ಕಳೆದ ತಿಂಗಳು ಕರ್ನಾಟಕದಲ್ಲೂ ಇಂಥದ್ದೇ ದೃಶ್ಯಜೈಪುರ: ಕಳೆದ ತಿಂಗಳು ಕರ್ನಾಟಕದಲ್ಲಿ ಸುರಿದ ಆಲಿಕಲ್ಲು ಮಳೆ ಹಿಮಾಚ್ಛಾದಿತ ಕಾಶ್ಮೀರವನ್ನು ನೆನಪಿಸಿದಂತೆಯೇ, ಇದೀಗ ಮರುಭೂಮಿ ನಾಡು ರಾಜಸ್ಥಾನದಲ್ಲೂ ಕಾಶ್ಮೀರದ ಹಿಮಪಾತವನ್ನು ನೆನಪಿಸುವಂತಹ ವಾತಾವರಣವನ್ನು ಸೃಷ್ಟಿಸಿದೆ. ಥಾರ್ ಮರುಭೂಮಿ ಪ್ರದೇಶವಾದ ಬಿಕಾನೇರ್ ಜಿಲ್ಲೆಯ ಅರ್ಜುನ್‌ಸರ್‌ನಲ್ಲಿ ಶುಕ್ರವಾರ ಭಾರೀ ಆಲಿಕಲ್ಲು ಮಳೆ ಸುರಿದಿದ್ದು, ಕೃಷಿ ಹೊಲಗಳು ಹಿಮದಿಂದ ಆವೃತವಾದಂತೆ ಕಾಣುತ್ತಿವೆ. ವೈರಲ್ ಆಗಿರುವ ವೀಡಿಯೋದಲ್ಲಿ, ಇಡೀ ಹೊಲ ಬಿಳಿಯ ಹಿಮದ ಹಾಸಿಗೆಯಂತಾಗಿರುವ ಮನೋಜ್ಞ ದೃಶ್ಯವನ್ನು ಕಾಣಬಹುದು. ಶ್ರೀಗಂಗಾನಗರ, ಜೈಸಲ್ಮೇರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿಯೂ ಇದೇ ರೀತಿಯ ಹವಾಮಾನ ಕಂಡುಬಂದಿದೆ.

==

ಬಾವಿಗೆ ಕಾರು ಬಿದ್ದು ಒಂದೇ ಕುಟುಂಬದ 9 ಮಂದಿ ಸಾವು

ಮಹಾರಾಷ್ಟ್ರದ ನಾಸಿಕ್‌ ಬಳಿಕ ಭೀಕರ ಘಟನೆ


ಮುಂಬೈ: ಕಾರೊಂದು ರಸ್ತೆ ಬದಿಯ ಬಾವಿಗೆ ಬಿದ್ದು ಆರು ಮಕ್ಕಳು ಸೇರಿ ಒಂದೇ ಕುಟುಂಬದ ಒಂಬತ್ತು ಮಂದಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸಂಭವಿಸಿದೆ.ಮೃತಪಟ್ಟವರೆಲ್ಲ ದಿಂಡೋರಿಯ ಇಂದೋರ್‌ ಗ್ರಾಮದವರಾಗಿದ್ದು, ಶುಕ್ರವಾರ ರಾತ್ರಿ ಕೋಚಿಂಗ್‌ ಕ್ಲಾಸ್‌ವೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರಿನಲ್ಲಿ ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ದಿಂಡೋರಿ ಸಮೀಪದ ಶಿವಾಜಿನಗರ ಪ್ರದೇಶದಲ್ಲಿ ಸಾಗುತ್ತಿದ್ದಾಗ ದಾರು ತಪ್ಪಿದ ಕಾರು ಕತ್ತಲೆಯಲ್ಲಿ ರಸ್ತೆಪಕ್ಕದ ಬಾವಿಗೆ ಹೋಗಿ ಬಿದ್ದಿದೆ. ರಾತ್ರಿ ಸುಮಾರು 10.30 ಸುಮಾರಿಗೆ ಈ ಘಟನೆ ನಡೆದಿದ್ದು, ಸುಮಾರು ಎರಡು ಗಂಟೆಗಳ ಕಾಲ ಕ್ರೇನ್ ಬಳಸಿ ಕಾರ್ಯಾಚರಣೆ ನಡೆಸುವ ಮೂಲಕ ಕಾರು ಮೇಲೆತ್ತಲಾಯಿತು.ಘಟನೆ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅ‍ವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.

==

ಪಂಜಾಬ್‌ ಬಿಜೆಪಿ ಕಚೇರಿ ಸ್ಫೋಟಕ್ಕೆ ಜರ್ಮನಿ, ಪೋರ್ಚಗಲ್‌ ನಂಟು

ಚಂಡೀಗಢ: ಪಂಜಾಬ್‌ನ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಇತ್ತೀಚೆಗೆ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಇದೇ ವೇಳೆ, ಈ ಕುಕೃತ್ಯದ ಹಿಂದೆ ಪಾಕಿಸ್ತಾನದ ಗುಪ್ತಚರ ಇಲಾಖೆಯಾಗಿರುವ ಐಎಸ್‌ಐ ಕೈವಾಡವಿತ್ತು. ಕುಖ್ಯಾತ ಉಗ್ರ ಸಂಘಟನೆಯಾದ ಬಬ್ಬರ್‌ ಖಾಲ್ಸಾದ ಹ್ಯಾಂಡ್ಲರ್‌ಗಳು ಪೋರ್ಚುಗಲ್‌ ಮತ್ತು ಜರ್ಮನಿಯಲ್ಲಿ ಕುಳಿತು ಈ ಸಂಚನ್ನು ರೂಪಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

==

ಘಾಯಲ್‌ ಹೂಂ, ಇಸೀಲಿಯೇ ಘಾತಕ್‌ ಹೂಂ: ಧುರಂಧರ್‌ ಶೈಲಿಯಲ್ಲಿ ಛಡ್ಡಾ ಗುಡುಗು

ಆಪ್‌ ವಿರುದ್ಧ ಮುಂದುವರಿದ ವಾಗ್ದಾಳಿ

ನವದೆಹಲಿ: ರಾಜ್ಯಸಭೆಯ ಆಮ್‌ ಆದ್ಮಿ ಪಕ್ಷದ (ಆಪ್‌) ಉಪನಾಯಕ ಸ್ಥಾನದಿಂದ ವಜಾಗೊಂಡಿರುವ ಸಂಸದ ರಾಘವ್‌ ಛಡ್ಡಾ ಶನಿವಾರವೂ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ‘ಘಾಯಲ್‌ ಹೂಂ, ಇಸೀಲಿಯೇ ಘಾತಕ್‌ ಹೂಂ’ (ಗಾಯಗೊಂಡಿದ್ದೇನೆ, ಇದೇ ಕಾರಣಕ್ಕೆ ಘಾತಕನಾಗಿದ್ದೇನೆ) ಎಂದು ಧುರಂಧರ್‌ ಸಿನಿಮಾ ಡೈಲಾಗ್‌ ಮೂಲಕ ಚಾಟಿ ಬೀಸಿದ್ದಾರೆ.

ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ‘ಸದನದಿಂದ ವಿಪಕ್ಷಗಳು ಸಭಾತ್ಯಾಗ ಮಾಡಿದಾಗ ನಾನು ಅವರೊಂದಿಗೆ ಹೊರನಡೆಯಲಿಲ್ಲ ಮತ್ತು ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಯ ಗೊತ್ತುವಳಿಗೆ ಸಹಿ ಹಾಕಲಿಲ್ಲ ಎಂಬುದು ನನ್ನ ಮೇಲಿನ ಮೊದಲ ಆರೋಪ. ಇದು ಶುದ್ಧ ಸುಳ್ಳು. ವಿಪಕ್ಷದವರು ಸಭಾತ್ಯಾಗ ಮಾಡಿ ನಾನು ಅವರಿಗೆ ಬೆಂಬಲ ನೀಡದ ಒಂದೇ ಒಂದು ಘಟನೆಯ ಉದಾಹರಣೆ ಕೊಡಿ’ ಎಂದು ಪಕ್ಷಕ್ಕೆ ಸವಾಲೆಸೆದರು. ಜೊತೆಗೆ ನಾನು ಸಂಸತ್ತಿಗೆ ಜನರ ವಿಷಯಗಳ ಬಗ್ಗೆ ಧ್ವನಿ ಎತ್ತಲು ಬಂದಿದ್ದೇನೆಯೇ ಹೊರತೂ ಗದ್ದಲ ಸೃಷ್ಟಿಸಲು ಅಲ್ಲ ಎಂದು ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.

==

ಇರಾನಿಂದ ಇನ್ನು ಇಂಧನ ತರಿಸಿಕೊಳ್ತೇವೆ: ಭಾರತ

ಪಾವತಿ ಕಾರಣಕ್ಕೆ ಇರಾನ್ ಹಡಗು ಚೀನಾ ಕಡೆಗೆ ಹೋಗಿಲ್ಲ

ನವದೆಹಲಿ: ತೈಲ ಹೊತ್ತು ಗುಜರಾತ್‌ಗೆ ಬರಬೇಕಿದ್ದ ಇರಾನ್‌ನ ಹಡಗೊಂದು ಮಾರ್ಗ ಬದಲಿಸಿ ಚೀನಾಗೆ ಹೋದ ಘಟನೆಗೆ, ಪಾವತಿಯಲ್ಲಾದ ಸಮಸ್ಯೆ ಎಂಬ ವರದಿಗಳನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ. ಜತೆಗೆ, ಇರಾನ್‌ನಿಂದ ಇಂಧನ ತರಿಸಿಕೊಳ್ಳುವ ಬಗ್ಗೆ ಇದೇ ಮೊದಲ ಬಾರಿ ಸ್ಪಷ್ಟಪಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು, ‘ಭಾರತವು 40ಕ್ಕೂ ಅಧಿಕ ದೇಶಗಳಿಂದ ತೈಲ ತರಿಸಿಕೊಳ್ಳುತ್ತಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾಗಿರುವ ಅಡಚಣೆಯಿಂದಾಗಿ ಇರಾನ್‌ನಿಂದಲೂ ಇಂಧನ ತರಿಸಿಕೊಳ್ಳುತ್ತೇವೆ. ಪಾವತಿ ಸಮಸ್ಯೆಯ ಬಗ್ಗೆ ಹರಡಿಸಲಾಗುತ್ತಿರುವ ಮಾಹಿತಿ ವದಂತಿಯಷ್ಟೇ’ ಎಂದಿದೆ. ಜತೆಗೆ, ‘ಹಡಗುಗಳು ದಾರಿ ಮಧ್ಯ ಮಾರ್ಗ ಬದಲಿಸುವುದು ಸಹಜ’ ಎಂದಿದೆ.ಈ ಮೂಲಕ, 7 ವರ್ಷಗಳ ಬಳಿಕ ಇದೇ ಮೊದಲ ಬಾರಿ ಇರಾನ್‌ ತೈಲ ತರಿಸಿಕೊಳ್ಳಲು ಮುಂದಾಗಿರುವುದಾಗಿ ಸರ್ಕಾರ ಅಧಿಕೃತವಾಗಿ ಒಪ್ಪಿಕೊಂಡಿದೆ. ಆದರೆ ಈಗ ಚೀನಾದತ್ತ ತಿರುಗಿರುವ ಹಡಗು ಗುಜರಾತ್‌ಗೆ ಬರಲಿತ್ತೇ ಎಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ.ಗುಜರಾತ್‌ನ ವಾಡಿನಾರ್‌ ಬಂದರಿನ ಕಡೆ ಹೊರಟಿದ್ದ ಇರಾನ್‌ನ ಪಿಂಗ್‌ಶುನ್‌ ಹಡಗು ಮಧ್ಯದಲ್ಲೇ ಚೀನಾ ಕಡೆ ತಿರುಗಿತ್ತು. ಅಮೆರಿಕ ನಿರ್ಬಂಧದಿಂದಾಗಿ ಇಷ್ಟು ದಿನ ಇರಾನ್‌ನಿಂದ ತೈಲ ಆಮದಾಗುತ್ತಿರಲಿಲ್ಲ.