ಸಾರಾಂಶ
ತಿರುವನಂತಪುರಂ: ಕಾಂಗ್ರೆಸ್‌ನ ಹಿರಿಯ ನಾಯಕ, ಕೇರಳದ ಮಾಜಿ ಮುಖ್ಯಮಂತ್ರಿ ದಿ.ಊಮ್ಮನ್ ಚಾಂಡಿ ಸ್ಮರಣಾರ್ಥ ಸ್ಥಾಪಿಸಲಾದ ‘ಊಮ್ಮನ್ ಚಾಂಡಿ ಸಮಾಜ ಸೇವಕ’ ಪ್ರಶಸ್ತಿಗೆ ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ 1 ಲಕ್ಷ ರು. ನಗದು, ಸ್ಮರಣಿಕೆ ಒಳಗೊಂಡಿದೆ. ಲೋಕಸಭೆ ಚುನಾವಣೆಗೂ ಮುನ್ನ ಭಾರತ್ ಜೋಡೋ ಯಾತ್ರೆ ನಡೆಸಿ ಜನರ ಸಮಸ್ಯೆ ಆಲಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ರಾಹುಲ್ ಗಾಂಧಿ ಮುಖ್ಯ ಪಾತ್ರವಹಿಸಿದ್ದಾರೆ. ಆದ್ದರಿಂದ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಸಮಿತಿ ತಿಳಿಸಿದೆ. ಇದೇ ಮೊದಲ ಬಾರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಮಹಾರಾಷ್ಟ್ರ: 6 ತಿಂಗಳಲ್ಲಿ 1,267 ರೈತರು ಆತ್ಮಹತ್ಯೆ
ಮುಂಬೈ: ಈ ವರ್ಷದ ಮೊದಲ ಆರು ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಒಟ್ಟು 1,267 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಅಮರಾವತಿ ಪ್ರಾಂತ್ಯದಲ್ಲಿ 557 ಮಂದಿ ಸಾವನ್ನಪ್ಪಿದ್ದು, ರೈತರ ಆತ್ಮಹತ್ಯೆ ಪ್ರಮಾಣದಲ್ಲಿ ಮೊದಲನೇ ಸ್ಥಾನದಲ್ಲಿದೆ.
ರಾಜ್ಯ ಸರ್ಕಾರದ ವರದಿಯ ಅಂಕಿಅಂಶಗಳ ಪ್ರಕಾರ, ಜನವರಿಯಿಂದ ಜೂನ್‌ವರೆಗೂ ಛತ್ರಪತಿ ಸಂಭಾಜಿನಗರ ವಿಭಾಗದಲ್ಲಿ 430 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡನೇ ಸ್ಥಾನದಲ್ಲಿದೆ. ನಂತರ ನಾಸಿಕ್ ವಿಭಾಗದಲ್ಲಿ 137, ನಾಗ್ಪುರ ವಿಭಾಗದಲ್ಲಿ 130 ಮತ್ತು ಪುಣೆ ವಿಭಾಗದಲ್ಲಿ 13 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರಾವಳಿ ಕೊಂಕಣ ವಿಭಾಗದಲ್ಲಿ ಯಾವುದೇ ಸಾವು ಸಂಭವಿಸಿಲ್ಲ.
ವಲಸೆ ಕಾರ್ಮಿಕರಿಗೆ ನಿತ್ಯ ಕೇವಲ 5 ರು.ಗೆ ವಸತಿ: ಗುಜರಾತ್ ಹೊಸ ಯೋಜನೆ
ಅಹಮದಾಬಾದ್: ಗುಜರಾತಿನ ಸುಮಾರು 15 ಸಾವಿರ ಕಟ್ಟಡ ಕಾರ್ಮಿಕರಿಗೆ ದಿನಕ್ಕೆ 5 ರು.ನಂತೆ ತಾತ್ಕಾಲಿಕವಾಗಿ ವಸತಿ ಕಲ್ಪಿಸುವ ಯೋಜನೆಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಗುರುವಾರ ಚಾಲನೆ ನೀಡಿದರು.ಅಹಮದಾಬಾದ್, ಗಾಂಧಿನಗರ, ವಡೋದರಾ ಮತ್ತು ರಾಜ್‌ಕೋಟ್ ನಗರಗಳಲ್ಲಿ ಕಾರ್ಮಿಕರಿಗೆ ‘ಶ್ರಮಿಕ್ ಬಸೇರಾ’ ಯೋಜನೆಯಡಿಯಲ್ಲಿ ವಸತಿ ಕಲ್ಪಿಸಲು ನಿಟ್ಟಿನಲ್ಲಿ 17 ವಸತಿ ವಿನ್ಯಾಸಗಳನ್ನು ಭೂಪೇಂದ್ರ ಪಟೇಲ್ ಅವರು ವರ್ಚುವಲ್ ಆಗಿ ಉದ್ಘಾಟಿಸಿದರು. ಈ ಯೋಜನೆಗಾಗಿ ಪೋರ್ಟಲನ್ನು ಆರಂಭಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆಯು ಸುಮಾರು 15,000 ಕಟ್ಟಡ ಕಾರ್ಮಿಕರಿಗೆ ಪ್ರಯೋಜನವಾಗಲಿದೆ. ಕಟ್ಟಡ ಕಾರ್ಮಿಕರಿಗೆ ತಲಾ 5 ರು.ನಂತೆ ದೈನಂದಿನ ಬಾಡಿಗೆಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಇನ್ನು ಮೂರು ವರ್ಷಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.