ಹೇಗ್‌: ‘ಮೊದಲು ಕೊರೋನಾ ಬಂತು. ಬಳಿಕ ಯುದ್ಧ ಶುರುವಾಯಿತು. ಈಗ ಇಂಧನ ಬಿಕ್ಕಟ್ಟು ಪ್ರಾರಂಭವಾಗಿದೆ. ಒಟ್ಟಾರೆ ಈ ದಶಕ ಇಡೀ ವಿಶ್ವಕ್ಕೆ ವಿಪತ್ತುಗಳ ದಶಕವಾಗಿ ಬದಲಾಗುತ್ತಿದೆ. ಈ ಪರಿಸ್ಥಿತಿಗಳು ಬೇಗನೆ ಬದಲಾಗದೆ ಹೋದರೆ, ದಶಕಗಳಿಂದ ಮಾಡಿದ ಕೆಲಸಗಳೆಲ್ಲಾ ನಿಷ್ಪ್ರಯೋಜಕವಾಗಿಬಿಡುತ್ತವೆ. ವಿಶ್ವದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಜನರು ಮತ್ತೆ ಬಡತನಕ್ಕೆ ದೂಡಲ್ಪಡುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಕೆಯ ಗಂಟೆ ಮೊಳಗಿಸಿದ್ದಾರೆ. ಅವರ ಈ ಹೇಳಿಕೆ ಭಾರಿ ಸಂಚಲನಕ್ಕೆ ಕಾರಣವಾಗಿದೆ.

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಭಾರತದ ಆರ್ಥಿಕತೆ ಮೇಲಾಗಿರುವ ಗಂಭೀರ ಪರಿಣಾಮಗಳ ಕುರಿತು ಇತ್ತೀಚೆಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮಿತವ್ಯಯ ಮಂತ್ರ ಪಾಲಿಸಲು ಸಲಹೆ ಮಾಡಿದ್ದರು. 5 ದೇಶಗಳ ಪ್ರವಾಸದ ಭಾಗವಾಗಿ ಸದ್ಯ ನೆದರ್ಲೆಂಡ್‌ನಲ್ಲಿರುವ ಪ್ರಧಾನಿ ಮೋದಿ, ಶನಿವಾರ ಭಾರತೀಯ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ‘ಇಡೀ ವಿಶ್ವ ಹೊಸ ಸವಾಲುಗಳನ್ನು ಎದುರಿಸುತ್ತಿದ್ದು, ಈಗಿನ ದಶಕ ಒಂದರ ಮೇಲೊಂದರಂತೆ ವಿಪತ್ತುಗಳಿಗೆ ಸಾಕ್ಷಿಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಜತೆಗೆ, ‘ಮೊದಲು ಕೊರೋನಾ ಸಾಂಕ್ರಾಮಿಕ ಕಾಣಿಸಿಕೊಂಡಿತು; ಬಳಿಕ ಯುದ್ಧ ಆರಂಭವಾಯಿತು, ಮತ್ತು ಇದೀಗ ಇಂಧನ ಬಿಕ್ಕಟ್ಟು ಎದುರಾಗಿದೆ. ಈ ದಶಕ ವಿಶ್ವದ ಪಾಲಿಗೆ ವಿಪತ್ತಿನ ದಶಕವಾಗಿ ಹೊರಹೊಮ್ಮುತ್ತಿದೆ. ಈ ಪರಿಸ್ಥಿತಿಯನ್ನು ನಾವು ತಕ್ಷಣವೇ ನಿಭಾಯಿಸದೇ ಹೋದರೆ ಬಡತನ ನಿರ್ಮೂಲನೆಗಾಗಿ ನಾವೆಲ್ಲಾ ಹಲವು ದಶಕಗಳಿಂದ ಮಾಡಿದ ಪ್ರಯತ್ನ ವ್ಯರ್ಥವಾಗಲಿದೆ. ಜಗತ್ತಿನ ದೊಡ್ಡ ಪ್ರಮಾಣದ ಜನತೆ ಮತ್ತೆ ಬಡತನಕ್ಕೆ ನೂಕಲ್ಪಡಲಿದ್ದಾರೆ’ ಎಂದು ಪ್ರಧಾನಿ ಮೋದಿ ಜಾಗತಿಕ ಸಮುದಾಯಕ್ಕೆ ಎಚ್ಚರಿಕೆಯ ಸಂದೇಶ ರವಾನಿಸುವ ಯತ್ನ ಮಾಡಿದ್ದಾರೆ.

ಮಧ್ಯಪ್ರಾಚ್ಯ ಯುದ್ಧ ಆರಂಭವಾಗಿ 3 ತಿಂಗಳು ತುಂಬುತ್ತಾ ಬಂದರೂ ಅದಕ್ಕೆ ಇನ್ನೂ ಯಾವುದೇ ಪರಿಹಾರ ಸಿಗದೇ ಭಾರತ, ಪಶ್ಚಿಮ ಏಷ್ಯಾ ಸೇರಿದಂತೆ ಜಗತ್ತಿನ ಹಲವು ದೇಶಗಳು ಗಂಭೀರ ಸಮಸ್ಯೆಗೆ ತುತ್ತಾಗಿರುವ ಹೊತ್ತಿನಲ್ಲಿ ಇಂಥದ್ದೊಂದು ಎಚ್ಚರಿಕೆಯ ಮೂಲಕ ತಕ್ಷಣವೇ ಯುದ್ಧ ಸ್ಥಗಿತಗೊಳಿಸುವ ಅನಿವಾರ್ಯತೆಯನ್ನು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.

ಗಂಭೀರ ಎಚ್ಚರಿಕೆ:


ಇತ್ತೀಚೆಗೆ ಹೈದ್ರಾಬಾದ್‌ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ‘ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಉಂಟಾಗಿರುವ ಪರಿಣಾಮಗಳನ್ನು ಎದುರಿಸುವ ಸಲುವಾಗಿ ದೇಶದ ನಾಗರಿಕರು ಪೆಟ್ರೋಲ್‌, ಡೀಸೆಲ್‌ ಬಳಕೆ ಕಡಿಮೆ ಮಾಡಬೇಕು, ಅನಗತ್ಯ ಚಿನ್ನ ಖರೀದಿಯನ್ನು ಒಂದು ವರ್ಷ ಮುಂದೂಡಬೇಕು, ಖಾದ್ಯ ತೈಲ ಬಳಕೆ ಕಡಿತ ಮಾಡಬೇಕು, ವಿದೇಶಗಳಿಗೆ ಪ್ರವಾಸ ಕಡಿಮೆ ಮಾಡಬೇಕು, ವಿದೇಶಗಳಲ್ಲಿ ಮದುವೆ ಮಾಡಿಕೊಳ್ಳುವ ಸಂಪ್ರದಾಯಕ್ಕೆ ಬ್ರೇಕ್‌ ಹಾಕಬೇಕು’ ಎಂದು ಕರೆ ನೀಡಿದ್ದರು.

ಅದರ ಬೆನ್ನಲ್ಲೇ ಸ್ವತಃ ತಮ್ಮದೇ ಬೆಂಗಾವಲು ವಾಹನಗಳ ಪ್ರಮಾಣ ಮಾಡಿದ್ದರು. ಮೋದಿ ಕರೆಗೆ ಕೇಂದ್ರ ಸಚಿವರು, ಬಿಜೆಪಿ ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳ ಸಿಎಂಗಳು, ಸಚಿವರು, ಬಹುತೇಕ ರಾಜ್ಯಗಳ ರಾಜ್ಯಪಾಲರು ಬೆಂಬಲ ವ್ಯಕ್ತಪಡಿಸಿ ತಮ್ಮ ಬೆಂಗಾವಲು ವಾಹನ ಕಡಿತ ಮಾಡಿದ್ದರು. ಖಾಸಗಿ ವಾಹನಗಳ ಬದಲಾಗಿ ಸಾರ್ವಜನಿಕ ಸಾರಿಗೆ ಬಳಕೆಗೆ ಆದ್ಯತೆ ನೀಡಿದ್ದರು.