ಸಾರಾಂಶ
ನವದೆಹಲಿ : ಚುನಾವಣಾ ಬಾಂಡ್ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಅವರು ದೇಶದಲ್ಲಿ ಭ್ರಷ್ಟಾಚಾರದ ಶಾಲೆಯನ್ನು ನಡೆಸುತ್ತಿದ್ದಾರೆ. ‘ಪರಿಪೂರ್ಣ ಭ್ರಷ್ಟಾಚಾರ ವಿಜ್ಞಾನ’ ಎಂಬ ವಿಷಯದ ಎಲ್ಲ ಅಧ್ಯಾಯಗಳನ್ನೂ ಅವರು ಬೋಧಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ದಾಳಿಗಳನ್ನು ನಡೆಸುವ ಮೂಲಕ ಹೇಗೆ ದೇಣಿಗೆಯನ್ನು ಸಂಗ್ರಹಿಸಬೇಕು ಹಾಗೂ ದೇಣಿಗೆಯನ್ನು ಸ್ವೀಕರಿಸಿದ ಬಳಿಕ ಹೇಗೆ ಗುತ್ತಿಗೆಗಳನ್ನು ನೀಡಬೇಕು ಎಂಬ ಪಾಠಗಳನ್ನು ಮೋದಿ ಮಾಡುತ್ತಿದ್ದಾರೆ. ಅಲ್ಲದೆ ಭ್ರಷ್ಟರನ್ನು ತೊಳೆಯುವ ವಾಷಿಂಗ್ ಮಷಿನ್ ಹೇಗೆ ಕಾರ್ಯನಿರ್ವಹಿಸುತ್ತದೆ? ತನಿಖಾ ಸಂಸ್ಥೆಗಳನ್ನು ವಸೂಲಿ ಏಜೆಂಟ್‌ಗಳನ್ನಾಗಿಸುವ ಮೂಲಕ ಬೇಲ್ ಮತ್ತು ಜೈಲ್ ಎಂಬ ಆಟ ಹೇಗೆ ನಡೆಯುತ್ತದೆ ಎಂಬುದನ್ನೂ ಕಲಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕುಟುಕಿದ್ದಾರೆ.
ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಎಕ್ಸ್‌ನಲ್ಲಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಮೋದಿ ಅವರ ಭ್ರಷ್ಟಾಚಾರದ ಶಾಲೆಯನ್ನು ಇಂಡಿಯಾ ಕೂಟ ಬಂದ್ ಮಾಡಿಸಲಿದೆ. ಮೋದಿ ಬೋಧಿಸುತ್ತಿರುವ ಕೋರ್ಸ್ ಅನ್ನು ಕೂಡ ಸ್ಥಗಿತಗೊಳಿಸಲಿದೆ ಎಂದಿದ್ದಾರೆ.