ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ಇಂಡಿಯಾ ಕೂಟ ಹಮ್ಮಿಕೊಂಡಿರುವ ಪ್ರತಿಭಟನೆ 2ನೇ ದಿನವಾದ ಬುಧವಾರವೂ ಮುಂದುವರಿದಿದ್ದು, ದೆಹಲಿಯಲ್ಲಿ ಹೈಡ್ರಾಮಾ ಸೃಷ್ಟಿಯಾಗಿದೆ.

-ಸಿಇಸಿ ಜ್ಞಾನೇಶ್ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

-ಹೋಟೆಲ್‌ನಲ್ಲಿ ಸಭೆ ನಡೆಸಿದ ಬಳಿಕ ದಿಢೀರ್‌ ಪ್ರತಿಭಟನೆ ನಿರ್ಧಾರ

-ಜಂತರ್‌ ಮಂತರ್‌ನತ್ತ ಹೊರಟಿದ್ದ ಸಂಸದರಿಗೆ ಪೊಲೀಸರ ತಡೆ

-ಪೊಲೀಸ್ ಕ್ರಮ ವಿರೋಧಿಸಿ ರಸ್ತೆ ಮಧ್ಯೆ ಧರಣಿ ಕುಳಿತ ನಾಯಕರು

-ಸಂವಿಧಾನ ಕೈಯಲ್ಲಿ ಹಿಡಿದು ರಸ್ತೆ ಮೇಲೆ ಮಲಗಿದ ಪ್ರಿಯಾಂಕಾ

-ರಾಹುಲ್‌ ಮತ್ತು ಪ್ರಿಯಾಂಕಾರನ್ನು ಹೊತ್ತೊಯ್ದ ಭದ್ರತಾ ಸಿಬ್ಬಂದಿ

==

ಪಿಟಿಐ ನವದೆಹಲಿ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ಇಂಡಿಯಾ ಕೂಟ ಹಮ್ಮಿಕೊಂಡಿರುವ ಪ್ರತಿಭಟನೆ 2ನೇ ದಿನವಾದ ಬುಧವಾರವೂ ಮುಂದುವರಿದಿದ್ದು, ದೆಹಲಿಯಲ್ಲಿ ಹೈಡ್ರಾಮಾ ಸೃಷ್ಟಿಯಾಗಿದೆ.

ಜಂತರ್ ಮಂತರ್‌ಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಇಂಡಿಯಾ ಕೂಟದ ಹಲವು ನಾಯಕರನ್ನು ಮಾರ್ಗಮಧ್ಯದಲ್ಲೇ ತಡೆದ ಪೊಲೀಸರು, ಅವರನ್ನೆಲ್ಲ ವಶಕ್ಕೆ ಪಡೆದಿದ್ದಾರೆ. ಈ ಮೂಲಕ 24 ಗಂಟೆಯಲ್ಲಿ 2 ಬಾರಿ ವಿಪಕ್ಷಗಳ ನಾಯಕರು ಪೊಲೀಸ್‌ ವಶಕ್ಕೆ ಹೋದಂತಾಗಿದೆ. ದಿಢೀರ್‌ ಪ್ರತಿಭಟನೆ ಘೋಷಣೆ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಹ್ವಾನದ ಮೇರೆಗೆ ಬುಧವಾರ ದೆಹಲಿಯ ಜನಪಥ್‌ನಲ್ಲಿರುವ ಸಾಗರ್ ರತ್ನ ಹೋಟೆಲ್‌ನಲ್ಲಿ ಇಂಡಿಯಾ ಕೂಟದ ನಾಯಕರು ಸಭೆ ಸೇರಿದ್ದರು. ಸಿಇಸಿ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಒತ್ತಾಯಿಸಿ ತಂತ್ರಗಾರಿಕೆ ರೂಪಿಸುವುದು ಈ ಸಭೆಯ ಉದ್ದೇಶವಾಗಿತ್ತು. ಸಭೆಯ ಬಳಿಕ ದಿಢೀರನೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದು ನಿರ್ಧಾರವಾಯಿತು. ಬಳಿಕ ನಾಯಕರು ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ತೆರಳಲು ಬಸ್‌ಗಳನ್ನು ಏರಿದರು.ಪೊಲೀಸ್‌ ತಡೆ, ರಸ್ತೆ ಮಧ್ಯದಲ್ಲೇ ಧರಣಿ: ಖಾಸಗಿ ಬಸ್‌ಗಳಲ್ಲಿ ಹೊರಟ ಸಂಸದರನ್ನು ಜಂತರ್ ಮಂತರ್ ತಲುಪದಂತೆ ದೆಹಲಿ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಜಂತರ್ ಮಂತರ್‌ನಲ್ಲಿ ಯಾವುದೇ ಪ್ರತಿಭಟನೆಯನ್ನು ನಡೆಸಲು ಪೂರ್ವಾನುಮತಿ ಅಗತ್ಯ. ಅಂತಹ ಅನುಮತಿ ಕೋರುವ ಅರ್ಜಿಗಳನ್ನು, ಉದ್ದೇಶಿತ ಕಾರ್ಯಕ್ರಮಕ್ಕೆ ಕನಿಷ್ಠ 10 ದಿನಗಳ ಮುಂಚಿತವಾಗಿ ದೆಹಲಿಯ ಪೊಲೀಸ್ ಉಪ ಆಯುಕ್ತರಿಗೆ ಸಲ್ಲಿಸಬೇಕೆಂದು ಪೊಲೀಸರು ಸ್ಪಷ್ಟಪಡಿಸಿದರು. ಇದರಿಂದ ಆಕ್ರೋಶಗೊಂಡ ನಾಯಕರು ಶಾಂಗ್ರಿಲಾ ಹೋಟೆಲ್ ಬಳಿಯ ವೃತ್ತದಲ್ಲೇ ರಸ್ತೆಯಲ್ಲಿ ಕುಳಿತು ಧರಣಿ ಆರಂಭಿಸಿದರು. ರಸ್ತೆ ಮೇಲೆ ಮಲಗಿದ ಪ್ರಿಯಾಂಕಾ: ಪೊಲೀಸ್‌ ತಡೆಯನ್ನು ವಿರೋಧಿಸಿ ಸಂಸದೆ ಪ್ರಿಯಾಂಕಾ ಗಾಂಧಿ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದರು. ಈ ವೇಳೆ ಇತರ ಮಹಿಳಾ ನಾಯಕರು ಅವರಿಗೆ ಸಾಥ್‌ ನೀಡಿದರು. ಆಗ ಬೃಹತ್‌ ಸಂಖ್ಯೆಯಲ್ಲಿ ಬಂದ ಮಹಿಳಾ ಪೊಲೀಸ್‌ ಸಿಬ್ಬಂದಿ ಬಲವಂತವಾಗಿ ಪ್ರಿಯಾಂಕಾ ಮತ್ತು ಇತರ ಮಹಿಳಾ ಸಂಸದರನ್ನು ಎತ್ತಿಕೊಂಡು ಹೋಗಿ ಬಸ್‌ಗಳಿಗೆ ತುಂಬಿದರು. ಆ ವೇಳೆ ಪ್ರಿಯಾಂಕಾ ಘೋಷಣೆಗಳನ್ನು ಕೂಗುತ್ತಾ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಹೆಗಲ ಮೇಲೆ ಹೊತ್ತು ರಾಹುಲ್‌ ತೆರವು: ರಸ್ತೆ ಮಧ್ಯದಲ್ಲೇ ಕುಳಿತು ಧರಣಿ ನಡೆಸುತ್ತಿದ್ದ ರಾಹುಲ್‌ ಗಾಂಧಿ ಹಾಗೂ ಇತರ ನಾಯಕರನ್ನು ಭಾರಿ ಸಂಖ್ಯೆಯ ಭದ್ರತಾ ಸಿಬ್ಬಂದಿ ತೆರವುಗೊಳಿಸಲು ಮುಂದಾದರು. ಮೊದಲು ರಾಹುಲ್ ಗಾಂಧಿಯವರನ್ನು ಎಬ್ಬಿಸಿದ ಸಿಬ್ಬಂದಿ, ಅವರನ್ನು ಮೇಲೆ ಹೊತ್ತುಕೊಂಡು ಹೋಗಿ ಬಸ್ಸಿನೊಳಗೆ ಹಾಕಿದರು. ಈ ವೇಳೆ ಕಾಂಗ್ರೆಸ್ ನಾಯಕರಾದ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ಉದಯ್ ಭಾನು ಚಿಬ್ ಬಸ್ಸಿನ ಮೇಲೇರಿ ಆಕ್ರೋಶ ವ್ಯಕ್ತಪಡಿಸಿದರೆ, ಮುಮ್ತಾಜ್ ಪಟೇಲ್ ಬಸ್ಸಿನ ಬಾನೆಟ್ ಮೇಲೆ ಕುಳಿತು ಪ್ರತಿಭಟಿಸಿದರು.