ಸಾರಾಂಶ
ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾ* ಪ್ರಕರಣದಲ್ಲಿ ಜೀವಾವಧಿ/ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ಹಾಗೂ ಅದರ ರದ್ದು ಕೋರಿ ಮಾಜಿ ಸಂಸದ ಪ್ರಜ್ವಲ್ ಸಲ್ಲಿಸುವ ಕ್ರಿಮಿನಲ್ ಮೇಲ್ಮನವಿ ಇತಿಹಾಸದಲ್ಲಿ ಹಲವು ಪ್ರಥಮಗಳಿಗೆ ಕಾರಣವಾಗಲಿದೆ.
ವೆಂಕಟೇಶ್ ಕಲಿಪಿ
ಬೆಂಗಳೂರು : ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾ* ಪ್ರಕರಣದಲ್ಲಿ ಜೀವಾವಧಿ/ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ಮಾಜಿ ಸಂಸದ ಪ್ರಜ್ವಲ್ ಸಲ್ಲಿಸುವ ಕ್ರಿಮಿನಲ್ ಮೇಲ್ಮನವಿ ಹೈಕೋರ್ಟ್ ಇತಿಹಾಸದಲ್ಲಿ ಹಲವು ಪ್ರಥಮಗಳಿಗೆ ಕಾರಣವಾಗಲಿದೆ.
ಹಾಲಿ ಮತ್ತು ಮಾಜಿ ಶಾಸಕರು, ಸಚಿವರು ಸೇರಿ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಲು 2017ರಿಂದ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ನಂತರ ಹಲವು ರಾಜ್ಯಗಳಲ್ಲಿ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ಗಳಲ್ಲಿ ವಿಶೇಷ ಪೀಠಗಳನ್ನು 2023ರಲ್ಲಿ ಸ್ಥಾಪಿಸಲಾಯಿತು.
ಅದರಂತೆ ರಾಜ್ಯದಲ್ಲಿ ವಿಚಾರಣಾ ನ್ಯಾಯಾಲಯಲ್ಲಿ ಎರಡು (ಮ್ಯಾಜಿಸ್ಟ್ರೇಟ್, ಸೆಷನ್ಸ್) ಮತ್ತು ಹೈಕೋರ್ಟ್‌ನಲ್ಲಿ ಒಂದು ವಿಶೇಷ ಏಕಸದಸ್ಯ ನ್ಯಾಯಪೀಠವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವಾಗಿ ಸ್ಥಾಪಿಸಲಾಯಿತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಗಳು ಸ್ಥಾಪನೆಯಾದ ನಂತರ ಒಬ್ಬ ಜನಪ್ರತಿನಿಧಿಗೆ ಜೀವಾವಧಿ ಮತ್ತು ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಲ್ಪಟ್ಟಿರುವ ಏಕೈಕ ಪ್ರಕರಣವೆಂದರೆ ಅದು ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾ* ಪ್ರಕರಣ.
ಜನಪ್ರತಿನಿಧಿ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಈ ವಾರದಲ್ಲೇ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸುವುದು ಬಹುತೇಕ ಖಚಿತ. ಮೇಲ್ಮನವಿ ಸಲ್ಲಿಸುವ ಕುರಿತು ತಮ್ಮ ವಕೀಲರ ಜೊತೆ ಪ್ರಜ್ವಲ್ ಒಂದೆರಡು ಸುತ್ತಿನ ಮಾತುಕತೆ ಸಹ ನಡೆಸಿದ್ದಾರೆ. ವಕೀಲರು ಸಹ ಕ್ರಿಮಿನಲ್ ಮೇಲ್ಮನವಿ ಸಲ್ಲಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಒಂದೊಮ್ಮೆ ಪ್ರಜ್ವಲ್ ರೇವಣ್ಣ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದರೆ, ಜನಪ್ರತಿನಿಧಿಯಾಗಿದ್ದವರು ತಮಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ ಮೊದಲ ಕ್ರಿಮಿನಲ್ ಮೇಲ್ಮನವಿ ಇದಾಗಲಿದೆ. ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಮೊದಲ ಮಾಜಿ ಜನಪ್ರತಿನಿಧಿ ಪ್ರಜ್ವಲ್ ರೇವಣ್ಣ ಆಗಲಿದ್ದಾರೆ.
ಅಲ್ಲದೆ, ಪ್ರಜ್ವಲ್ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠವೇ ವಿಚಾರಣೆ ನಡೆಸಬೇಕಿರುತ್ತದೆ. ಈವರೆಗೆ ಹೈಕೋರ್ಟ್‌ನಲ್ಲಿ ಜನಪ್ರತಿನಿಧಿಯಾಗಿ ಏಕಸದಸ್ಯ ನ್ಯಾಯಪೀಠವಷ್ಟೇ ಕಾರ್ಯರ್ನಿಹಿಸಿದೆ. ಪ್ರಜ್ವಲ್ ರೇವಣ್ಣ ಕ್ರಿಮಿನಲ್ ಮೇಲ್ಮನವಿಸಿ ಸಲ್ಲಿಸಿದರೆ, ಅದರ ವಿಚಾರಣೆಗೆ ವಿಭಾಗೀಯ ಪೀಠ ರಚಿಸಬೇಕಾಗುತ್ತದೆ. ಅಂದರೆ ಆ ನ್ಯಾಯಪೀಠ ಮೊದಲ ಜನಪ್ರತಿನಿಧಿಗಳ ವಿಶೇಷ ವಿಭಾಗೀಯ ಪೀಠ ಆಗಲಿದೆ.
ಕರ್ನಾಟಕ ಹೈಕೋರ್ಟ್ ಕಾಯ್ದೆ-1961ರ ಪ್ರಕಾರ ಜೀವಾವಧಿ ಅಥವಾ ಮರಣದಂಡನೆಗೆ ವಿಧಿಸಿದ ಪ್ರಕರಣಗಳ ಸಂಬಂಧ ಸಲ್ಲಿಕೆಯಾಗುವ ಕ್ರಿಮಿನಲ್ ಮೇಲ್ಮನವಿಯನ್ನು ವಿಭಾಗೀಯ ಪೀಠ ವಿಚಾರಣೆ ನಡೆಸಬೇಕಾಗುತ್ತದೆ. ಜೀವಾವಧಿಗಿಂತ ಕಡಿಮೆ ಅವಧಿ ಶಿಕ್ಷೆಯಾದ ಪ್ರಕರಣದಲ್ಲಿ ಏಕ ಸದಸ್ಯ ಪೀಠವು ವಿಚಾರಣೆ ನಡೆಸಲಿದೆ.
ನ್ಯಾ.ಮುದಗಲ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ?:
ಸದ್ಯ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಮತ್ತು ನ್ಯಾಯಮೂರ್ತಿ ಕೆ.ಮನ್ಮಧ ರಾವ್ ಅವರ ವಿಭಾಗೀಯ ಪೀಠದ ಮುಂದೆ ಜೀವಾವಧಿ ಶಿಕ್ಷೆ ಪ್ರಶ್ನಿಸಲಾಗಿರುವ ಕ್ರಿಮಿನಲ್ ಮೇಲ್ಮನವಿಗಳನ್ನು ವಿಚಾರಣೆಗೆ ನಿಗದಿಪಡಿಸಲಾಗಿದೆ. ಪ್ರಜ್ವಲ್ ಮೇಲ್ಮನವಿಯನ್ನೂ ಇದೇ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸಬಹುದು. ಆಗ ಈ ನ್ಯಾಯಪೀಠವನ್ನು ಜನಪ್ರತಿನಿಧಿಗಳ ವಿಶೇಷ ವಿಭಾಗೀಯ ನ್ಯಾಯಪೀಠವಾಗಿ ಗೊತ್ತುಪಡಿಸಬೇಕಾಗುತ್ತದೆ. ಇಲ್ಲವೇ ಮತ್ತೊಂದು ವಿಭಾಗೀಯ ಪೀಠವನ್ನು ವಿಶೇಷ ಜನಪ್ರತಿನಿಧಿಗಳ ವಿಭಾಗೀಯ ಪೀಠವಾಗಿ ಗೊತ್ತುಪಡಿಸಿ ನೋಟಿಫಿಕೇಷನ್ ಮಾಡಬೇಕಾಗುತ್ತದೆ. ಆ ಪೀಠದ ಮಂದೆ ಪ್ರಜ್ವಲ್ ಮೇಲ್ಮನವಿ ವಿಚಾರಣೆಗೆ ನಿಗದಿಪಡಿಸಬಹುದು ಎಂದು ಕಾನೂನು ತಜ್ಞರು ತಿಳಿಸುತ್ತಾರೆ.
ಏಳು ವರ್ಷ ಜೈಲು ಶಿಕ್ಷೆಯೇ ಗರಿಷ್ಠ:
ಈವರೆಗೆ ರಾಜ್ಯದ ಜನಪ್ರತಿನಿಧಿ ವಿಶೇಷ ನ್ಯಾಯಾಲಯವು ಒಬ್ಬ ಮಾಜಿ/ಹಾಲಿ ಜನಪ್ರತಿನಿಧಿಗೆ ವಿಧಿಸಿರುವ ಗರಿಷ್ಠ ಶಿಕ್ಷೆ ಅಂದರೆ ಏಳು ವರ್ಷ ಜೈಲು. ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರು ಕಳವು ಮತ್ತು ಅಕ್ರಮ ರಫ್ತು ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (ಜಿಲ್ಲಾ ಮತ್ತು ಸೆಷನ್ಸ್) 2024ರ ಅ.24ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸತೀಶ್ ಸೈಲ್ ಸಲ್ಲಿಸಿದ ಕ್ರಿಮಿನಲ್ ಮೇಲ್ಮನವಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ಶಿಕ್ಷೆಯನ್ನು ಅಮಾನತಿನಲ್ಲಿರಿಸಿದೆ.
ಇನ್ನೂ ನಕಲಿ ವೇತನ ಪ್ರಮಾಣಪತ್ರ ಸಲ್ಲಿಸಿ ಬ್ಯಾಂಕಿನಿಂದ 7.17 ಕೋಟಿ ರು. ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2025ರ ಫೆ.6ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಕೃಷ್ಣಯ್ಯ ಶೆಟ್ಟಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟಿದೆ.
ಪ್ರಜ್ವಲ್ ಪ್ರಕರಣದ ಎಸ್‌ಐಟಿ ತಂಡಕ್ಕೆ ಪದಕ: ಪರಮೇಶ್ವರ್
ಮಾಜಿ ಸಂಸದ ಪ್ರಜ್ವಲ್ ಪ್ರಕರಣದ ತನಿಖೆ ನಡೆಸಿದ ಎಸ್ಐಟಿ ತಂಡದವರಿಗೆ ಮುಖ್ಯಮಂತ್ರಿ ಪದಕ ನೀಡುತ್ತೇವೆ. ರಾಷ್ಟ್ರಪತಿ ಪದಕಕ್ಕೂ ಶಿಫಾರಸು ಮಾಡುತ್ತೇವೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಯಾಲಯ ನೀಡಿರುವುದು ಐತಿಹಾಸಿಕ ತೀರ್ಪು. ಮೊದಲು ನಮ್ಮ ಎಸ್ಐಟಿಗೆ ಅಭಿನಂದನೆ ಹೇಳ್ತೇನೆ. ನಮ್ಮ ಎಸ್ಐಟಿ ಎಲ್ಲ ದಾಖಲೆ ಕೊಟ್ಟಿತ್ತು. ಪ್ರಕರಣದ ತನಿಖೆ ನಮ್ಮ ಪೊಲೀಸ್ ಇಲಾಖೆ ಕೀರ್ತಿ ತಂದಿದೆ. ಶೀಘ್ರ ತನಿಖೆ ಮುಗಿಸಿದ್ದಾರೆ. ಹೀಗಾಗಿ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪೊಲೀಸರ ಶ್ರಮಕ್ಕೆ ಸರ್ಕಾರ ಪ್ರಶಂಸೆ ಮಾಡುತ್ತದೆ. ಇದರಲ್ಲಿ ಎರಡನೇ ಮಾತಿಲ್ಲ. ತನಿಖೆ ನಡೆಸಿದ ಎಸ್ಐಟಿ ತಂಡದವರಿಗೆ ಮುಖ್ಯಮಂತ್ರಿ ಪದಕ ಕೊಡುತ್ತೇವೆ. ರಾಷ್ಟ್ರಪತಿ ಪದಕಕ್ಕೂ ಶಿಫಾರಸು ಮಾಡುತ್ತೇವೆ ಎಂದು ತಿಳಿಸಿದರು.
1. ಹಾಲಿ, ಮಾಜಿ ಜನಪ್ರತಿನಿಧಿಗಳ ವಿಚಾರಣೆಗೆ ರಾಜ್ಯದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಸ್ಥಾಪನೆಯಾದ ಬಳಿಕ ಜೀವಾವಧಿ ಶಿಕ್ಷೆ ವಿಧಿಸಿರುವುದು ಇದೇ ಮೊದಲು.
2. ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಪ್ರಜ್ವಲ್ ಮೇಲ್ಮನವಿ ಸಲ್ಲಿಸಲಿದ್ದಾರೆ. ಜನಪ್ರತಿನಿಧಿ ಕೋರ್ಟ್ ವಿಧಿಸಿದ ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ರಾಜ್ಯದ ಮೊದಲ ವ್ಯಕ್ತಿ ಪ್ರಜ್ವಲ್ ರೇವಣ್ಣ ಆಗಲಿದ್ದಾರೆ. 3. ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿರುವುದರಿಂದ ಅದನ್ನು ವಿಭಾಗೀಯ ಪೀಠವೇ ವಿಚಾರಣೆ ನಡೆಸಬೇಕು. ಅಂದರೆ ಆ ನ್ಯಾಯಪೀಠ ಕೂಡ ಮೊದಲ ಜನಪ್ರತಿನಿಧಿಗಳ ವಿಶೇಷ ವಿಭಾಗೀಯ ಪೀಠ ಆಗಲಿದೆ.
4. ಈವರೆಗೆ ರಾಜ್ಯದ ಜನಪ್ರತಿನಿಧಿ ವಿಶೇಷ ನ್ಯಾಯಾಲಯವು ಒಬ್ಬ ಮಾಜಿ/ಹಾಲಿ ಜನಪ್ರತಿನಿಧಿಗೆ ವಿಧಿಸಿರುವ ಗರಿಷ್ಠ ಶಿಕ್ಷೆ ಅಂದರೆ ಏಳು ವರ್ಷ ಜೈಲು. ಬೇಲೆಕೇರಿ ಕೇಸಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಆ ಶಿಕ್ಷೆ ಕೊಡಲಾಗಿತ್ತು.