ನವದೆಹಲಿ: ಪಿಸ್ತೂಲ್‌ನೊಂದಿಗೆ ರೀಲ್ಸ್‌ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು ಎದೆ ಹೊಕ್ಕ ಪರಿಣಾಮ 28 ವರ್ಷದ ಯುವ ವ್ಯಾಪಾರಿ ಸಾವನ್ನಪ್ಪಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಪವನ್‌ ಕುಮಾರ್‌ ಮೃತ ವ್ಯಕ್ತಿ. ಈತ ತನ್ನ ಸಂಬಂಧಿ ಹಿಮಾಂಶುವಿನ ಪರವಾನಗಿ ಸಹಿತ ಪಿಸ್ತೂಲ್‌ನ್ನು ರೀಲ್ಸ್‌ಗಾಗಿ ಮೊದಲ ಬಾರಿ ಬಳಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ. ಘಟನೆ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಜಾಲತಾಣದಲ್ಲಿ ವೈರಲ್‌ ಆಗಿದೆ. ಪಿಸ್ತೂಲ್‌ಗೆ ಗುಂಡು ಹಾಕಿ ಎದೆಗೆ ಇರಿಸಿಕೊಳ್ಳುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

==

ಯುಪಿಯಲ್ಲಿ ಏ.1ರಿಂದ ಮೊಟ್ಟೆ ಮೇಲೆ ಎಕ್ಸ್‌ಪೈರಿ ಡೇಟ್‌ ನಮೂದು ಕಡ್ಡಾಯ

ಲಖನೌ: ಗ್ರಾಹಕರಿಗೆ ಆರೋಗ್ಯಕರ ಮೊಟ್ಟೆಯನ್ನು ವಿತರಿಸುವ ಉದ್ದೇಶದಿಂದ, ಔಷಧಗಳ ರೀತಿಯಲ್ಲೇ ಮೊಟ್ಟೆಯ ಮೇಲೂ ಮಾರಾಟಗಾರರು ಕಡ್ಡಾಯವಾಗಿ ಎಕ್ಸ್‌ಪೈರಿ ದಿನಾಂಕವನ್ನು ನಮೂದಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ಇದು ಏ.1ರಿಂದಲೇ ಜಾರಿಗೆ ಬರಲಿದೆ. ‘ಏ.1ರಿಂದ ಮೊಟ್ಟೆಗಳ ಮೇಲೆ ಉತ್ಪಾದನಾ ದಿನಾಂಕ ಮತ್ತು ಮುಕ್ತಾಯ ದಿನಾಂಕವನ್ನು ನಮೂದಿಸುವುದು ಕಡ್ಡಾಯ. ಇದರಿಂದ ಗ್ರಾಹಕರು ಮೊಟ್ಟೆ ಎಷ್ಟು ತಾಜಾ ಇದೆ ಎಂದು ತಿಳಿಯಬಹುದು. ಮೊಟ್ಟೆಗಳ ಮೇಲೆ ಯಾವುದೇ ಲೇಬಲ್‌ ಇಲ್ಲದಿದ್ದರೆ, ಅವುಗಳನ್ನು ಬಳಕೆಗೆ ಯೋಗ್ಯವಲ್ಲ ಎಂದು ಪರಿಗಣಿಸಲಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


==

ಡಿಎಂಕೆ ಬೆದರಿಯಿಂದ ರಾಜಕೀಯಕ್ಕೆ ಗುಡ್‌ಬೈ ಆರೋಪ ಸುಳ್ಳು: ರಜನಿ

ಚೆನ್ನೈ: ಮುಖ್ಯಮಂತ್ರಿ ಸ್ಟಾಲಿನ್‌ ಕುಟುಂಬದ ಬೆದರಿಕೆ ಕಾರಣ ತಾವು ರಾಜಕೀಯಕ್ಕೆ ಗುಡ್‌ಬೈ ಹೇಳಿದ್ದಾಗಿ ನಟ ವಿಜಯ್‌ ಅವರ ಟಿವಿಕೆ ಪಕ್ಷದ ನಾಯಕ ಅವಧ್‌ ಅರ್ಜುನ್‌ ಮಾಡಿದ ಆರೋಪವನ್ನು ನಟ ರಜನೀಕಾಂತ್‌ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ರಜನಿ, ‘ಕಾಲ ಮಾತನಾಡುವುದಿಲ್ಲ, ಬದಲಾಗಿ ಅದು ಕಾಯುತ್ತದೆ ಮತ್ತು ಉತ್ತರಿಸುತ್ತದೆ’ ಎಂದು ಹೇಳಿದ್ದಾರೆ. ಈ ನಡುವೆ ಅವಧ್‌ ಅರ್ಜುನ್‌ ಹೇಳಿಕೆಯನ್ನು ಬಿಜೆಪಿ ಮತ್ತು ಎಐಎಡಿಎಂಕೆ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ಈ ಹೇಳಿಕೆ ಟಿವಿಕೆ ಜೊತೆಗಿನ ಬಿಜೆಪಿ ಮೈತ್ರಿ ಮಾತುಕತೆ ಮೇಲೆ ಅಡ್ಡ ಪರಿಣಾಮ ಬೀರಿದೆ ಎಂದು ಮೂಲಗಳು ಹೇಳಿವೆ. ರಜನಿಗೆ ಹೋಲಿಸಿದರೆ ವಿಜಯ್‌ ಹೆಚ್ಚು ದೃಢ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಬಣ್ಣಿಸುವ ನಿಟ್ಟಿನಲ್ಲಿ ಟಿವಿಕೆ ನಾಯಕ ಇಂಥದ್ದೊಂದು ಹೇಳಿಕೆ ನೀಡಿದ್ದರು. ಆದರೆ ಅದೀಗ ಪಕ್ಷಕ್ಕೆ ಮುಳುವಾಗಿ ಪರಿಣಮಿಸಿದೆ.

==

ಸ್ಪೀಕರ್‌ ಓಂ ಬಿರ್ಲಾ ಮೇಲೆ ಪೇಪರ್ ಎಸೆದಿದ್ದ 8 ವಿಪಕ್ಷ ಸಂಸದರ ಅಮಾನತು ರದ್ದು

ನವದೆಹಲಿ: ಬಜೆಟ್‌ ಅಧಿವೇಶನದ ಮೊದಲ ಭಾಗದಲ್ಲಿ ಸ್ಪೀಕರ್‌ ಓಂ ಬಿರ್ಲಾ ಅವರ ಮೇಲೆ ಪೇಪರ್‌ ಎಸೆದ ಕಾರಣಕ್ಕೆ ಅಮಾನಾತಗಿದ್ದ 8 ವಿಪಕ್ಷ ಸಂಸದರ ಅಮಾನತು ಆದೇಶವನ್ನು ಸ್ಪೀಕರ್ ಓಂ ಬಿರ್ಲಾ ಅವರು ಅಮಾನುಗೊಳಿಸಿದ್ದಾರೆ. ಕಾಂಗ್ರೆಸ್‌ನ 7, ಸಿಪಿಎಂನ ಓರ್ವ ಸಂಸದರ ಅಮಾನತು ಆದೇಶ ಹಿಂಪಡೆಯುವಂತೆ ಕಾಂಗ್ರೆಸ್‌ ಸದಸ್ಯ ಕೆ. ಸುರೇಶ್‌ ಸದನವನ್ನು ಆಗ್ರಹಿಸಿದರು. ಅಲ್ಲದೇ ಮತ್ತೆ ಇಂತಹ ಘಟನೆ ಪುನಾರವರ್ತನೆ ಆಗುವುದಿಲ್ಲ, ತಮ್ಮ ಪಕ್ಷ ಸಹಕರಿಸಲು ಸಿದ್ಧ ಎಂದು ಸದನದ ಗಮನಕ್ಕೆ ತಂದರು. ಬಳಿಕ ಬಿರ್ಲಾ ಅವರು ಮಂಗಳವಾರದಿಂದ ಜಾರಿಗೆ ಬರುವಂತೆ ಅಮಾನತು ಆದೇಶ ರದ್ದುಗೊಳಿಸಿದರು. ಇದೇ ವೇಳೆ ಸ್ಪೀಕರ್, ಸಂಸತ್ತಿನ ಆವರಣದಲ್ಲಿ ಫಲಕ, ಪೋಸ್ಟರ್‌ಗಳನ್ನು ಪ್ರದರ್ಶಿಸದಂತೆ ಸದಸ್ಯರಿಗೆ ತಿಳಿಸಿದರು.