ಸಾರಾಂಶ
ಜೆಸಿಬಿ, ಟ್ರ್ಯಾಕ್ಟರ್‌ಗಳನ್ನು ಹೋರಾಟದಲ್ಲಿ ಬಳಸಿದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ದೆಹಲಿ ಚಲೋ ಚಳುವಳಿ ನಡೆಯಸುತ್ತಿರುವ ರೈತರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಕೆಲವೇ ದಿನಗಳ ಹಿಂದೆ ನ್ಯಾಯಾಲಯ ಕೂಡ ರೈತರಿಗೆ ಎಚ್ಚರಿಕೆ ನೀಡಿತ್ತು.
ಚಂಡೀಗಢ: ದಿಲ್ಲಿ ಚಲೋಗೆ ಹೊರಟ ರೈತರು ಜೆಸಿಬಿ, ಅರ್ತ್ ಮೂವರ್‌ಗಳಂಥ ಉತ್ಖನನ ಯಂತ್ರಗಳ ಸಮೇತ ರಾಷ್ಟ್ರ ರಾಜಧಾನಿಯತ್ತ ಸಾಗಲು ಆರಂಭಿಸಿದ್ದಾರೆ.
ಇದರ ವಿರುದ್ಧ ಹರ್ಯಾಣ ಪೊಲೀಸರು ಎಚ್ಚರಿಕೆ ನೀಡಿದ್ದು, ನೆಲ ಅಗೆವ ಯಂತ್ರಗಳನ್ನು ರಸ್ತೆಗೆ ಇಳಿಸುವಂತಿಲ್ಲ. ಹಾಗೊಮ್ಮೆ ಇಳಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪ್ರತಿಭಟನಾ ನಿರತ ರೈತರು ಅವುಗಳನ್ನು ಬಳಸಿ ಪಂಜಾಬ್ ಮತ್ತು ಹರಿಯಾಣದ ಎರಡು ಗಡಿ ಸ್ಥಳಗಳಲ್ಲಿನ ಬ್ಯಾರಿಕೇಡ್ ಧ್ವಂಸಗೊಳಿಸಬಹುದು.
ಅಲ್ಲದೆ, ಅಲ್ಲಿನ ಭದ್ರತಾ ಸಿಬ್ಬಂದಿ ಮೇಲೆ ನೆಲ ಅಗೆವ ಯಂತ್ರಗಳನ್ನು ಬಳಸಿ ದಾಳಿ ಮಾಡಬಹುದು ಎಂಬ ಮುನ್ಸೂಚನೆ ಹರ್ಯಾಣ ಪೊಲೀಸರಿಗೆ ಲಭಿಸಿದೆ.
ಈ ಹಿನ್ನೆಲೆಯಲ್ಲಿ ಅವುಗಳನ್ನು ಪ್ರತಿಭಟನೆ ವೇಳೆ ಬಳಸಕೂಡದು. ಬಳಸಿದರೆ ಅದು ಜಾಮೀನು ರಹಿತ ಅಪರಾಧವಾಗುತ್ತದೆ ಮತ್ತು ಕ್ರಿಮಿನಲ್ ಕೇಸು ದಾಖಲಿಸಲಾಗುತ್ತದೆ ಎಂದು ಹರ್ಯಾಣ ಪೊಲೀಸರು ಎಚ್ಚರಿಸಿದ್ದಾರೆ.