ಶೀಘ್ರ ಮದುವೆ ಆಗಬೇಕಾಗುತ್ತೆ: ರಾಹುಲ್‌ ಗಾಂಧಿ

| Published : May 14 2024, 01:02 AM IST / Updated: May 14 2024, 04:56 AM IST

ಸಾರಾಂಶ

ರಾಯ್‌ಬರೇಲಿ ಜನ ಕೇಳಿದ ಪ್ರಶ್ನೆಗೆ ಉತ್ತರ ನೀಡಿ ಅಚ್ಚರಿ ಮೂಡಿಸಿರುವ ರಾಹುಲ್‌ ಗಾಂಧಿ ತಾನು ಶೀಘ್ರದಲ್ಲೇ ಮದುವೆ ಆಗಬೇಕಾಗುವುದು ಎಂದು ತಿಳಿಸಿದ್ದಾರೆ.

 ರಾಯ್‌ಬರೇಲಿ: ಈವರೆಗೂ ಬ್ರಹ್ಮಚಾರಿ ಆಗೇ ಇರುವ 53ರ ಹರೆಯದ ಕಾಂಗ್ರೆಸ್‌ ಯುವನಾಯಕ ರಾಹುಲ್‌ ಗಾಂಧಿ ಅವರಿಗೆ ಪುನಃ ‘ಯಾವಾಗ ಮದುವೆ ಆಗುತ್ತೀರಿ?’ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ರಾಹುಲ್‌ ಅವರು ‘ಅಬ್‌ ಜಲ್ದೀ ಕರ್ನಿ ಪಡೇಗಿ’ (ಇನ್ನು ಬೇಗ ಆಗಬೇಕಾಗುತ್ತೆ) ಎಂದು ಉತ್ತರಿಸಿದ್ದಾರೆ.

ಉತ್ತರ ಪ್ರದೇಶದ ರಾಯ್‌ಬರೇಲಿಗೆ ಕ್ಷೇತ್ರದ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಸಿದ ನಂತರ ಮೊದಲ ಬಾರಿಗೆ ಕ್ಷೇತ್ರದಲ್ಲಿ ರ್‍ಯಾಲಿ ನಡೆಸಿದ ರಾಹುಲ್‌ ಅವರು, ‘ನಾನು ಇಡೀ ದೇಶ ಸುತ್ತಿ ಪ್ರಚಾರ ಮಾಡುತ್ತಿದ್ದೇನೆ. ಆದರೆ ನನ್ನ ತಂಗಿ ಪ್ರಿಯಾಂಕಾ ನನ್ನ ಪರ ಕ್ಷೇತ್ರಾದ್ಯಂತ ಪ್ರಚಾರ ಮಾಡುತ್ತಿದ್ದಾಳೆ. ಆಕೆಗೆ ಧನ್ಯವಾದ’ ಎಂದು ಪ್ರೀತಿಯಿಂದ ಅವರ ಹೆಗಲ ಮೇಲೆ ಕೈಹಾಕಿ ಹೇಳಿದರು.

ಆಗ ಪ್ರಿಯಾಂಕಾ, ‘ಜನರು ನಿನಗೆ ಏನೋ ಕೇಳುತ್ತಿದ್ದಾರೆ’ ಎಂದಾಗ ವ್ಯಕ್ತಿಯೊಬ್ಬರು ‘ನಿಮ್ಮ ಮದುವೆ ಯಾವಾಗ?’ ಎಂದಿದ್ದು ಕೇಳಿಬಂತು. ಆಗ ರಾಹುಲ್‌, ‘ಅಬ್ ಜಲ್ದೀ ಕರ್ನಿ ಪಡೇಗಿ’ (ಇನ್ನು ಶೀಘ್ರದಲ್ಲೇ ಆಗಬೇಕು) ಎಂದು ಭರವಸೆ ನೀಡಿ ಜನರು ಸಂಭ್ರಮದಲ್ಲಿ ತೇಲುವಂತೆ ಮಾಡಿದರು.