ಸಾರಾಂಶ
ವಂಶಾಡಳಿತ ಕೆಳಮನೆಯಿಂದ ಮೇಲ್ಮನೆಗೆ ಶಿಫ್ಟ್ ಆಗಿದೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡುವ ಮೂಲಕ ಪರೋಕ್ಷವಾಗಿ ಸೋನಿಯಾ ಗಾಂಧಿ ಅವರಿಗೆ ಟಾಂಗ್ ನೀಡಿದ್ದಾರೆ.
ಔರಂಗಾಬಾದ್ (ಬಿಹಾರ): ವಂಶಾಡಳಿತ ಮಾಡುತ್ತಿದ್ದವರು ಲೋಕಸಭೆಯಲ್ಲಿ ಸೋಲುವ ಭೀತಿಯಿಂದ ರಾಜ್ಯಸಭೆಗೆ ಪಲಾಯನ ಮಾಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಟೀಕಿಸಿದ್ದಾರೆ.
ಶನಿವಾರ ಬಿಜೆಪಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಮೋದಿ, ‘ಬಿಹಾರದಲ್ಲಿ ಪ್ರಸ್ತುತ ಡಬಲ್ ಎಂಜಿನ್ ಸರ್ಕಾರವಿದ್ದು, ಜನರಲ್ಲಿ ಭಯ ಹುಟ್ಟಿಸುವ ಮೂಲಕ ಕುಟುಂಬ ರಾಜಕಾರಣದಲ್ಲಿ ತೊಡಗಿದ್ದವರನ್ನು ಎನ್‌ಡಿಎ ಸರ್ಕಾರ ಪತನದ ಅಂಚಿಗೆ ತಂದು ನಿಲ್ಲಿಸಿದೆ.
ಇಲ್ಲಿನ ವಂಶಾಡಳಿತವು ಹಲವು ಯುವಜನರನ್ನು ಇಲ್ಲಿಂದ ಗುಳೆ ಎಬ್ಬಿಸಿದೆ. ಇಂತಹ ಪಕ್ಷ ಮತ್ತೆ ಆಳ್ವಿಕೆ ನಡೆಸಲು ಬಿಡಬಾರದು’ ಎಂಬುದಾಗಿ ಲಾಲು ಯಾದವ್ ಕುಟುಂಬದ ಆರ್‌ಜೆಡಿ ಪಕ್ಷಕ್ಕೆ ತಿವಿದರು.
ಇದೇ ವೇಳೆ ಪ್ರಧಾನಿ ಮೋದಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಮ್ಮುಖದಲ್ಲಿ 21,400 ಕೋಟಿ ರು. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.