ಸಲ್ಮಾನ್‌ ಮನೆ ದಾಳಿಗೆ ಅಮೆರಿಕದಲ್ಲಿ ಪ್ಲ್ಯಾನಿಂಗ್‌

| Published : Apr 16 2024, 01:03 AM IST / Updated: Apr 16 2024, 06:33 AM IST

ಸಾರಾಂಶ

ಖ್ಯಾತ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಮುಂಬೈ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ಮಾಡಲು ಅಮೆರಿಕದಲ್ಲಿ ರೂಪುರೇಷೆ ಸಿದ್ಧಗೊಂಡಿತ್ತು ಎಂಬುದಾಗಿ ತಿಳಿದುಬಂದಿದೆ.

ವದೆಹಲಿ: ಖ್ಯಾತ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಮುಂಬೈ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ಮಾಡಲು ಅಮೆರಿಕದಲ್ಲಿ ರೂಪುರೇಷೆ ಸಿದ್ಧಗೊಂಡಿತ್ತು ಎಂಬುದಾಗಿ ತಿಳಿದುಬಂದಿದೆ.

ಅಮೆರಿಕದಲ್ಲಿರುವ ಕುಖ್ಯಾತ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಸೋದರ ಅನ್ಮೋಲ್‌ ಈ ಕೊಲೆಯ ಹಿಂದಿನ ಮಾಸ್ಟರ್‌ಮೈಂಡ್‌ ಎನ್ನಲಾಗಿದೆ. ಅನ್ಮೋಲ್‌ ತಾನೇ ದಾಳಿ ಮಾಡಿಸಿದ್ದು ಎಂದು ಭಾನುವಾರ ಹೇಳಿದ್ದ.

ಹೇಗೆ ನಡೆದಿತ್ತು ಸ್ಕೆಚ್‌?:

ಅನ್ಮೋಲ್‌ ಬಿಷ್ಣೋಯಿ ಅಮೆರಿಕದಲ್ಲಿ ಶಾರ್ಪ್‌ ಶೂಟರ್‌ಗಳಾಗಿದ್ದ ಭಾರತ ಮೂಲದ ರೋಹಿತ್‌ ಗೋದಾರ ಮತ್ತು ವಿಶಾಲ್‌ ಅವರನ್ನು ಈ ಕುಕೃತ್ಯ ಮಾಡಲು ಸಂಪರ್ಕಿಸಿದ್ದ ಎನ್ನಲಾಗಿದೆ. ರೋಹಿತ್‌ ಗೋದಾರ ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದಿದ್ದ ಕರ್ಣಿ ಸೇನಾ ಮುಖ್ಯಸ್ಥ ಗೊಡಮೇಡಿ ಕೊಲೆಯಲ್ಲೂ ಭಾಗಿಯಾಗಿದ್ದ. ಈತನಿಂದ ಸಲ್ಮಾನ್‌ ಖಾನ್‌ ಮನೆಗೆ ಶೂಟ್‌ ಮಾಡಿಸಲು ಸಕಲ ತಯಾರಿ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಬೇಕಾದ ಸಕಲ ಶಸ್ತ್ರಾಸ್ತ್ರಗಳ ವ್ಯವಸ್ಥೆಯನ್ನೂ ಅನ್ಮೋಲ್‌ ಇಬ್ಬರಿಗೂ ಮಾಡಿದ್ದ.

ಇನ್ನು ವಿಶಾಲ್‌ ಈ ಕೃತ್ಯ ಮಾಡಲು ಬೇಕಾದ ಬೈಕ್‌ವೊಂದನ್ನು ಸಜ್ಜುಗೊಳಿಸುವ ಹೊಣೆ ಹೊತ್ತಿದ್ದ. ಅದಕ್ಕಾಗಿ ಕೆಲವೇ ದಿನಗಳ ಮೊದಲು ಮುಂಬೈಗೆ ಬಂದಿದ್ದ ವಿಶಾಲ್‌, ಪನ್ವೇಲ್‌ನಲ್ಲಿ ವ್ಯಕ್ತಿಯೊಬ್ಬನಿಂದ ಸೆಕೆಂಡ್‌ ಹ್ಯಾಂಡ್‌ಗೆ ಬೈಕ್‌ ಖರೀದಿಸಿದ್ದ ಎಂದು ತಿಳಿದುಬಂದಿದೆ. ಹೀಗಾಗಿ ಸಿಸಿಟೀವಿ ದೃಶ್ಯ ಆಧರಿಸಿ ಶೂಟರ್‌ಗಳನ್ನು ಗೋದಾರ ಹಾಗೂ ವಿಶಾಲ್ ಎಂದು ಗುರುತಿಸಲಾಗಿದೆ.

ಬೈಕ್‌ ಮಾಲೀಕನ ವಿಚಾರಣೆ:

ಸಲ್ಮಾನ್‌ ಖಾನ್‌ ಮನೆಗೆ ಗುಂಡು ಹಾರಿಸಲು ದುಷ್ಕರ್ಮಿಗಳು ಉಪಯೋಗಿಸಿದ್ದ ಬೈಕ್‌ ಮಾಲೀಕನನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಆತ ದುಷ್ಕರ್ಮಿಗಳಿಗೆ ಕೆಲವೇ ದಿನಗಳ ಮುಂಚೆ ಬೈಕ್‌ ಮಾರಾಟ ಮಾಡಿದ್ದ ಎಂಬುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಬೈಕ್‌ ಮಾಲೀಕ ಮುಂಬೈನ ಪನ್ವೇಲ್‌ ನಿವಾಸಿಯಾಗಿದ್ದು, ಘಟನೆ ನಡೆಯುವ ಕೆಲ ದಿನಗಳ ಮುಂಚೆ ಆತ ಅಪರಿಚಿತ ವ್ಯಕ್ತಿಯೊಬ್ಬರಿಗೆ ತನ್ನ ಬೈಕ್ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಈ ನಡುವೆ ಗುಂಡು ಹಾರಿಸಿದ ಕಿಡಿಗೇಡಿಗಳು ಬೈಕನ್ನು ಚರ್ಚ್‌ವೊಂದರ ಬಳಿ ನಿಲ್ಲಿಸಿ ರೈಲ್ವೆ ನಿಲ್ದಾಣಕ್ಕೆ ಆಟೋವೊಂದರಲ್ಲಿ ತೆರಳಿರುವ ದೃಶ್ಯ ಸೆರೆಯಾಗಿದ್ದು, ಇದರ ಜಾಡು ಹಿಡಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.