ಸಾರಾಂಶ
ನವದೆಹಲಿ: ರೈಲ್ವೇ ನೌಕರನೊಬ್ಬ ರೈಲಲ್ಲೇ 11 ವರ್ಷದ ಬಾಲಕಿಗೆ ಕಿರುಕುಳ ನೀಡಿದ ಕಾರಣ ಆತನನ್ನು ಪ್ರಯಾಣಿಕರು ಹೊಡೆದು ಸಾಯಿಸಿದ್ದಾರೆ. ಬಿಹಾರದ ಸಿವಾನ್‌ನ ಕುಟುಂಬವು ಬುಧವಾರ ನವದೆಹಲಿಗೆ ಹಮ್‌ಸಫರ್ ಎಕ್ಸ್‌ಪ್ರೆಸ್‌ಗೆ ಹತ್ತಿತ್ತು ಮತ್ತು ರಾತ್ರಿ 11.30 ರ ಸುಮಾರಿಗೆ, ಗ್ರೂಪ್ ಡಿ ರೈಲ್ವೆ ಉದ್ಯೋಗಿ ಪ್ರಶಾಂತ್ ಕುಮಾರ್, ಬಾಲಕಿಯ ತಾಯಿ ಶೌಚಾಲಯಕ್ಕೆ ಹೋದಾಗ ಲೈಂಗಿಕ ಕಿರುಕುಳ ಎಸಗಿದ್ದಾನೆ. ತಾಯಿ ವಾಪಸು ಬಂದಾಗ ವಿಷಯ ಗೊತ್ತಾಗಿದೆ. ಆಗ ಆಕೆ ಇನ್ನೊಂದು ಕೋಚ್‌ನಲ್ಲಿದ್ದ ತನ್ನ ಪತಿ, ಮಾವ ಮತ್ತು ಇತರ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾಳೆ. ಈ ವೇಳೆ ಈ ಎಲ್ಲರೂ ಪ್ರಶಾಂತ್‌ನನ್ನು ಥಳಿಸಿ ಸಾಯಿಸಿದ್ದಾರೆ.
==ಗ್ಯಾಂಗ್‌ರೇಪ್ ಯತ್ನ: ವೈದ್ಯನ ಗುಪ್ತಾಂಗ ಕತ್ತರಿಸಿದ ನರ್ಸ್
ಪಟನಾ: ಕೋಲ್ಕತಾ ವೈದ್ಯೆ ರೇಪ್ ಕೇಸ್ ಮಾಸುವ ಮುನ್ನವೇ ಬಿಹಾರದ ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಸಮಷ್ಟಿಪುರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಮೇಲೆ ವೈದ್ಯ ಸೇರಿ ಮೂವರು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದು, ವೇಳೆ ನರ್ಸ್ ವೈದ್ಯನ ಗುಪ್ತಾಂಗವನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾಳೆ. ಕೃತ್ಯ ಎಸಗಿದ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.ಆರ್‌ಬಿಎಸ್ ಹೆಲ್ತ್‌ಕೇರ್ ಸೆಂಟರ್‌ನಲ್ಲಿ ಬುಧವಾರ ರಾತ್ರಿ ಕೆಲಸ ಮಾಡುತ್ತಿದ್ದ ನರ್ಸ್ ಮೇಲೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ್ ಕುಮಾರ್ ಮತ್ತು ಆತನ ಇಬ್ಬರು ಆಪ್ತರಾದ ಸುನೀಲ್ ಗುಪ್ತಾ ಮತ್ತು ಅವಧೇಶ್ ಕುಮಾರ್ ಕುಡಿದ ಮತ್ತಿನಲ್ಲಿ ಅತ್ಯಾಚಾರ ವೆಸಗಲು ಯತ್ನಿಸಿದ್ದಾರೆ. ಈ ವೇಳೆ ನರ್ಸ್, ತನ್ನ ರಕ್ಷಣೆಗಾಗಿ ಪಕ್ಕದಲ್ಲಿದ್ದ ಬ್ಲೇಡ್ ತೆಗೆದುಕೊಂಡು ಸಂಜಯ್‌ನ ಗುಪ್ತಾಂಗವನ್ನು ಕತ್ತರಿಸಿ ಅಲ್ಲಿಂದ ಓಡಿ ಹೋಗಿದ್ದಾಳೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾಳೆ.
==ಬಾಂಗ್ಲಾ ಹಿಂದೂಗಳ ಕುರಿತ ರಾಗಾ ನಡೆ ಪ್ರಶ್ನಿಸಿದ್ದಕ್ಕೆ ಪತ್ರಕರ್ತನ ಮೇಲೆ ಕೈ ಹಲ್ಲೆ
ನವದೆಹಲಿ: ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯದ ಕುರಿತು ರಾಹುಲ್ ಗಾಂಧಿ ನಡೆ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕಾಂಗ್ರೆಸ್ ನಾಯಕರು ಟೀವಿ ವರದಿಗಾರನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ರಾಹುಲ್ ಅಮೆರಿಕದ ಟೆಕ್ಸಾಸ್‌ಗೆ ಆಗಮನಕ್ಕೂ ಮುನ್ನ ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಜೊತೆ ಇಂಡಿಯಾ ಟುಡೇ ವರದಿಗಾರ ರೋಹಿತ್ ಶರ್ಮಾ ಸಂದರ್ಶನ ನಡೆಸಿದ್ದರು. ಸಂದರ್ಶನದ ಕಡೆಯ ಭಾಗದಲ್ಲಿ ರೋಹಿತ್, ಅಮೆರಿಕ ಸಂಸದರ ಭೇಟಿ ವೇಳೆ ರಾಹುಲ್ ಬಾಂಗ್ಲಾ ಹಿಂದೂಗಳ ಮೇಲಿನ ದಾಳಿಯ ವಿಷಯ ಪ್ರಸ್ತಾಪಿಸುತ್ತಾರೆಯೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಪಿತ್ರೋಡಾ ಉತ್ತರಿಸುವ ಮುನ್ನ ಅಲ್ಲಿದ್ದ 30 ಕಾಂಗ್ರೆಸ್ ನಾಯಕರು ಇದು ವಿವಾದಿತ ವಿಷಯ ಎಂದು ಕೂಗಾಡುತ್ತಾ ರೋಹಿತ್ ಮೈಕ್, ಮೊಬೈಲ್ ಕಿತ್ತೆಸೆದು ಹಲ್ಲೆ ನಡೆಸಿದ್ದಾರೆ. ಜೊತೆಗೆ ಸಂದರ್ಶನದ ದೃಶ್ಯಗಳನ್ನು ಅಳಿಸಿ ಹಾಕಿದ್ದಾರೆ.
==ವೈದ್ಯೆ ರೇಪ್: ಸಂಜಯ ರಾಯ್ ಸುಳ್ಳು ಪತ್ತೆ ಪರೀಕ್ಷೆ ಕೋರಿದ್ದ ಅರ್ಜಿ ವಜಾ
ಕೋಲ್ಕತಾ: ಇಲ್ಲಿನ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ ನಾರ್ಕೋ ಟೆಸ್ಟ್ (ಸುಳ್ಳುಪತ್ತೆ ಪರೀಕ್ಷೆ) ಒಳಪಡಲು ಅನುಮತಿ ನಿರಾಕರಿಸಿದ್ದಾನೆ. ಹೀಗಾಗಿ ಕೋರ್ಟು ಸುಳ್ಳು ಪತ್ತೆ ಪರೀಕ್ಷೆ ಕೋರಿದ್ದ ಸಿಬಿಐ ಅರ್ಜಿಯನ್ನು ವಜಾ ಮಾಡಿದೆ.ಯಾವುದೇ ಪ್ರಕರಣದಲ್ಲಿಯಾದರೂ ತನಿಖಾ ಸಂಸ್ಥೆಯು ಆರೋಪಿಯನ್ನು ನಾರ್ಕೋ ಟೆಸ್ಟ್‌ಗೆ ಒಳಪಡಿಸುವ ಮುನ್ನ ಆರೋಪಿಯ ಸಮ್ಮತಿ ಪಡೆಯಬೇಕು. ಇದಕ್ಕೆ ನ್ಯಾಯಾಲಯವೂ ಬದ್ಧವಾಗಿರಬೇಕು. ಆದರೆ ಇದರಲ್ಲಿ ಸಂಜಯ್ ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ನಾರ್ಕೋ ಟೆಸ್ಟ್ ನಡೆಸುವ ಕುರಿತು ಸಿಬಿಐ ಸಲ್ಲಿಸಿದ್ದ ಮನವಿಯನ್ನು ಕೋಲ್ಕತಾ ಕೋರ್ಟ್ ತಿರಸ್ಕರಿಸಿದೆ. ಇದು ಸಿಬಿಐಗೆ ಇದು ಭಾರಿ ಹಿನ್ನಡೆಯಾಗಿದೆ.