ಅಣ್ವಸ್ತ್ರ ಬಳಸಲು ರಷ್ಯಾ ಸನ್ನದ್ಧ: ಪುಟಿನ್‌

| Published : Mar 14 2024, 02:00 AM IST

ಸಾರಾಂಶ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ರಾಷ್ಟ್ರದ ಸಾರ್ವಭೌಮತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಲ್ಲಿ ಅಣ್ವಸ್ತ್ರ ಬಳಸಲು ರಷ್ಯನ್ ಸೇನೆ ಸಿದ್ಧವಾಗಿರುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಾಸ್ಕೊ: ಅಧ್ಯಕ್ಷೀಯ ಚುನಾವಣೆಗೆ ಇನ್ನು ಕೆಲವೇ ದಿನಗಳಿರುವ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ರಾಷ್ಟ್ರದ ಸಾರ್ವಭೌಮತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಲ್ಲಿ ಅಣ್ವಸ್ತ್ರ ಬಳಸಲು ರಷ್ಯನ್ ಸೇನೆ ಸಿದ್ಧವಾಗಿರುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರಷ್ಯನ್‌ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು ‘ಉಕ್ರೇನ್‌ ಜೊತೆಗಿನ ಯುದ್ಧದಲ್ಲಿ ಪಾಶ್ಚಿಮಾತ್ಯರ ಕೈವಾಡ ಹೆಚ್ಚುತ್ತಿದೆ. ಒಂದು ವೇಳೆ ನಮ್ಮ ದೇಶದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಲ್ಲಿ ಅಣ್ವಸ್ತ್ರ ಪ್ರಯೋಗಿಸಲು ನಮ್ಮ ಸೇನೆ ತಾಂತ್ರಿಕವಾಗಿ ತಯಾರಿದೆ. ನಾವು ಯಾವುದಕ್ಕೂ ಜಗ್ಗುವುದಿಲ್ಲ’ ಎಂದು ಪರೋಕ್ಷವಾಗಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದರು.ಸಂಧಾನಕ್ಕೂ ಸಿದ್ಧ:

ಉಕ್ರೇನ್‌ ಜೊತೆಗಿನ ಯುದ್ಧದ ಸಮರಾಂಗಣದಲ್ಲಿ ಅಣ್ವಸ್ತ್ರ ಪ್ರಯೋಗ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಅದರ ಅಗತ್ಯವೇ ಇಲ್ಲ ಎಂಬುದಾಗಿ ಪುಟಿನ್‌ ತಿಳಿಸಿದರು. ಅಲ್ಲದೆ ತಾವು ಉಕ್ರೇನ್‌ ಜೊತೆಗೆ ಮಾತುಕತೆಗೂ ಸಿದ್ಧರಿದ್ದು, ನಮ್ಮ ಉದ್ದೇಶವನ್ನು ಕಾಪಾಡಿಕೊಳ್ಳುವ ಜೊತೆಗೆ ಪಾಶ್ಚಿಮಾತ್ಯರಿಂದ ಕೆಲವು ವಿಷಯಗಳಲ್ಲಿ ಗ್ಯಾರಂಟಿ ದೊರೆತ ಬಳಿಕ ಸಂಧಾನ ಮಾಡಿಕೊಳ್ಳಲು ಸಿದ್ಧರಿರುವುದಾಗಿಯೂ ತಿಳಿಸಿದರು.

ಕೆಲವೇ ದಿನಗಳ ಹಿಂದೆ ಭಾರತದ ಪ್ರಧಾನಿ ಮೋದಿ ಅವರ ಮನವೊಲಿಕೆ ಹಿನ್ನೆಲೆಯಲ್ಲಿ ರಷ್ಯಾ ಉಕ್ರೇನ್‌ ಮೇಲೆ ಅಣ್ವಸ್ತ್ರ ದಾಳಿ ಮಾಡುವ ಯೋಚನೆ ಕೈಬಿಟ್ಟಿತ್ತು ಎಂಬುದಾಗಿ ಅಮೆರಿಕನ್ ಅಧಿಕಾರಿಗಳು ತಿಳಿಸಿದ್ದರು.