ಬೆಂಗಳೂರಿನ ಕಂಪನಿ, ಪ್ರವರ್ತಕರಿಗೆ ನಿರ್ಬಂಧ ಹೇರಿದ ಸೆಬಿ
ನವದೆಹಲಿ: ಬೆಂಗಳೂರು ಮೂಲದ ಚಿನ್ನಾಭರಣ ಉತ್ಪಾದನೆ ಹಾಗೂ ಸಂಸ್ಕರಣಾ ಕಂಪನಿಯಾದ ರಾಜೇಶ್ ಎಕ್ಸ್‌ಪೋರ್ಟ್ ಲಿ. ಮೇಲೆ ಐದು ವರ್ಷಗಳಲ್ಲಿ 15 ಲಕ್ಷ ಕೋಟಿ ರು.ಗಳಷ್ಟು ಭಾರೀ ಪ್ರಮಾಣದ ಸುಳ್ಳು ಆದಾಯ ತೋರಿಸಿದ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಮುಖ್ಯಸ್ಥ ರಾಜೇಶ್ ಮೆಹ್ತಾ ಅವರಿಗೆ ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸದಂತೆ ನಿರ್ಬಂಧಿಸಿ ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ ಆದೇಶ ಹೊರಡಿಸಿದೆ.ಸೆಬಿಯ ತನಿಖೆಯ ಪ್ರಕಾರ ರಾಜೇಶ್ ಎಕ್ಸ್‌ಪೋರ್ಟ್ 2021ರಿಂದ 2025ರ ವರೆಗೆ 15.15 ಲಕ್ಷ ಕೋಟಿ ತಪ್ಪು ಆದಾಯ ತೋರಿಸಿದೆ. ಸೆಬಿ ಪ್ರಕಾರ ಕಂಪನಿಯ ಶೇ.97ರಿಂದ ಶೇ.99ರಷ್ಟು ಒಟ್ಟು ಆದಾಯವನ್ನು ವಿದೇಶಿ ಅಂಗಸಂಸ್ಥೆ ಅದರಲ್ಲೂ ಮುಖ್ಯವಾಗಿ ಸ್ವಿಜರ್ಲೆಂಡ್‌ನಲ್ಲಿರುವ ವಾಕಾಂಬಿ ಎಸ್‌ಎ ಮೂಲಕ ಬಂದಿರುವಂತೆ ತೋರಿಸಲಾಗಿದೆ. ಆದರೆ ಆಡಿಟ್ ಮಾಡಿದಾಗ ಅಷ್ಟೊಂದು ಮೊತ್ತದ ವಹಿವಾಟೇ ನಡೆದಿಲ್ಲ ಎಂಬುದು ಬೆಳಕಿಗೆ ಬಂದಿದೆ. ಇದಲ್ಲದೆ, ಅನುಮತಿ ಇಲ್ಲದೆ ಕಂಪನಿಯ ಹಣವನ್ನು ಪ್ರವರ್ತಕರಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಆದರೆ ಸೆಬಿ ಆದೇಶವನ್ನು ಕಂಪನಿ ತಿರಸ್ಕರಿಸಿದೆ. ಇದು ಮಧ್ಯಂತರ ಆದೇಶವಾಗಿದೆ. ನಾವು ಸಲ್ಲಿಕೆ ಮಾಡಿರುವ ಎಲ್ಲಾ ದಾಖಲೆಗಳು ಮತ್ತು ಆದಾಯದ ಲೆಕ್ಕಗಳು ಸರಿಯಾಗಿವೆ ಎಂದು ಕಂಪನಿ ಹೇಳಿದೆ.ವಂಚನೆ ಏಕೆ?
ಕಂಪನಿ ಇಷ್ಟು ಮೊತ್ತದ ಸುಳ್ಳು ಆದಾಯ ತೋರಿಸಿದ್ದೇಕೆ ಎಂಬುದನ್ನು ಸೆಬಿ ವಿವರಿಸಿಲ್ಲ, ಆದರೆ ಕಂಪನಿ ಹೆಚ್ಚಿನ ಆದಾಯ ತೋರಿಸಿ ತನ್ನ ಕ್ರೆಡಿಟ್ ರೇಟಿಂಗ್ ಹೆಚ್ಚಿಸಿಕೊಳ್ಳಲು, ಹೆಚ್ಚಿನ ಪ್ರಮಾಣದ ಸಾಲ ಪಡೆಯಲು ಮತ್ತು ಮಾಲೀಕರ ಖಾತೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಳ್ಳಲು ಈ ತಂತ್ರ ಬಳಸಿಕೊಂಡಿರಬಹುದು ಎಂದು ವಿಶ್ಲೇಷಿಸಲಾಗಿದೆ.