ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ ಹಿನ್ನೆಲೆಯಲ್ಲಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ದರ 87 ಪೈಸೆ ಮತ್ತು ಡೀಸೆಲ್ ದರ 91 ಪೈಸೆಯಷ್ಟು ಹೆಚ್ಚಿಸಲಾಗಿದೆ. ಈ ಮೂಲಕ ಕಳೆದ 10 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ 5 ರು.ನಷ್ಟು ಹೆಚ್ಚಳವಾದಂತಾಗಿದೆ.
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ ಹಿನ್ನೆಲೆಯಲ್ಲಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ದರ 87 ಪೈಸೆ ಮತ್ತು ಡೀಸೆಲ್ ದರ 91 ಪೈಸೆಯಷ್ಟು ಹೆಚ್ಚಿಸಲಾಗಿದೆ. ಈ ಮೂಲಕ ಕಳೆದ 10 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ 5 ರು.ನಷ್ಟು ಹೆಚ್ಚಳವಾದಂತಾಗಿದೆ.
ಇದರ ಜತೆಗೆ ಸಿಎನ್‌ಜಿ ದರವನ್ನು ಕೂಡ ಕೆ.ಜಿ.ಗೆ 1 ರು.ನಷ್ಟು ಹೆಚ್ಚಿಸಲಾಗಿದೆ, ಈ ಮೂಲಕ ಒಟ್ಟಾರೆ ಕೆಲ ದಿನಗಳಿಂದ ಸಿಎನ್‌ಜಿ ದರ ಪ್ರತಿ ಕೆ.ಜಿ.ಗೆ 4 ರು.ನಷ್ಟು ಹೆಚ್ಚಿದಂತಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ದುಪ್ಪಟ್ಟಾದರೂ ಭಾರತದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದವು. ಆದರೆ, ಮೇ 15ರಿಂದ ತೈಲ ಮಾರಾಟ ಕಂಪನಿಗಳು ಅನಿವಾರ್ಯವಾಗಿ ಗ್ರಾಹಕರ ಮೇಲೆ ತೈಲ ದರ ಏರಿಕೆಯ ಶಾಕ್ ಅನ್ನು ವರ್ಗಾಯಿಸಲು ಆರಂಭಿಸಿವೆ.
ಬೆಂಗಳೂರಲ್ಲಿ ಎಷ್ಟಿದೆ ಪೆಟ್ರೋಲ್ ದರ?:
ಇದೀಗ 3ನೇ ಬಾರಿಯ ದರ ಹೆಚ್ಚಳ ಬಳಿಕ ಬೆಂಗಳೂರಿನಲ್ಲಿ ಪೆಟ್ರೋಲ್ ದರ 108.09, ಡೀಸೆಲ್ ದರ 95.99 ರು.ನಷ್ಟಾಗಿದೆ. ಈ ಹಿಂದೆ ಮೇ 15ರಂದು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತಲಾ 3 ರು.ನಷ್ಟು ಹೆಚ್ಚಿಸಲಾಗಿತ್ತು. ಬಳಿಕ ಮೇ 19ರಂದು ಮತ್ತೆ 94 ಪೈಸೆಯಷ್ಟು ದರ ಹೆಚ್ಚಿಸಲಾಗಿತ್ತು.
ನಿಲ್ಲದ ನಷ್ಟ:
ಬೆಲೆ ಏರಿಕೆಯ ಹೊರತಾಗಿಯೂ, ಪೆಟ್ರೋಲ್ ರೀಟೇಲ್ ಕಂಪನಿಗಳು ಗಮನಾರ್ಹ ನಷ್ಟವನ್ನು ಅನುಭವಿಸುತ್ತಲೇ ಇದ್ದಾರೆ. ಮೇ 15ರಂದು ತೈಲ ಬೆಲೆ ಹೆಚ್ಚಿಸಿದಾಗ ನಷ್ಟ ಶೇ.25ರಷ್ಟು ತಗ್ಗಿತ್ತು. ಆದರೂ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಈ ಹಿಂದಿನ 1000 ಕೋಟಿ ರು. ಬದಲು ಇನ್ನೂ ದಿನಕ್ಕೆ ಸುಮಾರು 750 ಕೋಟಿ ರೂ. ನಷ್ಟ ಅನುಭವಿಸುತ್ತಿದ್ದವು
ಕ್ರಿಸಿಲ್ ಪ್ರಕಾರ, ತೈಲ ಮಾರುಕಟ್ಟೆ ಕಂಪನಿಗಳು ಹಿಂದಿನ ಏರಿಕೆಯ ನಂತರವೂ ಪೆಟ್ರೋಲ್ ಮೇಲೆ ಲೀಟರ್‌ಗೆ ಸುಮಾರು 10 ರು. ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 13 ರು. ನಷ್ಟ ಅನುಭವಿಸುತ್ತಿವೆ.
ಖರ್ಗೆ ಆಕ್ರೋಶ:
ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮೂರನೇ ಬಾರಿ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಸಾರ್ವಜನಿಕರ ಆದಾಯವನ್ನು ಹಂತ ಹಂತವಾಗಿ ಲೂಟಿ ಮಾಡುತ್ತಿದೆ. ಸರ್ಕಾರದಲ್ಲಿ ನಾಯಕತ್ವದ ಕೊರತೆ ಇದೆ. ಇತರೆ ದೇಶಗಳು ಸಾರ್ವಜನಿಕರಿಗೆ ರಿಯಾಯ್ತಿ ನೀಡುತ್ತಿರುವಾಗ ನಮ್ಮ ಸರ್ಕಾರವು ಜನರನ್ನು ಲೂಟಿ ಮಾಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈರ ದರ ಇಳಿಕೆಯಾದಾಗಲೂ ಅವರು ಅದರ ಲಾಭ ಸಾರ್ವಜನಿಕರಿಗೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
--
ಪೆಟ್ರೋಲ್ ದರ ಟಾಪ್ 10 ಸಿಟಿ
(ಪ್ರತಿ ಲೀಟರ್‌ಗೆ)
1. ಹೈದರಾಬಾದ್₹112.81
2. ತಿರುವನಂತಪುರಂ₹112.64
3. ಪಟನಾ₹111
4. ಕೋಲ್ಕತ್ತಾ₹110.64
5. ಜೈಪುರ ₹109.84
6. ಮುಂಬೈ₹108.45
7. ಬೆಂಗಳೂರು₹108.09
8. ಭುವನೇಶ್ವರ₹106.18
9. ಚೆನ್ನೈ₹105.33
10. ಗುವಾಹಟಿ₹105.1
===
ಡೀಸೆಲ್
1.ತಿರುವನಂತಪುರಂ₹101.55
2. ಹೈದರಾಬಾದ್₹100.94
3. ಭುವನೇಶ್ವರ ₹97.80
4. ಪಟನಾ₹ 97.03
5. ಕೋಲ್ಕತಾ₹ 97.02
6. ಚೆನ್ನೈ₹97
7. ಬೆಂಗಳೂರು₹95.99
8. ಜೈಪುರ₹ 95.05
9. ಮುಂಬೈ₹95.02
10. ಗುವಾಹಟಿ₹94.03
ಬೆಂಗಳೂರಲ್ಲಿ ದರ ಎಷ್ಟು?
ಪೆಟ್ರೋಲ್₹108.09
ಡೀಸೆಲ್₹95.99
