ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಲೀ.ಗೆ ತಲಾ 3 ರು.ನಷ್ಟು ಹೆಚ್ಚಳ ಮಾಡಿವೆ.

 ನವದೆಹಲಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಲೀ.ಗೆ ತಲಾ 3 ರು.ನಷ್ಟು ಹೆಚ್ಚಳ ಮಾಡಿವೆ. ಇದು ಕಳೆದ 4 ವರ್ಷದಲ್ಲೇ ಮೊದಲ ದರ ಹೆಚ್ಚಳವಾಗಿದೆ. ಇನ್ನೊಂದೆಡೆ ದೆಹಲಿ ಮತ್ತು ಮುಂಬೈನಲ್ಲಿ ಸಿಎನ್‌ಜಿ ದರ ಕೂಡಾ ಕೆಜಿಗೆ 2 ರು.ನಷ್ಟು ಹೆಚ್ಚಳ ಮಾಡಲಾಗಿದೆ.

ಏರಿಕೆ ಬಳಿಕ ಪೆಟ್ರೋಲ್‌ ದರ ಬೆಂಗಳೂರಿನಲ್ಲಿ 106.17 ರು. ದೆಹಲಿಯಲ್ಲಿ 97.77, ಮುಂಬೈನಲ್ಲಿ 106.68, ಕೋಲ್ಕತಾದಲ್ಲಿ 108.74, ಚೆನ್ನೈನಲ್ಲಿ 103.67 ತಲುಪಿದೆ. ಇನ್ನು ಡೀಸೆಲ್‌ ದರ ಬೆಂಗಳೂರಿನಲ್ಲಿ 94.10 ರು., ಮುಂಬೈನಲ್ಲಿ 90.67 ರು.,ಗೆ ತಲುಪಿದೆ.

ಶುಕ್ರವಾರ ಮಾಡಿದ ಏರಿಕೆಯ ಹೊರತಾಗಿಯೂ ತೈಲ ಕಂಪನಿಗಳು ಈಗಲೂ ಪ್ರತಿ ಲೀಟರ್‌ಗೆ ಪೆಟ್ರೋಲ್‌ ಮೇಲೆ 11 ರು. ಮತ್ತು ಡೀಸೆಲ್‌ ಮೇಲೆ 39 ರು.ನಷ್ಟ ಅನುಭವಿಸುತ್ತಿವೆ.

ಏರಿಕೆಗೆ ಕಾರಣ?:

ಫೆ.28ರಂದು ಇರಾನ್‌ ಮತ್ತು ಅಮೆರಿಕ ಯುದ್ಧ ಆರಂಭದ ವೇಳೆ ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ 70 ಡಾಲರ್‌ ಆಸುಪಾಸು ಇತ್ತು. ಪ್ರಸಕ್ತ ಅದು 100 ಡಾಲರ್‌ಗೆ ಗಡಿದಾಟಿದೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಪ್ರತಿ ತಿಂಗಳು 30000 ಕೋಟಿ ರು.ಗೂ ಹೆಚ್ಚು ನಷ್ಟವಾಗುತ್ತಿದೆ. ಈ ಲೆಕ್ಕಾಚಾರದಲ್ಲಿ 3 ತಿಂಗಳಲ್ಲಿ 1 ಲಕ್ಷ ಕೋಟಿ ರು. ಹೊರೆಬಿದ್ದಿದೆ. ಆದರೆ ಗ್ರಾಹಕರ ಹಿತದೃಷ್ಟಿಯಿಂದ ಸರ್ಕಾರ ಈವರೆಗೂ ದರ ಏರಿಕೆಗೆ ಹೋಗಿರಲಿಲ್ಲ.

ಆದರೆ ಬಿಕ್ಕಟ್ಟು ಸದ್ಯ ನಿವಾರಣೆಯಾಗುವ ಸಾಧ್ಯತೆ ಕಂಡುಬರದ ಕಾರಣ ಮತ್ತು ಕಚ್ಚಾತೈಲ ಬೆಲೆ ಏರಿಕೆ ದೇಶದ ಅರ್ಥವ್ಯವಸ್ಥೆ ಮೇಲೆ ಅಡ್ಡಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಇದೀಗ ದರ ಏರಿಕೆ ನಿರ್ಧಾರ ಕೈಗೊಂಡಿದೆ. ಇದು ಕಳೆದ 4 ವರ್ಷಗಳಲ್ಲೇ ಪೆಟ್ರೋಲ್, ಡೀಸೆಲ್‌ ದರ ಹೆಚ್ಚಳ ಮೊದಲ ಉದಾಹರಣೆಯಾಗಿದೆ. ಕಡೆಯ ಬಾರಿಗೆ 2022ರ ಮೇ ತಿಂಗಳಲ್ಲಿ ದರ ಏರಿಕೆ ಮಾಡಲಾಗಿತ್ತು.

ಅತ್ಯಲ್ಪ ಏರಿಕೆ

ಕಳೆದ 76 ದಿನಗಳಿಂದ ಸರ್ಕಾರ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟದಂತೆ ನೋಡಿಕೊಂಡಿದೆ. ಇದೀಗ ಶೇ.3ರಷ್ಟು ಅತ್ಯಲ್ಪ ಏರಿಕೆ ಮಾಡಿದೆ. ಕಳೆದ 3 ತಿಂಗಳಲ್ಲಿ ಪಾಕ್‌ನಲ್ಲಿ ಪೆಟ್ರೋಲ್‌ ಬೆಲೆ ಶೇ.55, ಮಲೇಷ್ಯಾದಲ್ಲಿ ಶೇ.56, ಅಮೆರಿಕದಲ್ಲಿ ಶೇ.45ರಷ್ಟು ಏರಿಕೆಯಾಗಿದೆ. ಕೆಲವು ದೇಶಗಳಲ್ಲಿ ಡೀಸೆಲ್‌ ದರ ಶೇ.50ರಿಂದ ಶೇ.100ರವರೆಗೂ ಹೆಚ್ಚಳ ಮಾಡಲಾಗಿದೆ.

- ಅಮಿತ್‌ ಮಾಳವೀಯ, ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ

ಅಸಮರ್ಥ ನಾಯಕತ್ವ

ದೇಶದ ಪ್ರಸಕ್ತ ಆರ್ಥಿಕ ಪರಿಸ್ಥಿತಿಗೆ ಜಾಗತಿಕ ಪರಿಣಾಮಗಳ ಜೊತೆಗೆ ಮೋದಿ ಸರ್ಕಾರದಲ್ಲಿನ ನಾಯಕತ್ವದ ಕೊರತೆ, ಯಾವುದೇ ದೂರದರ್ಶಿತ್ವ ಇಲ್ಲದೇ ಇರುವುದು ಮತ್ತು ಅಸಮರ್ಥ ಆಡಳಿತವೂ ಕಾರಣ. ಇದು ಸರ್ಕಾರವೇ ಸೃಷ್ಟಿಸಿಕೊಂಡ ಸಮಸ್ಯೆ. ಇದರ ಪರಿಣಾಮವನ್ನು ದೇಶದ ಜನತೆ ಹೊರಬೇಕಾಗಿ ಬಂದಿದೆ. ತೈಲ ದರ ಏರಿಕೆ ಜನಸಾಮಾನ್ಯರಿಂದ ಹಿಡಿದು ಅಡುಗೆ ಮನೆವರೆಗೂ ತಲುಪಲಿದೆ.

- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ

- ದರ ಏರಿಸಿದರೂ ತೈಲ ಕಂಪನಿಗಳಿಗೆ ನಿಲ್ಲದ ನಷ್ಟ

- ಪೆಟ್ರೋಲ್‌ಗೆ 11 ರು., ಡೀಸೆಲ್‌ಗೆ 39 ರು. ಹಾನಿ

ಬೆಂಗಳೂರಲ್ಲಿ ಪರಿಷ್ಕೃತ ದರ

ತೈಲ ಹಳೆಯ ದರ ಹೊಸ ದರ

ಪೆಟ್ರೋಲ್‌ ₹102.92 ₹106.17

ಡೀಸೆಲ್‌ ₹90.99 ₹94.10

ಮೋದಿ ರಾಜೀನಾಮೆ ನೀಡಲಿ

ಬೆಲೆ ಏರಿಕೆ ಜನಸಾಮಾನ್ಯರ ಬದುಕು ಅಸ್ತವ್ಯಸ್ತಗೊಳಿಸುತ್ತಿದ್ದು, ಕೂಡಲೇ ನಿರ್ಣಯ ಹಿಂಪಡೆಯಬೇಕು. ಜತೆಗೆ ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳುತ್ತಿರುವುದರ ಹೊಣೆ ಹೊತ್ತು ಮೋದಿ ರಾಜೀನಾಮೆ ನೀಡಬೇಕು.

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಅಂತಾರಾಷ್ಟ್ರೀಯ ಬಿಕಟ್ಟಿನ ಪರಿಸ್ಥಿತಿ ನಿಭಾಯಿಸುವಲ್ಲಿ ಮೋದಿ ವಿಫಲರಾಗಿದ್ದು, ಅದಕ್ಕಾಗಿ ದೇಶಕ್ಕೆ ಬೆಲೆ ಏರಿಕೆ ಕೊಡುಗೆ ನೀಡಿದ್ದಾರೆ. ಇದರಿಂದ ನಿತ್ಯ ಜೀವನ ಮಾಡುವುದು ಹೇಗೆಂದು ಜನರಿಗೆ ತೋಚದಾಗಿದೆ.

- ಡಿ.ಕೆ. ಶಿವಕುಮಾರ್‌, ಡಿಸಿಎಂ

ಖಾಸಗಿ ಬಸ್‌ ದರ 30% ಹೆಚ್ಚಳ

ಬೆಂಗಳೂರು: ಡೀಸೆಲ್‌ ಬೆಲೆ ಹೆಚ್ಚಳದ ಬೆನ್ನಲ್ಲೇ ಖಾಸಗಿ ಬಸ್‌ ಮಾಲೀಕರು ಬಸ್‌ ಪ್ರಯಾಣ ದರವನ್ನು ಶುಕ್ರವಾರ ರಾತ್ರಿಯಿಂದಲೇ ಅನ್ವಯವಾಗುವಂತೆ ಶೇ. 10ರಿಂದ 30ರವರೆಗೆ ಹೆಚ್ಚಿಸಿದ್ದಾರೆ. ಇದರಿಂದ 1000 ರು. ಟಿಕೆಟ್ ದರ ಇದ್ರೆ, ಸುಮಾರು 1200 ರು.ಗೆ ಏರಲಿದೆ.

--ಕೆಎಸ್ಸಾರ್ಟಿಸಿ ಬಸ್‌ ದರ ಹೆಚ್ಚಳವಿಲ್ಲ

ಉಡುಪಿ: ‘ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯಾಗಿದ್ದರೂ ಸದ್ಯಕ್ಕೆ ಸರ್ಕಾರಿ ಬಸ್ಸುಗಳ ದರ ಏರಿಕೆ ಮಾಡುವ ಬಗ್ಗೆ ಯೋಚಿಸಿಲ್ಲ. ಇದರಿಂದ ಸಾರಿಗೆ ಸಂಸ್ಥೆಗಳ ಮೇಲೆ ಹೊರೆಯಾದರೂ, ಪ್ರಯಾಣಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.