ಸಾರಾಂಶ
ನವದೆಹಲಿ : ಕಾಂಗ್ರೆಸ್ ಮತ್ತು ಗಾಂಧೀ ಕುಟುಂಬದ ವಿರುದ್ಧ ಎರಡು ದಿನಗಳ ಹಿಂದೆ ಲೋಕಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಗುರುವಾರ ರಾಜ್ಯಸಭೆಯಲ್ಲಿ ಈ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಕುಟುಂಬ ಮೊದಲು ಮತ್ತು ತುಷ್ಟೀಕರಣದ ನೀತಿ ಅನುಸರಿಸುತ್ತಿದ್ದರೆ, ನಾವು ದೇಶ ಮೊದಲು, ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಎಂಬುದರಲ್ಲಿ ವಿಶ್ವಾಸ ಹೊಂದಿದ್ದೇವೆ ಎಂದು ಗುಡುಗಿದ್ದಾರೆ. ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ತುಷ್ಟೀಕರಣ ನೀತಿ ಅನುಸರಿಸಿದರೆ, ಬಿಜೆಪಿ ಸರ್ಕಾರ ಸಂತುಷ್ಟೀಕರಣ ನೀತಿ ಪಾಲಿಸುತ್ತಿದೆ ಎಂದಿದ್ದಾರೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಗುರುವಾರ ಸುದೀರ್ಘವಾಗಿ ಮಾತನಾಡಿದ ಪ್ರಧಾನಿ ಮೋದಿ, ‘ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿಯಂತ್ರಣಾ ಕ್ರಮಗಳು ಮತ್ತು ಲೈಸೆನ್ಸ್ ರಾಜ್ ನೀತಿಗಳು ಮಂದಗತಿಯ ಆರ್ಥಿಕ ಪ್ರಗತಿಗೆ ಕಾರಣವಾಗಿದ್ದವು. ಆದರೆ ಇದರ ಹೊಣೆಯನ್ನು ಹೊರುವ ಬದಲು ಈ ಮಂದಗತಿ ಮತ್ತು ವಿಫಲ ಆರ್ಥಿಕ ಬೆಳವಣಿಗೆ ನೀತಿಗೆ ‘ಹಿಂದೂ ರೇಟ್ ಆಫ್ ಗ್ರೋಥ್’ ಎಂಬ ಪದ ಬಳಸಿ ಹಿಂದೂಗಳನ್ನು ಟಾರ್ಗೆಟ್ ಮಾಡಲಾಯಿತು. ಅಧಿಕಾರ ನಡೆಸುತ್ತಿದ್ದವರ ವೈಫಲ್ಯವನ್ನು ಒಂದಿಡೀ ಸಮುದಾಯದ ಮೇಲೆ ಹೊರಿಸಲಾಯಿತು. ಕಾಂಗ್ರೆಸ್‌ನ ರಾಜಪರಿವಾರದ ಈ ಆರ್ಥಿಕ ವೈಫಲ್ಯದಿಂದಾಗಿ ಇಡೀ ವಿಶ್ವದಲ್ಲಿ ಹಿಂದೂ ಸಮಾಜದ ಘನತೆಗೆ ಧಕ್ಕೆ ಬಂದಿತು’ ಎಂದು ಮೋದಿ ಕಿಡಿಕಾರಿದರು.
ಜೊತೆಗೆ, ಕಾಂಗ್ರೆಸ್‌ನ ಆಡಳಿತದ ಮಾದರಿಯೇ ತುಷ್ಟೀಕರಣವಾಗಿತ್ತು. ಅದು ಪಕ್ಷದ ರಾಜಕೀಯ ತಿರುಳಾಗಿ ಹೊರಹೊಮ್ಮಿತ್ತು. ಈ ತುಷ್ಟೀಕರಣದ ನೀತಿಯಲ್ಲಿ ಒಂದು ಸಣ್ಣ ಗುಂಪಿಗೆ ಎಲ್ಲವನ್ನೂ ನೀಡಿ, ಉಳಿದವರಿಗೆ ಎಲ್ಲವನ್ನು ನಿರಾಕರಿಸಲಾಯ್ತು. ಕಾಂಗ್ರೆಸ್‌ನ ಗುರಿ ಒಂದು ಕುಟುಂಬದ ಆದ್ಯತೆ ಆಗಿತ್ತು. ಅದರ ರಾಜಕೀಯವೆಲ್ಲಾ ಒಂದು ಕುಟುಂಬದ ಸುತ್ತವೇ ಸುತ್ತುತ್ತಲಿತ್ತು. ಜನರಿಗೆ ಬೇರೆ ಮಾದರಿಯ ಅವಕಾಶವೇ ಸಿಕ್ಕಿರಲಿಲ್ಲ. ಆದರೆ ನಾವು ಅಧಿಕಾರಕ್ಕೆ ಬಂದ ಬಳಿಕ ಸಂತುಷ್ಟೀಕರಣಕ್ಕೆ (ಎಲ್ಲರ ಉದ್ಧಾರ) ಆದ್ಯತೆ ನೀಡಿದೆವು. 2014ರ ಬಳಿಕ ಹೊಸ ಮಾದರಿಗೆ ದೇಶ ಸಾಕ್ಷಿಯಾಯಿತು. ಸಬ್‌ಕಾ ಸಾಥ್ ಸಬ್ ಕಾ ವಿಶ್ವಾಸ್ ನಮ್ಮ ಗುರಿಯಾಗಿತ್ತು ಎಂದು ಮೋದಿ ಕಾಂಗ್ರೆಸ್ ಮತ್ತು ಗಾಂಧಿ ಪರಿವಾರದ ವಿರುದ್ಧ ಹರಿಹಾಯ್ದರು.