ಮೇ 18ಕ್ಕೆ ನೂತನ ಪೋಪ್‌ ಪದಗ್ರಹಣ

| N/A | Published : May 10 2025, 01:02 AM IST / Updated: May 10 2025, 04:37 AM IST

ಸಾರಾಂಶ

ಕ್ರೈಸ್ತರ ಪರಮೋಚ್ಚ ಗುರುವಾಗಿ ಆಯ್ಕೆಯಾಗಿರುವ ಪೋಪ್‌ ಲಿಯೋ-14 ಅವರು ಮೇ 18ರಂದು ಅಧಿಕೃತವಾಗಿ ಪೋಪ್‌ ಆಗಿ ನೇಮಕರಾಗಲಿದ್ದಾರೆ.

 ವ್ಯಾಟಿಕನ್‌ ಸಿಟಿ: ಕ್ರೈಸ್ತರ ಪರಮೋಚ್ಚ ಗುರುವಾಗಿ ಆಯ್ಕೆಯಾಗಿರುವ ಪೋಪ್‌ ಲಿಯೋ-14 ಅವರು ಮೇ 18ರಂದು ಅಧಿಕೃತವಾಗಿ ಪೋಪ್‌ ಆಗಿ ನೇಮಕರಾಗಲಿದ್ದಾರೆ. ಅಂದು ನಡೆವ ಪ್ರಾರ್ಥನಾ ಸಮಾರಂಭದಲ್ಲಿ ಇವರು ಕ್ಯಾಥೋಲಿಕ್‌ನ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವ್ಯಾಟಿಕನ್‌ ತಿಳಿಸಿದೆ. ಬಳಿಕ ಮೇ 21ರಂದು ಮೊದಲ ಬಾರಿಗೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ತಮ್ಮ ಆಯ್ಕೆ ಬಳಿಕ ಶುಕ್ರವಾರ ಮೊದಲ ಬಾರಿಗೆ ಲಿಯೋ ಸಿಸ್ಟಿನಾ ಚಾಪೆಲ್‌ನಲ್ಲಿ ಕಾರ್ಡಿನಲ್‌ಗಳಿಗೆ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಪ್ರಿವೋಸ್‌, ‘ನೀವೆಲ್ಲರೂ ಕ್ಯಾಥೋಲಿಕ್‌ ಮತ್ತು ಕ್ರಾಸ್‌ನನ್ನು ಮುನ್ನಡೆಸಲು ನನ್ನನ್ನು ಆಯ್ಕೆ ಮಾಡಿದ್ದೀರಿ. ಜಗತ್ತಿನಲ್ಲಿ ಯೇಸವಿನ ಸಂದೇಶ ಸಾರಲು ನಿಮ್ಮೆಲ್ಲರ ಸಹಕಾರವೂ ಮುಖ್ಯವಾಗಿದ್ದು, ನೀವೆಲ್ಲರೂ ನಮ್ಮೊಂದಿಗೆ ಹೆಜ್ಜೆ ಹಾಕಲಿದ್ದೀರಿ ಎಂದು ಭಾವಿಸಿದ್ದೇನೆ ಎಂದು ಹೇಳಿದರು. ಜೊತೆಗೆ ಕ್ರೈಸ್ತ ಧರ್ಮದ ಬಗ್ಗೆ ಅಪಹಾಸ್ಯ, ಅಪನಂಬಿಕೆಗಳನ್ನು ಹರಡಲಾಗುತ್ತಿದೆ. ಇವೆಲ್ಲವನ್ನು ತಡೆಯಬೇಕು’ ಎಂದು ಕಳವಳ ವ್ಯಕ್ತಪಡಿಸಿದರು.

ಪೋಪ್‌ ಫ್ರಾನ್ಸಿಸ್‌ ಆಪ್ತರಲ್ಲಿ ಲಿಯೋ ಒಬ್ಬರು:

ನೂತನ ಪೋಪ್‌ ಆಗಿರುವ ಲಿಯೋ ಅವರು ಹಿಂದಿನ ಪೋಪ್‌ ಫ್ರಾನ್ಸಿಸ್‌ ಅವರಿಗೆ ಆಪ್ತರಾಗಿದ್ದರು. ಇವರನ್ನು ಫ್ರಾನ್ಸಿಸ್‌ ಅವರೇ ವ್ಯಾಟಿಕನ್‌ಗೆ ಕರೆತಂದು ಉನ್ನತ ಹುದ್ದೆ ಕೊಟ್ಟಿದ್ದರು. ಜೊತೆಗೆ ಮುಂದಿನ ಪೋಪ್‌ ಆಗುವ ಆಸೆಯನ್ನು ಇರಿಸಿಕೊಂಡಿದ್ದರು ಎಂದು ಹೇಳಲಾಗಿದೆ.

ಪ್ರಧಾನಿ ಮೋದಿ ಶುಭಾಶಯ:ಪೋಪ್‌ ಆಗಿ ಆಯ್ಕೆಯಾಗಿರುವ ರಾಬರ್ಟ್‌ ಪ್ರಿವೋಸ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪರವಾಗಿ ಶುಭಾಶಯ ಕೋರಿದ್ದಾರೆ. ‘ಇವರ ಮುಂದಾಳತ್ವದಲ್ಲಿ ಕ್ಯಾಥೋಲಿಕ್ ಚರ್ಚ್‌ ಶಾಂತಿ, ಸಾಮರಸ್ಯ, ಒಗ್ಗಟ್ಟು ಮತ್ತು ಸೇವೆಯ ಆದರ್ಶಗಳನ್ನು ಮುನ್ನಡೆಸುವಲ್ಲಿ ಅತ್ಯಂತ ಮಹತ್ವದ ಕ್ಷಣವಾಗಲಿ’ ಎಂದು ಶುಭ ಕೋರಿದರು.