ಸಾರಾಂಶ
ವಯನಾಡು: ರಾಯಬರೇಲಿ ಮತ್ತು ವಯನಾಡು ಲೋಕಸಭಾ ಕ್ಷೇತ್ರ ಎರಡರಲ್ಲೂ ಗೆದ್ದು, ವಯನಾಡು ಕ್ಷೇತ್ರವನ್ನು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಗೆ ಬಿಟ್ಟುಕೊಟ್ಟಿರುವ ರಾಹುಲ್ ಗಾಂಧಿ ವಯನಾಡು ಕ್ಷೇತ್ರದ ಜನತೆಗೆ ಭಾವುಕ ಸಂದೇಶ ಕಳುಹಿಸಿದ್ದಾರೆ. ‘ನಿತ್ಯಲೂ ಬೈಗುಳ ಎದುರಿಸುತ್ತಿದ್ದಾಗ ನನ್ನನ್ನು ರಕ್ಷಿಸಿದ್ದು ನಿಮ್ಮ ಪ್ರೀತಿ’ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.
‘ನಾನು ನಿಮಗೆ ಅಪರಿಚಿತನಾಗಿದ್ದೆ. ಆದರೆ ನೀವು ನನ್ನನ್ನು ನಂಬಿದ್ದೀರಿ. ನೀವು ನನ್ನನ್ನು ಅನಿಯಂತ್ರಿತ ಪ್ರೀತಿ ನೀಡಿ ಅಪ್ಪಿಕೊಂಡಿದ್ದೀರಿ. ನೀವು ಯಾವ ರಾಜಕೀಯ ರಚನೆಯನ್ನು ಬೆಂಬಲಿಸಿದ್ದೀರಿ ಎನ್ನುವುದು ಮುಖ್ಯವಲ್ಲ. ನೀವು ಯಾವ ಸಮುದಾಯ, ಯಾವ ಧರ್ಮವನ್ನು ನಂಬಿದ್ದೀರಿ ಎನ್ನುವುದು ಮುಖ್ಯವಲ್ಲ. ನೀವು ಯಾವ ಭಾಷೆಯನ್ನು ಮಾತನಾಡುತ್ತಿರಿ ಎನ್ನುವುದು ಮುಖ್ಯವಲ್ಲ. ನಾನು ದಿನದಿಂದ ದಿನಕ್ಕೆ ನಿಂದನೆಯನ್ನು ಎದುರಿಸುತ್ತಿದ್ದಾಗ, ನಿಮ್ಮ ಬೇಷರತ್ ಪ್ರೀತಿ ನನ್ನನ್ನು ರಕ್ಷಿಸಿದೆ. ನೀವು ನನ್ನ ಆಶ್ರಯ, ಕುಟುಂಬ, ಮನೆ. ನೀವು ನನ್ನನ್ನು ಅವಮಾನಿಸಿದ್ದೀರಿ ಎಂದು ನನಗೆ ಒಂದು ದಿನವೂ ಅನಿಸಿರಲಿಲ್ಲ.
ನನಗೆ ಹೆಚ್ಚು ಅಗತ್ಯವಿದ್ದಾಗ ನೀವು ನನಗೆ ನೀಡಿದ ಪ್ರೀತಿ, ರಕ್ಷಣೆಗೆ ನಿಮಗೆ ಹೇಗೆ ಧನ್ಯವಾದ ಹೇಳಬೇಕೆಂದು ತಿಳಿಯುತ್ತಿಲ್ಲ. ನಿಮ್ಮಲ್ಲಿ ಪ್ರತಿಯೊಬ್ಬರಿಗಾಗಿ ನಾನು ಯಾವಾಗಲೂ ಇರುತ್ತೇನೆ’ ಎಂದು ರಾಹುಲ್ ಬರೆದುಕೊಂಡಿದ್ದಾರೆ.
ಅಲ್ಲದೇ ಇದೇ ಸಂದರ್ಭದಲ್ಲಿ ಜನ ಅವಕಾಶ ನೀಡಿದರೆ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಯನಾಡು ಕ್ಷೇತ್ರವನ್ನು ಪ್ರತಿನಿಧಿಸಿದರೆ, ಉತ್ತಮ ಕೆಲಸವನ್ನು ಮಾಡುತ್ತಾರೆ ಎಂದು ರಾಹುಲ್ ವಿಶ್ವಾಸ ವ್ಯಕ್ತ ಪಡಿಸಿದರು.