ಸಾರಾಂಶ
ಭಾರತದ ಮೂಲಸೌಕರ್ಯ ಯೋಜನೆಗಳ ತಡೆರಹಿತ ಅನುಷ್ಠಾನಕ್ಕಾಗಿ 9 ವರ್ಷ ಹಿಂದೆ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದ ‘ಪ್ರಗತಿ’ ಆನ್‌ಲೈನ್ ವೇದಿಕೆ ದೇಶದ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ.
ನವದೆಹಲಿ: ಭಾರತದ ಮೂಲಸೌಕರ್ಯ ಯೋಜನೆಗಳ ತಡೆರಹಿತ ಅನುಷ್ಠಾನಕ್ಕಾಗಿ 9 ವರ್ಷ ಹಿಂದೆ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದ ‘ಪ್ರಗತಿ’ ಆನ್‌ಲೈನ್ ವೇದಿಕೆ ದೇಶದ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಇದರ ಮೂಲಕ 205 ಶತಕೋಟಿ ಡಾಲರ್ (17.05 ಲಕ್ಷ ಕೋಟಿ ರು.) 340 ಪ್ರಮುಖ ಮೂಲಸೌಕರ್ಯ ಯೋಜನೆಗಳು ಅನುಷ್ಠಾನಗೊಂಡಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಹಾಗೂ ಗೇಟ್ಸ್ ಫೌಂಡೇಶನ್ ನಡೆಸಿದ ಅಧ್ಯಯನವು ಶ್ಲಾಘಿಸಿದೆ.
‘9 ವರ್ಷಗಳ ಹಿಂದೆ ಪ್ರಾರಂಭವಾದಾಗಿನಿಂದ, ಪ್ರಗತಿ ವೇದಿಕೆಯು ಭಾರತದ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿದೆ. ಜೂನ್ 2023ರ ವೇಳೆಗೆ, 17.05 ಲಕ್ಷ ಕೋಟಿ ರು. ಮೌಲ್ಯದ 340 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ‘ ಎಂದು ಸೋಮವಾರ ಬಿಡುಗಡೆ ಮಾಡಿದ ಅಧ್ಯಯನವು ಹೇಳಿದೆ.ವಿಶೇಷ ಎಂದರೆ ಈ 340 ಯೋಜನೆಗಳ ಪೈಕಿ 8 ಯೋಜನೆಗಳನ್ನು (ರೈಲು, ರಸ್ತೆ, ವಿದ್ಯುತ್, ವಾಯುಯಾನ) ಪ್ರಮುಖವಾಗಿ ವರದಿಯಲ್ಲಿ ಗುರುತಿಸಲಾಗಿದೆ. ಇವುಗಳಲ್ಲಿ ಬೆಂಗಳೂರು ಮೆಟ್ರೋ ಯೋಜನೆಯೂ ಒಂದು ಎಂಬುದು ವಿಶೇಷ. ಉಳಿದವು ಜಮ್ಮು-ಉಧಂಪುರ-ಶ್ರೀನಗರ ಬಾರಾಮುಲ್ಲಾ ರೈಲು ಸಂಪರ್ಕ, ನವಿ ಮುಂಬೈ ವಿಮಾನ ನಿಲ್ದಾಣ, ಅಸ್ಸಾಂ ಸೇತುವೆ, ವಾರಾಣಸಿ-ಔರಂಗಾಬಾದ್ ಸೇತುವೆ.. ಇತ್ಯಾದಿ.
ಮೋದಿಗೆ ವರದಿ ಶ್ಲಾಘನೆ:
ವರದಿಯಲ್ಲಿ ಪ್ರಗತಿಯ ಪರಿಣಾಮಗಳನ್ನು ವಿಶ್ಲೇಷಿಸಲಾಗಿದ್ದು, ‘12 ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ನಂತರ, ಮೋದಿಯವರು ಮೂಲಸೌಕರ್ಯ ಯೋಜನೆಗಳು ಹೇಗೆ ಜಾರಿಗೊಳ್ಳುತ್ತವೆ ಎಂಬ ಬಗ್ಗೆ ಸ್ಪಷ್ಟ ತಿಳಿವಳಿಕೆ ಹೊಂದಿದ್ದರು. ಅನೇಕ ‘ಪ್ರಗತಿ ಯೋಜನೆ’ಗಳ ಯಶಸ್ಸನ್ನು ನೇರವಾಗಿ ಒಂದು ಸಣ್ಣ ವಿಡಿಯೋ ಕಾನ್ಫರೆನ್ಸಿಂಗ್ ಕೊಠಡಿಯಿಂದ ಕಂಡುಹಿಡಿಯಬಹುದು. ಪ್ರಧಾನ ಮಂತ್ರಿಗಳ ಸೌತ್ ಬ್ಲಾಕ್ ಕಛೇರಿಯಲ್ಲಿ, ಪ್ರತಿ ತಿಂಗಳ ಕೊನೆಯ ಬುಧವಾರ ಮೋದಿ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸುತ್ತಾರೆ. ಕ್ಯಾಬಿನೆಟ್ ಕಾರ್ಯದರ್ಶಿ, ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರ ಸಚಿವಾಲಯಗಳ ಕಾರ್ಯದರ್ಶಿಗಳು ವೀಡಿಯೊ ಕಾನ್ಫರೆನ್ಸ್‌ನಲ್ಲಿ ಸೇರಿಕೊಳ್ಳುತ್ತಾರೆ. ಸಾಮಾನ್ಯವಾಗಿ 90 ನಿಮಿಷಗಳ ಕಾಲ ನಡೆಯುವ ಈ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮೋದಿ ಎಲ್ಲ ಕಾಮಗಾರಿಗಳ ಅವಲೋಕನ ನಡೆಸುತ್ತಾರೆ’ ಎಂದು ವರದಿ ಹೇಳಿದೆ.-
ಬೆಂಗಳೂರು ಮೆಟ್ರೋ ಬಗ್ಗೆ ಆಕ್ಸ್‌ಫರ್ಡ್ ವಿವಿ ಶ್ಲಾಘನೆ
‘ಪ್ರಗತಿ’ ಮೂಲಕ ಅನುಷ್ಠಾನಗೊಂಡ ಕಾಮಗಾರಿಗಳಲ್ಲಿ ಬೆಂಗಳೂರು ಮೆಟ್ರೋ ಮಹತ್ವದ ಸಾಧನೆ ಎಂದು ಆಕ್ಸ್‌ಫರ್ಡ್ ವಿವಿ ಶ್ಲಾಘಿಸಿದೆ.
‘ಬೆಂಗಳೂರು ಮೆಟ್ರೋ ಮೊದಲ ಹಂತವು 2017 ರಲ್ಲಿ ಕಾರ್ಯರೂಪಕ್ಕೆ ಬಂದಿತು, ಎರಡನೇ ಹಂತವು 2026 ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೂರನೇ ಹಂತವು 2028ರ ವೇಳೆಗೆ ಕಾರ್ಯನಿರ್ವಹಿಸಬಹುದು ಮತ್ತು ಎರಡು ಹೊಸ ಎತ್ತರದ ಮಾರ್ಗಗಳನ್ನು ಒಳಗೊಂಡಿರುತ್ತದೆ. ಯೋಜನೆಯ ರೈಲು ಕಾರಿಡಾರ್‌ಗಳು ನಗರದ ಮೂಲಕ ಹಾದು ಹೋಗುತ್ತವೆ. ಇವುಗಳಿಗೆ ಸಾಕಷ್ಟು ಭೂಮಿ ಬೇಕು. ಹೀಗಾಗಿ ಭೂಸ್ವಾಧೀನ ಕಷ್ಟಕರವಾದ ಕೆಲಸವಾಗಿತ್ತು. 2017ರಲ್ಲಿ ಕಾರ್ಯಾರಂಭವಾದಾಗಿನಿಂದ, ಹಂತ 1ರ 42 ಕಿಮೀ ವ್ಯಾಪ್ತಿಯ 40 ನಿಲ್ದಾಣಗಳು ನಗರದ ಸಾರಿಗೆ ವ್ಯವಸ್ಥೆಗೆ ಚೇತೋಹಾರಿಯಾಗಿವೆ. ಇದರಿಂದ ಸಂಚಾರ ದಟ್ಟಣೆಯಲ್ಲಿ ತೀವ್ರ ಇಳಿಕೆ ಆಗಿದೆ, ಗಾಳಿಯ ಗುಣಮಟ್ಟ ಹೆಚ್ಚಿದೆ. ಇದು ವಿಶ್ವಾಸಾರ್ಹ ಸಾರಿಗೆ ವಿಧಾನವಾಗಿದೆ’ ಎಂದು ವದಿಯಲ್ಲಿ ಕೊಂಡಾಡಲಾಗಿದೆ.