾಡಿನ ವ್ಯಕ್ತಿಯೊಬ್ಬರು ಇಂಗ್ಲೀಷ್‌ನಲ್ಲಿ ಈ ಇಮೇಲ್ ಸಂದೇಶ ಕಳುಹಿಸಿದ್ದು, ಭಾನುವಾರ ಮಧ್ಯರಾತ್ರಿ ಈ ಸಂದೇಶ ಬಂದಿದೆ ಎನ್ನಲಾಗಿದೆ. ಅದನ್ನು ಹೊರತುಪಡಿಸಿ ಪೊಲೀಸರು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇದುವರೆಗೆ ರಾಮ ಮಂದಿರ ಟ್ರಸ್ಟ್‌, ಭದ್ರತಾ ಸಂಸ್ಥೆಗಳು ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ನಿತ್ಯ 10 ಗಂಟೆ ಕಾಲ ಎನ್‌ಐಎದಿಂದ ಉಗ್ರ ರಾಣಾ ವಿಚಾರಣೆ

ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ತಹಾವುರ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಪ್ರತಿದಿನ 8ರಿಂದ 10 ಗಂಟೆಗಳ ಕಾಲ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಮುಂಬೈ ದಾಳಿಯ ಹಿಂದಿನ ಬಹುದೊಡ್ಡ ಪಿತೂರಿಯನ್ನು ಬಯಲು ಮಾಡಲು ಎನ್‌ಐಎ ಅಧಿಕಾರಿಗಳು ನಿತ್ಯ 8-10 ಗಂಟೆಗಳ ಕಾಲ ರಾಣಾನ ವಿಚಾರಣೆ ನಡೆಸುತ್ತಿದ್ದಾರೆ. ಮುಖ್ಯ ತನಿಖಾಧಿಕಾರಿ ಜಯ ರಾಯ್ ನೇತೃತ್ವದ ತಂಡದಿಂದ ವಿಚಾರಣೆ ನಡೆಯುತ್ತಿದ್ದು, ವಿಚಾರಣೆಯ ಸಮಯದಲ್ಲಿ ರಾಣಾ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾನೆ’ ಎಂದು ಮೂಲಗಳಿಂದ ತಿಳಿದುಬಂದಿದೆ.

ಎಸ್‌ಬಿಐ ಸಾಲದ ಮೇಲಿನ ಬಡ್ಡಿದರ ಶೇ. 0.25 ಇಳಿಕೆ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೋ ದರಗಳನ್ನು ಶೇ.0.25ರಷ್ಟು ಇಳಿಸಿದ ಬೆನ್ನಲ್ಲೇ, ಸಾರ್ವಜನಿಕ ವಲಯದಲ್ಲಿ ದೇಶದ ಅಗ್ರಗಣ್ಯ ಬ್ಯಾಂಕ್‌ ಆದ ಎಸ್‌ಬಿಐ, ಗೃಹ, ವಾಹನ ಮತ್ತು ಇತರೆ ಸಾಲಗಳ ಮೇಲಿನ ಬಡ್ಡಿದರವನ್ನು ಶೇ.0.25ರಷ್ಟು ಇಳಿಕೆ ಮಾಡಿದೆ. ಹೀಗಾಗಿ ಗೃಹ, ವಾಹನ ಮತ್ತು ಇತರೆ ಸಾಲಗಳು ಅಗ್ಗವಾಗಲಿದೆ. ಈ ಕಡಿತದಿಂದಾಗಿ ಇದುವರೆಗೆ ಶೇ.8.50ರಷ್ಟಿದ್ದ ಬಡ್ಡಿದರ ಶೇ.8.25ಕ್ಕೆ ಇಳಿಯಲಿದೆ. ಪರಿಷ್ಕೃತ ದರಗಳು ಏ.15ರಿಂದ ಜಾರಿಗೆ ಬರಲಿದೆ. ಸಾಲದ ಬಡ್ಡಿದರಗಳು ಇಳಿಕೆಯಾದಂತೆ ಠೇವಣಿಗಳ ಮೇಲಿನ ಬಡ್ಡಿದರ ಕೂಡಾ ಇಳಿಕೆಯಾಗಲಿದೆ.

ಕಾರು ಸ್ಫೋಟ, ಮನೆಗೆ ನುಗ್ಗಿ ಥಳಿತ: ಸಲ್ಮಾನ್‌ಗೆ ಮತ್ತೆ ಬೆದರಿಕೆ ಸಂದೇಶ

ಮುಂಬೈ: ನಟ ಸಲ್ಮಾನ್‌ ಖಾನ್‌ಗೆ ಮತ್ತೆ ಜೀವ ಬೆದರಿಕೆ ಬಂದಿದ್ದು, ‘ಸಲ್ಮಾನ್ ಅವರ ಕಾರು ಸ್ಫೋಟಿಸುತ್ತೇವೆ. ಅವರ ಮನೆ ಮೇಲೆ ದಾಳಿ ಮಾಡುತ್ತೇವೆ’ ಎಂದು ಅಪರಿಚಿತರು ಮುಂಬೈ ಟ್ರಾಫಿಕ್ ಪೊಲೀಸರಿಗೆ ಸಂದೇಶ ಕಳುಹಿಸಿದ್ದಾರೆ. ಭಾನುವಾರ ಸಂಚಾರ ಪೊಲೀಸರು ವಾಟ್ಸಾಪ್ ಸಹಾಯವಾಣಿಗೆ ಈ ಬೆದರಿಕೆ ಸಂದೇಶ ಬಂದಿದೆ. 

ಈ ಸಂಬಂಧ ಸಂದೇಶ ಕಳುಹಿಸಿದ ಅಪರಿಚಿತ ವ್ಯಕ್ತಿ ವಿರುದ್ಧ ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಕಳೆದ ಕೆಲ ತಿಂಗಳಲ್ಲಿ ಸಲ್ಮಾನ್ ಗುರಿಯಾಗಿಸಿ ಸಂಚಾರ ಪೊಲೀಸ್‌ ಸಹಾಯವಾಣಿಗೆ ಅನೇಕ ಬೆದರಿಕೆ ಸಂದೇಶ ರವಾನಿಸಲಾಗಿತ್ತು. 

ಜೊತೆಗೆ ಲಾರೆನ್ಸ್‌ ಬಿಷ್ಣೋಯಿ ತಂಡದಿಂದ ಜೀವ ಬೆದರಿಕೆಗಳು ಬಂದಿದ್ದವು. ಅದಾದ ಕೆಲ ದಿನಗಳಲ್ಲಿ ಬಿಷ್ಣೋಯಿ ಸದಸ್ಯರು ಕಳೆದ ಏಪ್ರಿಲ್‌ನಲ್ಲಿ ಸಲ್ಮಾನ್‌ ಖಾನ್ ಬಾಂದ್ರಾ ಮನೆಯ ಹೊರಗೆ ಗುಂಡು ಹಾರಿಸಿದ್ದರು. ಮಾತ್ರವಲ್ಲ, ಪನ್ವೇಲ್‌ನಲ್ಲಿರುವ ತಮ್ಮ ತೋಟದ ಮನೆಗೆ ತೆರಳುತ್ತಿದ್ದಾಗ ಬಿಷ್ಣೋಯಿ ಗ್ಯಾಂಗ್ ಹಿಂಬಾಲಿಸಿ ಹತ್ಯೆಗೆ ಸಂಚು ರೂಪಿಸಿತ್ತು ಎನ್ನುವುದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿತ್ತು.

ಮೇ 1ರಿಂದ ದಿಲ್ಲೀಲಿ 15 ವರ್ಷ ಹಳೆ ವಾಹನಕ್ಕೆ ಇಂಧನ ಇಲ್ಲ

ನವದೆಹಲಿ: ಗಂಭೀರ ವಾಯುಮಾಲಿನ್ಯ ಸಮಸ್ಯೆ ಎದುರಿಸುತ್ತಿರುವ ದೆಹಲಿಯಲ್ಲಿ ಮೇ 1ರಿಂದ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಪೆಟ್ರೋಲ್‌ ಬಂಕ್‌ಗಳಲ್ಲಿ ಇಂಧನ ತುಂಬಿಸದೇ ಇರುವ ನಿಯಮ ಜಾರಿಗೆ ಬರಲಿದೆ.

ಅದರ ಭಾಗವಾಗಿ ಇದೀಗ ದೆಹಲಿಯಲ್ಲಿರುವ 500 ಪೆಟ್ರೋಲ್‌ ಪಂಪ್‌ಗಳ ಪೈಕಿ 477ರಲ್ಲಿ ವಾಹನಗಳ ಆಯಸ್ಸನ್ನು ಪತ್ತೆಮಾಡುವ ‘ಸ್ವಯಂಚಾಲಿತ ನಂಬರ್‌ ಪ್ಲೇಟ್‌ ಗುರುತಿಸುವ ಕ್ಯಾಮೆರಾ’(ಎಎನ್‌ಪಿಆರ್‌) ಉಪಕರಣಗಳನ್ನು ಅಳವಡಿಸಲಾಗಿದೆ.ಎಎನ್‌ಪಿಆರ್‌ ಕೆಲಸ ಹೇಗೆ?:

ಇಂಧನ ಭರ್ತಿಗೆ ಬರುವ ಎಲ್ಲಾ ವಾಹನಗಳ ನಂಬರ್‌ ಪ್ಲೇಟ್‌ಗಳನ್ನು ಎಎನ್‌ಪಿಆರ್‌ ಸ್ಕ್ಯಾನ್‌ ಮಾಡುತ್ತದೆ ಹಾಗೂ ಆ ಮೂಲಕ ವಾಹನ ನೋಂದಣಿ ಮಾಹಿತಿ ಪಡೆಯುತ್ತದೆ. ನಿಯಮದ ಪ್ರಕಾರ 15 ವರ್ಷ ಹಳೆದ ಪೆಟ್ರೋಲ್‌ ಮತ್ತು 10 ವರ್ಷ ಹಳೆಯ ಡೀಸೆಲ್‌ ವಾಹನಗಳನ್ನು ಬಳಸುವಂತಿಲ್ಲ.