ಅಗ್ನಿವೀರರಿಗೆ ಒಂದು ನ್ಯಾಯ? ಬೇರೆ ಯೋಧರಿಗೆ ಇನ್ನೊಂದು ನ್ಯಾಯ ಏಕೆ : ರಾಹುಲ್‌ ಕಿಡಿ

| Published : Oct 14 2024, 01:20 AM IST / Updated: Oct 14 2024, 05:51 AM IST

Rahul Gandhi

ಸಾರಾಂಶ

ಮಹಾರಾಷ್ಟ್ರದ ನಾಸಿಕ್‌ನಲ್ಲಿ ತರಬೇತಿಯ ವೇಳೆ 2 ಅಗ್ನಿವೀರರು ಮೃತಪಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಎಲ್ಲ ಯೋಧರ ಜೀವಕ್ಕೆ ಏಕೆ ಒಂದೇ ಬೆಲೆ ಇಲ್ಲ? ಅಗ್ನಿವೀರರಿಗೆ ಒಂದು ನ್ಯಾಯ? ಬೇರೆ ಯೋಧರಿಗೆ ಇನ್ನೊಂದು ನ್ಯಾಯ ಏಕೆ?’ ಎಂದು  ಪ್ರಶ್ನಿಸಿದ್ದಾರೆ.

ನವದೆಹಲಿ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ತರಬೇತಿಯ ವೇಳೆ 2 ಅಗ್ನಿವೀರರು ಮೃತಪಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಎಲ್ಲ ಯೋಧರ ಜೀವಕ್ಕೆ ಏಕೆ ಒಂದೇ ಬೆಲೆ ಇಲ್ಲ? ಅಗ್ನಿವೀರರಿಗೆ ಒಂದು ನ್ಯಾಯ? ಬೇರೆ ಯೋಧರಿಗೆ ಇನ್ನೊಂದು ನ್ಯಾಯ ಏಕೆ?’ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಪ್ರಶ್ನಿಸಿದ್ದಾರೆ.

ನಾಸಿಕ್‌ನಲ್ಲಿ ಫೈಯರಿಂಗ್‌ ಅಭ್ಯಾಸದ ವೇಳೆ ಗೋಹಿಲ್‌ ವಿಶ್ವರಾಜ್‌ ಸಿಂಗ್‌ ಮತ್ತು ಸೈಕತ್‌ ಎಂಬ 2 ಅಗ್ನಿವೀರರು ಸಾವನ್ನಪ್ಪಿದ್ದರು. ಇದಕ್ಕೆ ಸಂತಾಪ ಸೂಚಿಸಿರುವ ರಾಹುಲ್‌, ‘ಈ ಘಟನೆ ಅಗ್ನಿವೀರ ಯೋಜನೆ ಬಗ್ಗೆ ಪ್ರಶ್ನೆ ಹುಟ್ಟುಹಾಕುತ್ತಿದ್ದು, ಇದಕ್ಕೆ ಉತ್ತರಿಸುವಲ್ಲಿ ಬಿಜೆಪಿ ಸರ್ಕಾರ ಸೋತಿದೆ. ಮೃತ ಅಗ್ನಿವೀರರ ಕುಟುಂಬಗಳಿಗೆ ಅನ್ಯ ಹುತಾತ್ಮ ಯೋಧರಿಗೆ ನೀಡುವಷ್ಟೇ ಪರಿಹಾರ ನೀಡಲಾಗುವುದೇ? ಅಗ್ನಿವೀರರ ಪರಿವಾರಕ್ಕೆ ಪಿಂಚಣಿ ಸೇರಿದಂತೆ ಅನ್ಯ ಸರ್ಕಾರಿ ಸೌಲಭ್ಯಗಳು ಏಕೆ ಲಭಿಸುವುದಿಲ್ಲ? ಈ ತಾರತಮ್ಯ ಏಕೆ?’ ಎಂದು ಪ್ರಶ್ನಿಸಿದ್ದಾರೆ.

ಅಗ್ನಿವೀರ ಯೋಜನೆಯು ಸೇನೆಗೆ ಅನ್ಯಾಯ ಹಾಗೂ ಹುತಾತ್ಮರಿಗೆ ಅವಮಾನ ಎಂದಿರುವ ರಾಹುಲ್‌, ‘ದೇಶದ ಹಾಗೂ ಯುವಕರ ಭವಿಷ್ಯದ ಸುರಕ್ಷತೆಗಾಗಿ ಬಿಜೆಪಿ ಸರ್ಕಾರದ ಅಗ್ನಿವೀರ ಯೋಜನೆಯನ್ನು ತೆಗೆದುಹಾಕಲು ನಮ್ಮ ಜೈಜವಾನ್‌ ಚಳವಳಿಯೊಂದಿಗೆ ಕೈಜೋಡಿಸಿ’ ಎಂದು ಕರೆ ನೀಡಿದ್ದಾರೆ.