ಇಂದು ಮೋದಿ ಮಂತ್ರಿಮಂಡಲ ಸಭೆ

| Published : Mar 03 2024, 01:34 AM IST / Updated: Mar 03 2024, 09:46 AM IST

ಸಾರಾಂಶ

ಎಲ್ಲ ಸಂಪುಟ, ರಾಜ್ಯ ಖಾತೆ ಸಚಿವರು ಭಾಗಿಯಾಗಲಿದ್ದು, ಲೋಕಸಭೆ ಚುನಾವಣೆ ಮತ್ತು ಆಡಳಿತದ ಬಗ್ಗೆ ಚರ್ಚೆ ಸಂಭವ ಸಾಧ್ಯತೆಯಿದೆ. ಮೋದಿ-3 ಸರ್ಕಾರದ 100 ದಿನಗಳ ಕಾರ್ಯಸೂಚಿ ಬಗ್ಗೆ ಸಮಾಲೋಚನೆ ಕೂಡ ನಡೆಯಬಹುದು ಎನ್ನಲಾಗಿದೆ.

ಪಿಟಿಐ ನವದೆಹಲಿ

ಲೋಕಸಭಾ ಚುನಾವಣೆ ಘೋಷಣೆಗೆ ಕೆಲವು ದಿನಗಳು ಬಾಕಿ ಇರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 3ರ ಭಾನುವಾರ ಕೇಂದ್ರ ಮಂತ್ರಿ ಪರಿಷತ್‌ ಸಭೆ ನಡೆಸಲಿದ್ದಾರೆ.

ಸಭೆಯಲ್ಲಿ ಸಂಪುಟ ದರ್ಜೆ ಹಾಗೂ ಎಲ್ಲ ರಾಜ್ಯ ದರ್ಜೆ ಸಚಿವರು ಭಾಗಿಯಾಗಲಿದ್ದಾರೆ.ಚಾಣಕ್ಯಪುರಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಮಂತ್ರಿಮಂಡಲದ ಸಭೆ ನಡೆಯಲಿದೆ. 

ಪ್ರಮುಖ ನೀತಿ ವಿಷಯಗಳ ಬಗ್ಗೆ ಚರ್ಚಿಸಲು, ವಿವಿಧ ಉಪಕ್ರಮಗಳ ಅನುಷ್ಠಾನದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮತ್ತು ಆಡಳಿತದ ವಿಷಯಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ಪ್ರಧಾನಿ ಈ ಸಭೆ ಕರೆದಿದ್ದಾರೆ. 

ಮುಂದಿನ ಚುನಾವಣೆ ಬಗ್ಗೆಯೂ ಚರ್ಚೆ ಆಗಲಿದೆ ಎಂದು ಮೂಲಗಳು ಹೇಳಿವೆ.ಅಲ್ಲದೆ, ಮೋದಿ ಅವರು ಎಲ್ಲ ಮಂತ್ರಿಗಳಿಗೆ ‘ಕ್ರಿಯಾತ್ಮಕ, ಸ್ಪಷ್ಟ ವ್ಯಾಖ್ಯಾನ ಇರುವ ಹಾಗೂ ಗಮನಾರ್ಹ’ ಎನ್ನಬಹುದಾದ ಸರ್ಕಾರದ 100 ದಿನಗಳ ಕ್ರಿಯಾಯೋಜನೆ ಸಿದ್ಧಪಡಿಸಿ ತಮ್ಮ ಮುಂದೆ ಮಂಡಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ. 

ಈ 100 ದಿನಗಳ ಕಾರ್ಯಸೂಚಿಯು ಬಿಜೆಪಿ ಪ್ರಣಾಳಿಕೆಯೂ ಆಗಬಹುದು ಅಥವಾ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಜಾರಿಗೆ ತರಬಹುದಾದ ಯೋಜನೆಗಳ ಅಜೆಂಡಾ ಕೂಡ ಇರಬಹುದು ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ ಪ್ರಾರಂಭಿಸಿದೆ. ಮಾ.13ರ ನಂತರ ಯಾವುದೇ ಕ್ಷಣ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸುವ ನಿರೀಕ್ಷೆಯಿದೆ.

2014 ರಲ್ಲಿ ಚುನಾವಣಾ ಆಯೋಗವು ಮಾ. 5 ರಂದು 9 ಹಂತಗಳ ಲೋಕಸಭೆ ಚುನಾವಣೆ ಘೋಷಿಸಿತ್ತು ಮತ್ತು ಮೇ 16 ರಂದು ಫಲಿತಾಂಶ ಘೋಷಿಸಲಾಗಿತ್ತು. 

2019ರಲ್ಲಿ, ಮಾ. 10 ರಂದು 7 ಹಂತಗಳ ಲೋಕಸಭಾ ಚುನಾವಣೆಯನ್ನು ಘೋಷಿಸಿತ್ತು ಮತ್ತು ಮೇ 23ರಂದು ಫಲಿತಾಂಶ ಪ್ರಕಟಿಸಲಾಗಿತ್ತು.