ರಾಷ್ಟ್ರಪತಿ ದ್ರೌಪದಿ ಮುರ್ಮು ವಾಯುನೆಲೆಯಲ್ಲಿ ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನದಲ್ಲಿ ಸಂಚಾರ ಕೈಗೊಂಡರು. ಈ ಮೂಲಕ ರಫೇಲ್‌ನಲ್ಲಿ ಸಂಚರಿಸಿದ ಭಾರತದ ಮೊದಲ ರಾಷ್ಟ್ರಪತಿ ಮತ್ತು ಎರಡು ಯುದ್ಧ ವಿಮಾನಗಳಲ್ಲಿ ಸಂಚರಿಸಿದ ಮೊದಲ ರಾಷ್ಟ್ರಪತಿ ಎಂಬ ಹಿರಿಮೆಗೂ ಪಾತ್ರರಾದರು.

ಅಂಬಾಲ: ರಾಷ್ಟ್ರಪತಿ ದ್ರೌಪದಿ ಮುರ್ಮು, ಬುಧವಾರ ಇಲ್ಲಿನ ವಾಯುನೆಲೆಯಲ್ಲಿ ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನದಲ್ಲಿ ಸಂಚಾರ ಕೈಗೊಂಡರು. ಈ ಮೂಲಕ ರಫೇಲ್‌ನಲ್ಲಿ ಸಂಚರಿಸಿದ ಭಾರತದ ಮೊದಲ ರಾಷ್ಟ್ರಪತಿ ಮತ್ತು ಎರಡು ಯುದ್ಧ ವಿಮಾನಗಳಲ್ಲಿ ಸಂಚರಿಸಿದ ಮೊದಲ ರಾಷ್ಟ್ರಪತಿ ಎಂಬ ಹಿರಿಮೆಗೂ ಪಾತ್ರರಾದರು.

ಇದೇ ವೇಳೆ ಆಪರೇಷನ್‌ ಸಿಂದೂರದ ವೇಳೆ ಪಾಕಿಸ್ತಾನ ಸೇನೆ ಸೆರೆ ಹಿಡಿದಿದೆ ಎಂದು ಪಾಕ್‌ ಮಾಧ್ಯಮಗಳ ಮಾಡಿದ್ದ ವರದಿ ಸುಳ್ಳು ಎಂದು ತಪರಾಕಿ ಹಾಕುವ ನಿಟ್ಟಿನಲ್ಲಿ ವಾಯುಪಡೆ ಪೈಲಟ್, ಸ್ವ್ಕ್ಯಾಡ್ರನ್‌ ಲೀಡರ್‌ ಶಿವಾಂಗಿ ಜೊತೆಗೂ ಮುರ್ಮು ಫೋಟೋಗೆ ಪೋಸ್‌ ನೀಡಿದರು.

ದಾಖಲೆ:

ಮಂಗಳವಾರ ಅಂಬಾಲಕ್ಕೆ ಬಂದಿಳಿದಿದ್ದ ದ್ರೌಪದಿ ಮುರ್ಮು, ಅವರು ಬುಧವಾರ ಬೆಳಗ್ಗೆ ದೇಹದ ಮೇಲೆ ಗುರುತ್ವಾಕರ್ಷಣೆ ಬಲ ಕಡಿಮೆ ಮಾಡುವ ಜಿ- ಸೂಟ್‌ ಮತ್ತು ಕನ್ನಡಕ ಧರಿಸಿ ವಿಮಾನವನ್ನು ಏರಿದರು. ಬೆಳಗ್ಗೆ 11.27ಕ್ಕೆ ದ್ರೌಪದಿ ಮುರ್ಮು ಅವರನ್ನು ಹೊತ್ತ ವಿಮಾನ ಸಮುದ್ರಮಟ್ಟದಿಂದ 15000 ಅಡಿ ಎತ್ತರದಲ್ಲಿ ಗಂಟೆಗೆ 700 ಕಿ.ಮೀ ವೇಗದಲ್ಲಿ ಒಟ್ಟು 200 ಕಿ.ಮೀ ಸಂಚಾರ ನಡೆಸಿ ಬಳಿಕ ವಾಯುನೆಲೆಗೆ ಬಂದಿಳಿಯಿತು.

2023ರಲ್ಲಿ ಅಸ್ಸಾಂ ತೇಜ್‌ಪುರ ವಾಯುನೆಲೆಯಲ್ಲಿ ಸುಖೋಯ್‌ 30 ವಿಮಾನದಲ್ಲಿ ಸಂಚಾರ ನಡೆಸಿದ್ದ ಮುರ್ಮು, ಬುಧವಾರ ಗ್ರೂಪ್‌ ಕ್ಯಾಪ್ಟನ್‌ ಅಮಿತ್‌ ಗೆಹಾನಿ ಅವರಿಂದ ಹಾರಿಸಲ್ಪಟ್ಟ ವಿಮಾನದಲ್ಲಿ ಸಂಚಾರ ನಡೆಸುವ ಮೂಲಕ ಎರಡು ಯುದ್ಧ ವಿಮಾನದಲ್ಲಿ ಸಂಚರಿಸಿದ ದೇಶದ ಮೊದಲ ರಾಷ್ಟ್ರಪತಿ ಎನ್ನಿಸಿಕೊಂಡರು. ಫ್ರಾನ್ಸ್‌ ನಿರ್ಮಿತ ಈ ಅತ್ಯಾಧುನಿಕ ಯುದ್ಧ ವಿಮಾನ 2020ರಲ್ಲಿ ಭಾರತೀಯ ವಾಯುಪಡೆ ಸೇರಿಕೊಂಡಿತ್ತು. ಇತ್ತೀಚಿನ ಪಾಕ್‌ ವಿರುದ್ಧದ ಆಪರೇಷನ್‌ ಸಿಂದೂರದಲ್ಲಿ ರಫೇಲ್‌ ಪಾಲ್ಗೊಂಡಿತ್ತು.

ಈ ಹಿಂದೆ 2006ರಲ್ಲಿ ಅಬ್ದುಲ್‌ ಕಲಾಂ ಮತ್ತು 2009ರಲ್ಲಿ ಪ್ರತಿಭಾ ಪಾಟೀಲ್‌ ಅವರು ಸುಖೋಯ್‌ 30 ಎಂಕೆಐ ಯುದ್ಧ ವಿಮಾನದಲ್ಲಿ ಸಂಚಾರ ನಡೆಸಿದ್ದರು.

ರಫೇಲ್‌ ಯುದ್ಧ ವಿಮಾನದಲ್ಲಿ ಸಂಚಾರ ನನ್ನ ಪಾಲಿಗೆ ಮರೆಯಲಾಗದ ಅನುಭವ. ಶಕ್ತಿಶಾಲಿ ರಫೇಲ್‌ನಲ್ಲಿ ನನ್ನ ಮೊದಲ ಸಂಚಾರವು, ದೇಶದ ರಕ್ಷಣಾ ಸಾಮರ್ಥ್ಯದ ಬಗ್ಗೆ ನನಗೆ ಹೆಮ್ಮೆ ಮೂಡಿಸಿದೆ. ಈ ಸಂಚಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಕ್ಕೆ ಭಾರತೀಯ ವಾಯುಪಡೆ ಮತ್ತು ಏರ್‌ಪೋರ್ಸ್‌ ಸ್ಟೇಷನ್‌ನ ಎಲ್ಲಾ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ದ್ರೌಪದಿ ಮುರ್ಮು, ರಾಷ್ಟ್ರಪತಿ

ಶಿವಾಂಗಿ ಯುದ್ಧ ಕೈದಿ ಎಂದಿದ್ದ ಪಾಕಿಸ್ತಾನಕ್ಕೆ ನೇರ ತಪರಾಕಿ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಅಂಬಾಲದ ವಾಯುನೆಲೆಗೆ ಭೇಟಿ ನೀಡಿದ ವೇಳೆ ಭಾರತೀಯ ವಾಯುಪಡೆಯ ಸ್ವ್ಕಾಡ್ರನ್‌ ಲೀಡರ್‌ ಶಿವಾಂಗಿ ಸಿಂಗ್‌ ಜೊತೆ ಫೋಟೋ ತೆಗೆಸಿಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ನೇರಾನೇರಾ ತಪಾರಾಕಿ ಹಾಕಿದ್ದಾರೆ. ಆಪರೇಷನ್‌ ಸಿಂದೂರದ ಕುರಿತು ಪಾಕಿಸ್ತಾನದ ಸುಳ್ಳನ್ನು ಜಗತ್ತಿನ ಎದುರು ಬಟಾಬಯಲು ಮಾಡಿದ್ದಾರೆ.

ಪಹಲ್ಗಾಂ ಉಗ್ರ ದಾಳಿಯ ಬಳಿಕ ಭಾರತ ಪಾಕ್‌ ಮೇಲೆ ನಡೆಸಿದ ಆಪರೇಷನ್‌ ಸಿಂದೂರದ ವೇಳೆ, ಪಾಕಿಸ್ತಾನ ಸೇನೆಯು, ಭಾರತದ ರಫೇಲ್‌ ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು. ಈ ವೇಳೆ ಅದರಲ್ಲಿದ್ದ ಶಿವಾಂಗಿ ಸಿಂಗ್‌ ಯುದ್ಧಕೈದಿಯಾಗಿ ಸೆರೆ ಸಿಕ್ಕಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ಸುಳ್ಳು ವರದಿಯನ್ನು ಪ್ರಕಟಿಸಿದ್ದವು. ಬಳಿಕ ಭಾರತೀಯ ವಾಯಪಡೆ ಕೂಡಾ ಪಾಕಿಸ್ತಾನದ ಈ ಹೇಳಿಕೆ ಸುಳ್ಳು ಎಂದು ಸಾಬಿತುಪಡಿಸಿತ್ತು.

ಅದರ ಬೆನ್ನಲ್ಲೇ ಬುಧವಾರ ಸ್ವತಃ ಶಿವಾಂಗಿ ಅವರೊಂದಿಗೆ ರಫೇಲ್‌ ಯುದ್ಧ ವಿಮಾನದ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುವ ಮೂಲಕ ಪಾಕಿಸ್ತಾನದ ಮರ್ಯಾದೆಯನ್ನು ರಾಷ್ಟ್ರಪತಿಗಳು ಹರಾಜು ಹಾಕಿದ್ದಾರೆ.

ಶಿವಾಂಗಿ ವಾಯುಪಡೆಯ ಗೋಲ್ಡನ್‌ ಆ್ಯರೋ ಸ್ವ್ಕ್ಯಾಡ್ರನ್‌ನ ಲೀಡರ್‌ ಆಗಿದ್ದಾರೆ. 2017ರಲ್ಲಿ ವಾಯುಪಡೆ ಸೇರಿದ್ದ ಶಿವಾಂಗಿ ಮೊದಲಿಗೆ ಮಿಗ್‌ 21 ಬೈಸನ್‌ ಯುದ್ಧ ವಿಮಾನಗಳನ್ನು ಚಲಾಯಿಸುತ್ತಿದ್ದರು. ಬಳಿಕ 2020ರಲ್ಲಿ ರಫೇಲ್ ಯುದ್ಧ ವಿಮಾನ ಚಲಾಯಿಸುವ ಅರ್ಹತೆ ಪಡೆದುಕೊಂಡಿದ್ದರು. ಈ ಮೂಲಕ ರಫೇಲ್ ಯುದ್ಧ ವಿಮಾನ ಹಾರಿಸುವ ಅನುಭವ ಹೊಂದಿರುವ ದೇಶದ ಮೊದಲ ಮಹಿಳಾ ಪೈಲಟ್ ಎಂಬ ದಾಖಲೆಯನ್ನೂ ಹೊಂದಿದ್ದಾರೆ.