ಶಬರಿಮಲೆಯ 18 ಪವಿತ್ರ ಮೆಟ್ಟಿಲು ಮೇಲೆ ಪೊಲೀಸರ ಫೋಟೋಶೂಟ್‌: ತನಿಖೆ

| Published : Nov 27 2024, 01:01 AM IST

ಸಾರಾಂಶ

ಕೇರಳದ ಶಬರಿಮಲೆ ದೇಗುಲದಲ್ಲಿ ಭದ್ರತೆ ನಿಯೋಜಿತಾಗಿರುವ ಪೊಲೀಸರು, ದೇಗುಲದ ‘ಪಥಿನೆಟ್ಟಂ ಪಡಿ’ (18 ಮೆಟ್ಟಿಲು) ಮೇಲೆ ನಿಂತು ಗ್ರೂಪ್‌ ಫೋಟೊ ತೆಗೆಸಿಕೊಂಡಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಪಟ್ಟಣಂತಿಟ್ಟ: ಕೇರಳದ ಶಬರಿಮಲೆ ದೇಗುಲದಲ್ಲಿ ಭದ್ರತೆ ನಿಯೋಜಿತಾಗಿರುವ ಪೊಲೀಸರು, ದೇಗುಲದ ‘ಪಥಿನೆಟ್ಟಂ ಪಡಿ’ (18 ಮೆಟ್ಟಿಲು) ಮೇಲೆ ನಿಂತು ಗ್ರೂಪ್‌ ಫೋಟೊ ತೆಗೆಸಿಕೊಂಡಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದನ್ನು ವಿಶ್ವ ಹಿಂದೂ ಪರಿಷತ್‌ನ ಕೇರಳ ಘಟಕ ಇದನ್ನು ತೀವ್ರವಾಗಿ ಖಂಡಿಸಿದ್ದು, ಅಯ್ಯಪ್ಪ ಸ್ವಾಮಿಗೆ ಬೆನ್ನು ತೋರಿಸಿವ ಸಂಪ್ರದಾಯ ಶಬರಿಮಲೆಯಲ್ಲಿ ಇಲ್ಲ. ಪೊಲೀಸರು ಅಯ್ಯಪ್ಪ ಸ್ವಾಮಿಗೆ ಅಗೌರವ ಸೂಚಿಸಿ, ಸಂಪ್ರದಾಯವನ್ನು ಉಲ್ಲಂಘಿಸಿದ್ದಾರೆ ಎಂದು ಟೀಕಿಸಿದೆ. ಈ ನಡುವೆ ಕೇರಳದ ಹೆಚ್ಚುವರಿ ಮಹಾಪೊಲೀಸ್‌ ನಿರ್ದೇಶಕರು ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

==

ಮ್ಯಾಪ್‌ ನೋಡಿಕೊಂಡು ಕಾರು ಓಡಿಸಿ ನದಿಗೆ ಬಿದ್ದು ಮೂವರ ಸಾವು: ಗೂಗಲ್‌ ವಿರುದ್ಧ ಕೇಸು

ನವದೆಹಲಿ: ಉತ್ತರಪ್ರದೇಶದ ಬದಾಯೂಂನಲ್ಲಿ ಇತ್ತೀಚೆಗೆ ಗೂಗಲ್‌ಮ್ಯಾಪ್‌ನ ಎಡವಟ್ಟಿನಿಂದ ಕಾರೊಂದು ಮುರಿದುಬಿದ್ದ ಸೇತುವೆಯಿಂದ ಕೆಳಗೆ ಉರುಳಿ ಮೂವರು ಸಾವನ್ನಪ್ಪಿದ ಪ್ರಕರಣದಲ್ಲಿ ಗೂಗಲ್‌ ಮ್ಯಾಪ್‌ ಮತ್ತು ನಾಲ್ವರು ಎಂಜಿನಿಯರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇತ್ತೀಚಿನ ಪ್ರವಾಹಕ್ಕೆ ಸೇತುವೆ ಕೊಚ್ಚಿ ಹೋಗಿತ್ತು. ಪರಿಣಾಮ ರಸ್ತೆ ಕಟ್‌ ಆಗಿತ್ತು. ಆದರೆ ಈ ಮಾಹಿತಿ ಗೂಗಲ್‌ ಮ್ಯಾಪ್‌ನಲ್ಲಿ ದಾಖಲಾಗಿರಲಿಲ್ಲ. ಇದನ್ನು ತಿಳಿಯದೇ ಕಾರು ಸೇತುವೆ ಮೇಲೆ ಚಲಿಸಿದ ಪರಿಣಾಮ ಗೊತ್ತಾಗದೇ ನದಿಗೆ ಬಿದ್ದಿತ್ತು. ಅದರಲ್ಲಿದ್ದ ಮೂವರು ಸಾವನ್ನಪ್ಪಿದ್ದರು. ಈ ಕುರಿತು ಎಚ್ಚರಿಕೆ ಫಲಕ ಹಾಕಿರದ ಹಿನ್ನೆಲೆ ಲೋಕೋಪಯೋಗಿ ಇಲಾಖೆಯ ನಾಲ್ವರು ಎಂಜಿನಿಯರ್‌ಗಳ ವಿರುದ್ಧ ಕೂಡಾ ಪ್ರಕರಣ ದಾಖಲಿಸಲಾಗಿದೆ.

==

ನ.29ಕ್ಕೆ ಕಾಂಗ್ರೆಸ್‌ ಸಿಡಬ್ಲ್ಯುಸಿ ಸಭೆ: 3 ರಾಜ್ಯಗಳ ಸೋಲು, ಸಂಸತ್‌ ರಣತಂತ್ರ ಚರ್ಚೆ

ನವದೆಹಲಿ: ಕಾಂಗ್ರೆಸ್‌ನ ಅತ್ಯುನ್ನತ ನೀತಿ ನಿರ್ಧಾರ ಮಂಡಳಿಯಾದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ನ.29ರಂದು ಇಲ್ಲಿ ಸಭೆ ಸೇರಲಿದೆ. ಸಭೆಯಲ್ಲಿ ಇತ್ತೀಚಿನ ಹರ್ಯಾಣ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು, ಜಾರ್ಖಂಡ್‌ನಲ್ಲಿ ಸ್ಥಾನಗಳ ಸಂಖ್ಯೆ ಇಳಿಕೆ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗುವುದು. ಜೊತೆಗೆ ಮುಂದಿನ ವರ್ಷದ ದೆಹಲಿ, ಬಿಹಾರ ವಿಧಾನಸಭೆ ಚುನಾವಣೆ ಬಗ್ಗೆಯೂ ಚರ್ಚಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅದಾನಿ ಹಗರಣ, ಮಣಿಪುರ ಹಿಂಸಾಚಾರ ಮೊದಲ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಕಟ್ಟಿಹಾಕುವ ಕುರಿತ ರಣತಂತ್ರದ ಬಗ್ಗೆಯೂ ಚರ್ಚಿಸಲಾಗುವುದು ಎನ್ನಲಾಗಿದೆ.

==

ಮಹಾ ಸಿಎಂ ಸ್ಥಾನಕ್ಕೆ ಶಿಂಧೆ ರಾಜೀನಾಮೆ: ಉಸ್ತುವಾರಿ ಸಿಎಂ ಆಗಿರಲು ಸೂಚನೆ

ಮುಂಬೈ: ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿ ಕುರಿತು ಕುತೂಹಲ ಮುಂದುವರೆದಿರುವ ನಡುವೆಯೇ, ಹಾಲಿ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ಮಂಗಳವಾರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್‌ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ಈ ವೇಳೆ ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್‌ ಮತ್ತು ಅಜಿತ್‌ ಪವಾರ್‌ ಉಪಸ್ಥಿತರಿದ್ದರು. ಈ ವೇಳೆ ಹೊಸ ಸಿಎಂ ಆಯ್ಕೆವರೆಗೂ ಉಸ್ತುವಾರಿಯಾಗಿ ಹುದ್ದೆಯಲ್ಲಿ ಮುಂದುವರೆಯುವಂತೆ ರಾಜ್ಯಪಾಲರು ಸೂಚಿಸಿದರು. ಹಿಂದಿನ ವಿಧಾನಸಭೆಯ ಅವಧಿ ನ.26ಕ್ಕೆ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಶಿಂಧೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯದ ನೂತನ ಮುಖ್ಯಮಂತ್ರಿ ರೇಸ್‌ನಲ್ಲಿ ಹಾಲಿ ದೇವೇಂದ್ರ ಫಡ್ನವೀಸ್‌ ಮತ್ತು ಶಿಂಧೆ ಇದ್ದಾರೆ.