ವಿಶ್ವಗುರು ಬಸವಣ್ಣನವರ ಅನುಭವ ಮಂಟಪಗಳೇ ಭಾರತದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಾಕ್ಷಿ. ಆದರೆ, ದಾಸ್ಯದ ಮನಃಸ್ಥಿತಿ ಹಲವು ನಮ್ಮದೇ ಪ್ರಜಾಪ್ರಭುತ್ವವಾದಿ ಸಂಪ್ರದಾಯಗಳ ಜ್ಞಾನದಿಂದ ದೇಶದ ಹಲವು ತಲೆಮಾರುಗಳನ್ನು ದೂರವಿರಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- ಪ್ರಜಾಪ್ರಭುತ್ವ ಕಲ್ಪನೆಗೆ ಭಾರತ ದೇಶವೇ ತಾಯಿಬೇರು

- ಅನುಭವ ಮಂಟಪ ಇಂಥ ಚರ್ಚೆ ವೇದಿಕೆಯಾಗಿತ್ತು

- ದಾಸ್ಯದ ಮನಃಸ್ಥಿತಿಯಿಂದ ದೇಶಕ್ಕೆಮುಕ್ತಿ ಬೇಕಿದೆ: ಮೋದಿ

- ಈ ಧ್ವಜ ದೇಶದ ಸಾಂಸ್ಕೃತಿಕ ಪುನರುತ್ಥಾನದ ಸಂಕೇತ

- ಶತಮಾನಗಳ ಗಾಯಗಳಿಗೆ ಇಂದು ಮುಕ್ತಿ ಸಿಕ್ಕಿದೆ: ಮೋದಿ

==ಅಯೋಧ್ಯೆ: ಭಾರತವು ವಿದೇಶದಿಂದ ಪ್ರಜಾಪ್ರಭುತ್ವವನ್ನು ಎರವಲು ಪಡೆದುಕೊಂಡಿದೆ ಎಂಬ ಭಾವನೆಯನ್ನು ದಾಸ್ಯದ ಮನಸ್ಥಿತಿ ಬಿತ್ತುತ್ತಾ ಬಂದಿದೆ. ಇಂಥ ಮಾನಸಿಕ ದಾಸ್ಯದಿಂದ ನಾವು ಮುಕ್ತವಾಗಬೇಕಿದೆ. ಯಾಕೆಂದರೆ ಭಾರತವೇ ಪ್ರಜಾಪ್ರಭುತ್ವದ ತಾಯಿಬೇರು. ಸಾವಿರಾರು ವರ್ಷಗಳ ಹಿಂದಿನ ಉತ್ತಿರಾಮೆರುರ್‌ ತಮಿಳು ಶಾಸನ, ವಿಶ್ವಗುರು ಬಸವಣ್ಣನವರ ಅನುಭವ ಮಂಟಪಗಳೇ ಭಾರತದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಾಕ್ಷಿ. ಆದರೆ, ದಾಸ್ಯದ ಮನಃಸ್ಥಿತಿ ಹಲವು ನಮ್ಮದೇ ಪ್ರಜಾಪ್ರಭುತ್ವವಾದಿ ಸಂಪ್ರದಾಯಗಳ ಜ್ಞಾನದಿಂದ ದೇಶದ ಹಲವು ತಲೆಮಾರುಗಳನ್ನು ದೂರವಿರಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಸಂಪನ್ನಗೊಂಡ ಸಂಕೇತವಾಗಿ ದೇಗುಲದ ಮೇಲೆ ಮಂಗಳವಾರ ವಿಶಾಲವಾದ ಕೇಸರಿ ಧ್ವಜ(ಧರ್ಮ ಧ್ವಜ) ಹಾರಿಸಿ ಅವರು ಮಾತನಾಡಿದರು. ಒಂದು ಹಂತದಲ್ಲಿ ಭಾವುಕರಾಗಿದ್ದ ಅವರು, ಈ ದೇಗುಲ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವುದರೊಂದಿಗೆ ಶತಮಾನಗಳಷ್ಟು ಹಳೆಯ ಗಾಯ, ನೋವುಗಳು ಪರಿಹಾರವಾಗಿದೆ. ಈ ಅಪರೂಪದ ಕ್ಷಣ ದೇಶದಲ್ಲಿ ಸಾಂಸ್ಕೃತಿಕ ಪುನರುತ್ಥಾನದ ಸಂಕೇತ ಎಂದು ಬಣ್ಣಿಸಿದರು.

ಹಳೆಯ ಗಾಯ ವಾಸಿ:

‘ಇಂದು ಇಡೀ ಭಾರತ-ವಿಶ್ವ ರಾಮಮಯವಾಗಿದೆ. ಪ್ರತಿಯೊಬ್ಬ ರಾಮ ಭಕ್ತನ ಹೃದಯದಲ್ಲೂ ಈಗ ವಿಶೇಷವಾದ ತೃಪ್ತಿಯ, ಕೃತಜ್ಞತೆಯ ಭಾವ ತುಂಬಿಕೊಂಡಿದೆ. ಅಗಾಧವಾದ ಅಲೌಕಿಕ ಆನಂದ ಆವರಿಸಿದೆ. ಶತಮಾನಗಳಷ್ಟು ಹಳೆಯ ಗಾಯಗಳು ವಾಸಿಯಾಗಿವೆ. ಶತಮಾನಗಳಷ್ಟು ಹಳೆಯ ನೋವಿಗೆ ಇಂದು ವಿದಾಯ ಹೇಳಲಾಗಿದೆ. ಶತಮಾನಗಳಷ್ಟು ಹಳೆಯ ಸಮಸ್ಯೆಗೆ ಪರಿಹಾರ ಸಿಕ್ಕಿದೆ. 500 ವರ್ಷಗಳಷ್ಟು ಕಾಲದಿಂದ ಮಾಡಿಕೊಂಡು ಬಂದಿದ್ದ ತ್ಯಾಗದ ಕಿಚ್ಚಿಗೆ ಬೆಲೆ ಸಿಕ್ಕಿದೆ ಎಂದರು.

ಇದೇ ವೇಳೆ ದೇಗುಲದ ಮೇಲಿನ ಕೇಸರಿ ಧ್ವಜಾರೋಹಣವನ್ನು ವಿಶೇಷ ಮತ್ತು ದೈವೀ ಕ್ಷಣ ಎಂದು ಕರೆದ ಮೋದಿ, ರಾಮ ಮಂದಿರದ ಮೇಲೆ ಹಾರಾಡುತ್ತಿರುವ ಪವಿತ್ರ ಧ್ವಜವು ಸುಳ್ಳಿನ ಮೇಲೆ ಅಂತಿಮ ಗೆಲುವು ಸತ್ಯದ್ದೇ ಎಂಬುದಕ್ಕೆ ಸಾಕ್ಷಿ ಎಂದರು.

ತಮ್ಮ ಭಾಷಣದಲ್ಲಿ ಶ್ರೀರಾಮಚಂದ್ರನ ಹಾದಿಯನ್ನು ಸ್ಮರಿಸಿದ ಅವರು, ನಮ್ಮ ರಾಮ ಯಾವತ್ತೂ ತಾರತಮ್ಯ ಮಾಡಿಲ್ಲ. ನಾವು ಕೂಡ ಅದೇ ಭಾವನೆಯನ್ನಿಟ್ಟುಕೊಂಡು ಸಾಗುತ್ತಿದ್ದೇವೆ.

ಋಷಿಮುನಿಗಳ ಜ್ಞಾನ, ಗುರುಗಳ ಮಾರ್ಗದರ್ಶನ, ನಿಷಾದ್‌ ರಾಜನ ಸ್ನೇಹ, ಶಬರಿಯ ಭಕ್ತಿ ಹಾಗೂ ಅನೇಕರ ಬದ್ಧತೆಯು ಶ್ರೀರಾಮನನ್ನು ರೂಪಿಸಿತು. ಅಭಿವೃದ್ಧಿ ಹೊಂದಿದ ಭಾರತಕ್ಕೂ ಇದೇ ರೀತಿಯ ಸಮಗ್ರ ಬಲದ ಅಗತ್ಯವಿದೆ. ಭಾರತವು ವರ್ತಮಾನದಾಚೆಗೂ ನೋಡಬೇಕು, ಭವಿಷ್ಯದ ತಲೆಮಾರಿಗಾಗಿ ಯೋಜನೆ ಹಾಕಿಕೊಳ್ಳಬೇಕು. ಇಂದಿನ ಕುರಿತಷ್ಟೇ ಯೋಚನೆ ಮಾಡಿದರೆ ಮುಂದಿನ ತಲೆಮಾರಿಗೆ ವಂಚನೆ ಮಾಡಿದಂತೆ. 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬೇಕಿದ್ದರೆ ನಮ್ಮೊಳಗೆ ನಾವು ರಾಮನನ್ನು ಜಾಗೃತಗೊಳಿಸಬೇಕು. ರಾಮ ಕೇವಲ ಒಬ್ಬ ವ್ಯಕ್ತಿ ಅವರೊಬ್ಬ ಮೌಲ್ಯ, ಶಿಸ್ತು ಮತ್ತು ಮಾರ್ಗವೂ ಆಗಿದ್ದಾರೆ ಎಂದು ತಿಳಿಸಿದರು.

ದೇಶವನ್ನು ‘ಮಾನಸಿಕ ದಾಸ್ಯ’ದಿಂದ ಮುಕ್ತಗೊಳಿಸಬೇಕು ಎಂದು ಇದೇ ವೇಳೆ ಪುನರುಚ್ಚರಿಸಿದ ಅವರು, ಭಾರತವು ತನ್ನ ನಾಗರೀಕತೆಯ ಗುರುತಿನ ಕುರಿತು ಹೆಮ್ಮೆ ಪಡಬೇಕು. ಮೆಕಾಲೆಯು 190 ವರ್ಷಗಳ ಹಿಂದೆ ಭಾರತವನ್ನು ತನ್ನ ಬೇರಿನಿಂದ ದೂರವಿರಿಸುವ ಬೀಜ ಬಿತ್ತಿದರು ಎಂದು ಆರೋಪಿಸಿದ ಅವರು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತೇ ಹೊರತು ನಮ್ಮೊಳಗಿನ ಕೀಳರಿಮೆಗಲ್ಲ. ಹೀಗಾಗಿ ಮುಂದಿನ ಹತ್ತು ವರ್ಷಗಳನ್ನು ನಾವು ಈ ಮನಸ್ಥಿತಿ ಬದಲಾವಣೆಗೆ ಮೀಸಲಿಡಲಿದ್ದೇವೆ ಎಂದರು.

==

ಅನುಭ‍ವ ಮಂಟಪದಲ್ಲಿ ಏಕಮತದ

ನಿರ್ಧಾರ: ಪ್ರಧಾನಿ ಮೋದಿ ಮೆಚ್ಚುಗೆಭಾರತವು ವಿದೇಶದಿಂದ ಪ್ರಜಾಪ್ರಭುತ್ವವನ್ನು ಎರವಲು ಪಡೆಯಿತು. ನಮ್ಮ ಸಂವಿಧಾನವೂ ವಿದೇಶದಿಂದ ಪ್ರಭಾವಿತವಾಗಿದೆ ಎಂಬ ನಂಬಿಕೆಯನ್ನು ವಸಾಹತುಶಾಹಿ ಮನಸ್ಥಿತಿ ಬಿತ್ತಿಕೊಂಡು ಬಂದಿದೆ. ಆದರೆ, ನೈಜವಾಗಿ ನೋಡಿದರೆ ಭಾರತವೇ ಪ್ರಜಾಪ್ರಭುತ್ವದ ತಾಯಿಬೇರು. ಪ್ರಜಾಪ್ರಭುತ್ವವು ನಮ್ಮ ಡಿಎನ್‌ಎಯಲ್ಲೇ ಇದೆ ಎಂದ ಪ್ರಧಾನಿ ಮೋದಿ, ತಮಿಳುನಾಡಿನ ಶಾಸನಗಳು ಹಾಗೂ ಮಹಾನ್‌ ದಾರ್ಶನಿಕ ಬಸವಣ್ಣನವರ ಅನುಭವಮಂಟವನ್ನು ಇದಕ್ಕೆ ಉದಾಹರಣೆಯಾಗಿ ಪ್ರಸ್ತಾಪಿಸಿದರು.

ತಮಿಳುನಾಡಿನ ಉತ್ತಿರಾಮೆರುರ್‌ ಗ್ರಾಮದಲ್ಲಿ ಸಿಕ್ಕಿರುವ ಸಾವಿರಾರು ವರ್ಷಗಳಷ್ಟು ಹಳೆಯ ಶಾಸನದಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ಯಾವ ರೀತಿ ಆಡಳಿತ ನಿರ್ವಹಣೆ ನಡೆಸಲಾಗುತ್ತಿತ್ತು ಮತ್ತು ಆ ಕಾಲದಲ್ಲೂ ಜನ ಯಾವ ರೀತಿ ಆಡಳಿತಗಾರನನ್ನು ಆಯ್ಕೆ ಮಾಡುತ್ತಿದ್ದರು ಎಂದು ವಿವರಿಸಲಾಗಿದೆ ಎಂದು ವಿವರಿಸಿದರು.

ಇನ್ನು ಬ್ರಿಟನ್‌ನ ಮಹಾನ್ ಶಾಸನ(ಮ್ಯಾಗ್ನಾ ಕಾರ್ಟಾ) ಕುರಿತು ವ್ಯಾಪಕವಾಗಿ ಉಲ್ಲೇಖವಾದರೂ, ನಮ್ಮ ಭಕ್ತಿ ಭಂಡಾರಿ ಬಸವಣ್ಣ ಅವರ ಅನುಭವ ಮಂಟಪವನ್ನು ಕತ್ತಲೆಯಲ್ಲಿಡಲಾಗಿದೆ. ಅನುಭವ ಮಂಟಪವು ಆ ಕಾಲದಲ್ಲೇ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ವಿಚಾರಗಳ ಕುರಿತು ಸಾರ್ವಜನಿಕವಾಗಿ ಚರ್ಚೆ ನಡೆಸಿ ಸಮಗ್ರ ನಿರ್ಧಾರ ತೆಗೆದುಕೊಳ್ಳುವ ವೇದಿಕೆಯಾಗಿತ್ತು. ಆದರೆ, ನಮ್ಮ ದಾಸ್ಯದ ಮನಸ್ಥಿತಿಯಿಂದಾಗಿ ದೇಶದ ಹಲವು ತಲೆಮಾರುಗಳು ತಮ್ಮದೇ ಪ್ರಜಾಪ್ರಭುತ್ವವಾದಿ ಸಂಪ್ರದಾಯದ ಜ್ಞಾನದಿಂದ ವಂಚಿತವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು ಮೋದಿ.