ಹಿಂದೂ ಭಾವನೆಗೆ ರಾಹುಲ್‌ ಗಾಂಧಿ ಧಕ್ಕೆ: ಮೋದಿ ವಾಗ್ದಾಳಿ

| Published : Apr 20 2024, 01:33 AM IST / Updated: Apr 20 2024, 07:03 AM IST

Narendra Modi rally in Amroha Uttar Pradesh

ಸಾರಾಂಶ

ದ್ವಾರಕಾದಲ್ಲಿ ನೀರಿಗಿಳಿದು ನಾನು ಕೃಷ್ಣನಲ್ಲಿ ಪ್ರಾರ್ಥಿಸಿದೆ. ಆದರೆ ನೀರೊಳಗೇನೂ ಇಲ್ಲ ಎಂದು ಶೆಹಜಾದಾ ಹೇಳಿದ್ರು, ಈ ಹೇಳಿಕೆ ನಮ್ಮ ದೇಶದ ಸಂಸ್ಕೃತಿ, ಭಾವನೆಗೆ ಅವಮಾನ. ಯದುವಂಶಿಯೇ ಆಗಿದ್ರೆ ರಾಗಾ ಸ್ನೇಹ ಬಿಡಿ ಎಂದು ಅಖಿಲೇಶ್‌ಗೆ ಮೋದಿ ಸವಾಲು ಹಾಕಿದ್ದಾರೆ.

ಅಮ್ರೋಹಾ (ಉ.ಪ್ರ.): ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಮತ್ತೆ ಹರಿತ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್‌ನ ಶೆಹಜಾದಾ (ರಾಹುಲ್‌ ಗಾಂಧಿ) ನಾನು ಈ ವರ್ಷದ ಆರಂಭದಲ್ಲಿ ಗುಜರಾತ್‌ನ ದ್ವಾರಕಾದಲ್ಲಿ ತಮ್ಮ ನೀರಿಗಿಳಿದು ಕೃಷ್ಣನಲ್ಲಿ ಪ್ರಾರ್ಥಿಸಿದ್ದನ್ನು ಅಣಕಿಸಿದ್ದು ತಮ್ಮ ಮತ ಬ್ಯಾಂಕ್‌ ಭದ್ರಪಡಿಸಿಕೊಳ್ಳಲು. ಇಂಥ ಟೀಕೆಗಳ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಪುರಾತತ್ವಶಾಸ್ತ್ರಜ್ಞರು ಸಮುದ್ರದಲ್ಲಿ ದ್ವಾರಕಾವನ್ನು ಕಂಡುಕೊಂಡಿದ್ದರು. ಅದರ ಅನುಸಾರ ನಾನು ನೀರಿನ ಅಡಿಯಲ್ಲಿ ಹೋಗಿ ದ್ವಾರಕಾದಲ್ಲಿ ಪೂಜೆ ಮಾಡಿದೆ. ಆದರೆ ಕಾಂಗ್ರೆಸ್‌ನ ‘ಶೆಹಜಾದಾ’ ಸಾಗರದಲ್ಲಿ ಪ್ರಾರ್ಥಿಸಲು ಯೋಗ್ಯವಾದದ್ದೇನೂ ಇಲ್ಲ ಎಂದು ಗೇಲಿ ಮಾಡಿದ್ದಾರೆ. 

ಈ ಜನರು(ರಾಹುಲ್‌) ಕೇವಲ ತಮ್ಮ ಮತ ಬ್ಯಾಂಕ್‌ಗಾಗಿ ನಮ್ಮ ಸಂಸ್ಕೃತಿ, ಸಾವಿರಾರು ವರ್ಷಗಳ ಹಿಂದಿನ ನಂಬಿಕೆಗಳನ್ನು ತಿರಸ್ಕರಿಸಿದ್ದಾರೆ’ ಎಂದು ಗುಟುರು ಹಾಕಿದರು.ಇದೇ ವೇಳೆ, ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡಿರುವ ರಾಹುಲ್ ಗಾಂಧಿಯವರ ಮಿತ್ರ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಮೇಲೂ ಮೋದಿ ವಾಗ್ದಾಳಿ ನಡೆಸಿ, ‘ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ತಮ್ಮನ್ನು ಯದುವಂಶಿ ಎಂದು ಕೆಲವರು ಕರೆದುಕೊಳ್ಳುತ್ತಾರೆ. 

ಹಾಗಿದ್ದರೆ ನೀವು ನಿಜವಾದ ಯದುವಂಶಿಯೇ (ಕೃಷ್ಣನ ವಂಶಸ್ಥರು) ಆಗಿದ್ದರೆ, ಯದುಕುಲವನ್ನು ಅವಮಾನಿಸುವ ಪಕ್ಷದೊಂದಿಗೆ ನೀವು ಹೇಗೆ ಕುಳಿತಿದ್ದೀರಿ?’ ಎಂದು ಕೇಳಿದರು.ರಾಹುಲ್‌ ಹೇಳಿದ್ದೇನು?:ಮೋದಿ ದ್ವಾರಕಾದಲ್ಲಿ ನೀರಿನಾಳದಲ್ಲಿ ಹೋಗಿ ಪೂಜೆ ಮಾಡಿದ್ದರು. ಇದನ್ನು ಪ್ರಶ್ನಿಸಿದ್ದ ರಾಹುಲ್‌, ‘ದೇಶದಲ್ಲಿ ಇಂದು ರೈತರ ಸಮಸ್ಯೆಗಳು, ಹಣದುಬ್ಬರ, ನಿರುದ್ಯೋಗ ಮತ್ತು ಅಗ್ನಿವೀರರ ಸಮಸ್ಯೆಗಳು ಪ್ರಮುಖವಾಗಿವೆ, ಆದರೆ ಟೀವಿ ಚಾನೆಲ್‌ಗಳಲ್ಲಿ, ಈ ವಿಷಯಗಳ ಬಗ್ಗೆ ನೀವು ಎಂದಿಗೂ ಚರ್ಚೆಯನ್ನು ನೋಡುವುದಿಲ್ಲ. ಬದಲಿಗೆ, ಚಾನೆಲ್‌ಗಳು ಮೋದಿಜಿಯನ್ನು 24 ಗಂಟೆಗಳ ಕಾಲ ತೋರಿಸುತ್ತವೆ. 

ಸಮುದ್ರದ ಕೆಳಗೆ ಏನೂ ಇಲ್ಲದಿದ್ದರೂ ಪೂಜೆ ಮಾಡಲು ಟಿವಿ ಕ್ಯಾಮೆರಾ ಮೋದಿ ಜತೆ ಹೋಗುತ್ತದೆ, ನಂತರ ಅವರು ಸೀಪ್ಲೇನ್‌ನಲ್ಲಿ ಹಾರುತ್ತಾರೆ’ ಎಂದಿದ್ದರು.----ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಮೋದಿ ಪ್ರಶಂಸೆಅಮ್ರೋಹಾ (ಉ.ಪ್ರ.): ಇತ್ತೀಚಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ಫೈನಲ್‌ಗೇರಲು ಪ್ರಮುಖ ಪಾತ್ರ ವಹಿಸಿದ್ದ ತಂಡದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದರು. ಶಮಿ ಅವರ ತವರು ಅಮ್ರೋಹಾದಲ್ಲಿ ಬಿಜೆಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಮೋದಿ, ಅಮ್ರೋಹಾದ ಪ್ರಸಿದ್ಧ ‘ಢೋಲಕ್‌’ (ನಗಾರಿ) ಬಾರಿಸಿದರು. ಈ ವೇಳೆ ಮೋದಿ, ‘ಮೊಹಮ್ಮದ್‌ ಶಮಿ ದೇಶದ ನಗಾರಿಯನ್ನೇ ಬಾರಿಸಿದರು’ ಎಂದು ಹಾಸ್ಯವಾಗಿ ಹೇಳಿ ಅವರ ಸಾಧನೆಯನ್ನು ಕೊಂಡಾಡಿದರು.