ಲೋಕಸಭಾ ಸ್ಪರ್ಧೆಗೆ ಉತ್ಸುಕ: ರಾಜೀವ್‌ ಚಂದ್ರಶೇಖರ್‌

| Published : Feb 17 2024, 01:16 AM IST / Updated: Feb 17 2024, 11:58 AM IST

rajeev chandrashekhar

ಸಾರಾಂಶ

ಯಾವ ಕ್ಷೇತ್ರದಲ್ಲಿ ನನ್ನ ಸ್ಪರ್ಧೆ ಎಂಬುದು ಬಿಜೆಪಿ ವರಿಷ್ಠರಿಂದ ನಿರ್ಧಾರವಾಗಲಿದೆ ಎಂದು ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

ಪಿಟಿಐ ನವದೆಹಲಿ

‘ನನ್ನ ಮೊದಲ ಲೋಕಸಭಾ ಚುನಾವಣೆಗೆ ಎದುರು ನೋಡುತ್ತಿದ್ದು, ಸ್ಪರ್ಧಿಸಲು ಉತ್ಸುಕನಾಗಿದ್ದೇನೆ. ನಾನು ಸ್ಪರ್ಧಿಸುವ ಕ್ಷೇತ್ರ ಯಾವುದು ಎಂದು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಇತ್ತೀಚೆಗೆ ಕರ್ನಾಟಕ ರಾಜ್ಯಸಭಾ ಸ್ಥಾನದಿಂದ ಅವರು ನಿವೃತ್ತರಾಗಿದ್ದರು. ಆ ಬಳಿಕ ಅವರು ಬೆಂಗಳೂರು ಅಥವಾ ಕೇರಳದಿಂದ ಲೋಕಸಭೆಗೆ ಸ್ಪರ್ಧಿಸಬಹುದು ಎಂಬ ಸುದ್ದಿ ಹರಿದಾಡುತ್ತಿವೆ.

ಶುಕ್ರವಾರ ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದಾಗ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ನನ್ನ ರಾಜಕೀಯ ಜೀವನದ ಇನ್ನೊಂದು ರೋಚಕ ಹಂತ ನೋಡಲು ಕಾತರನಾಗಿದ್ದೇನೆ. 

ಲೋಕಸಭಾ ಸದಸ್ಯರಾಗಲು ರಾಜಕಾರಣಿಯು ತಳಮಟ್ಟದ ಅನುಭವ ಹೊಂದಿರಬೇಕು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅಧೀನದಲ್ಲಿ ನನಗೆ ಕೆಲಸ ಮಾಡಲು ಸಾಧ್ಯವಾಗಿದ್ದು ನನ್ನ ಪಾಲಿನ ಅದೃಷ್ಟ. 

ಹೀಗಾಗಿ ನಾನು ಲೋಕಸಭೆಗೆ ಸ್ಪರ್ಧಿಸಲು ಅರ್ಹನಾಗಿದ್ದೇನೆ’ ಎಂದರು.ಇನ್ನು ತಾವು ಬೆಂಗಳೂರಿನಿಂದ ಅಥವಾ ಕೇರಳದ ತಿರುವನಂತಪುರದಿಂದ (ಕಾಂಗ್ರೆಸ್‌ನ ಶಶಿ ತರೂರ್‌ ವಿರುದ್ಧ) ಸ್ಪರ್ಧಿಸಬಹುದು ಎಂಬ ವರದಿಗಳನ್ನು ನಿರಾಕರಿಸಿದ ಅವರು, ‘ಅವು ಕೇವಲ ಊಹಾಪೋಹ. 

ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷದ ನಾಯಕತ್ವ ನಿರ್ಧರಿಸಲಿದೆ. ಅಲ್ಲಿ ನಾನು ಹೋರಾಡಿ ಗೆಲ್ಲುತ್ತೇನೆ’ ಎಂದರು. ‘ಲೋಕಸಭೆ ಸದಸ್ಯನಾಗುವುದು ಸುಲಭವಲ್ಲ. 

ಲೋಕಸಭಾ ಸದಸ್ಯರಾಗಲು ನೀವು ಅತ್ಯಂತ ತಳಮಟ್ಟದ ರಾಜಕಾರಣಿಯಾಗಿರಬೇಕು, ಜನರೊಂದಿಗೆ ಸಂಪರ್ಕ ಹೊಂದಿರಬೇಕು. 

ಈಗಿನ ಮಾಹಿತಿ ಮತ್ತು ಸಾಮಾಜಿಕ ಮಾಧ್ಯಮದ ಈ ಆಧುನಿಕ ಜಗತ್ತಿನಲ್ಲಿ ಅತ್ಯಂತ ಜವಾಬ್ದಾರಿಯುತ ರಾಜಕಾರಣಿಗಳಾಗಿರಬೇಕು. ನಾನು ಅದನ್ನು ಮಾಡಲು ಸಮರ್ಥನಾಗಿದ್ದೇನೆ ಎಂದು ನನ್ನ ನಾಯಕತ್ವ ಭಾವಿಸಿದೆ ಎಂದು ನನಗೆ ಖುಷಿಯಾಗಿದೆ. ಹಾಗಾಗಿ ನಾನು ಅದನ್ನು ಎದುರು ನೋಡುತ್ತಿದ್ದೇನೆ’ ಎಂದು ಅವರು ಹೇಳಿದರು.

ರಾಜೀವ್‌ ಅವರು ಮೂಲ ಕೇರಳದವರು. ಆದರೆ ಕಳೆದ ಕೆಲವು ದಶಕಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದಾರೆ. ಉದ್ಯಮಿಯಾಗಿರುವ ಅವರು, 2006, 2012 ಹಾಗೂ 2018ರಿಂದ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದರು.