ಸೈನಿಕರು ನಮ್ಮನ್ನು ರಕ್ಷಿಸುವ ದೇವರು: ರಾಜನಾಥ್‌ ಸಿಂಗ್‌

| Published : Mar 25 2024, 12:47 AM IST / Updated: Mar 25 2024, 12:58 PM IST

ಸೈನಿಕರು ನಮ್ಮನ್ನು ರಕ್ಷಿಸುವ ದೇವರು: ರಾಜನಾಥ್‌ ಸಿಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಸೈನಿಕರು ಅತ್ಯಂತ ಕನಿಷ್ಠ ತಾಪಮಾನದಲ್ಲಿ ಶತ್ರುಗಳು ಹಾರಿಸುವ ಗುಂಡಿಗೆ ತಮ್ಮ ಎದೆಯೊಡ್ಡಿ ರಾಷ್ಟ್ರದ ಜನತೆ ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಿಸುವಂತೆ ಮಾಡುತ್ತಾರೆ.

ಲೇಹ್‌: ಸೈನಿಕರು ಅತ್ಯಂತ ಕನಿಷ್ಠ ತಾಪಮಾನದಲ್ಲಿ ಶತ್ರುಗಳು ಹಾರಿಸುವ ಗುಂಡಿಗೆ ತಮ್ಮ ಎದೆಯೊಡ್ಡಿ ರಾಷ್ಟ್ರದ ಜನತೆ ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಿಸುವಂತೆ ಮಾಡುತ್ತಾರೆ. 

ಈ ಹಿನ್ನೆಲೆಯಲ್ಲಿ ಅವರು ನಮ್ಮನ್ನು ರಕ್ಷಿಸುವ ದೇವರಿದ್ದಂತೆ ಎಂಬುದಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಬಣ್ಣಿಸಿದರು. ಲೇಹ್‌ನಲ್ಲಿ ಭಾನುವಾರ ಸೈನಿಕರೊಂದಿಗೆ ರಾಜನಾಥ್‌ ಹೋಳಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದರು.

ಈ ವೇಳೆ ಮಾತನಾಡಿದ ಅವರು, ‘ಅತ್ಯಂತ ಕೊರೆವ ಚಳಿಯಲ್ಲಿ ಎಲ್ಲರೂ ಮನೆಯೊಳಗೆ ಇರಲು ಬಯಸುತ್ತಾರೆ. ಆದರೆ ನೀವು (ಸೈನಿಕರು) ಅಂತಹ ಪ್ರತಿಕೂಲ ಹವಾಮಾನದಲ್ಲೂ ನಮ್ಮ ದೇಶವನ್ನು ರಕ್ಷಿಸುವ ಛಲದೊಂದಿಗೆ ಹೋರಾಡುತ್ತೀರಿ. 

ಇದು ದೈವಿಕ ಕೆಲಸವಾಗಿದ್ದು, ಶತ್ರುಗಳ ಮೇಲೆ ಗುಂಡು ಹಾರಿಸುವ ಜೊತೆಗೆ ತಮ್ಮದೇ ಎದೆಯೊಡ್ಡಿ ಗುಂಡು ನಮ್ಮ ದೇಶ ಪ್ರವೇಶಿಸುವುದನ್ನು ತಡೆಯುತ್ತೀರಿ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಸಾಧ್ಯವಾಗುತ್ತಿದೆ. 

ಹೀಗಾಗಿ ನಿಮ್ಮನ್ನು ಸಂಕಷ್ಟಹರ ದೇವಾನುದೇವತೆಗಳೆಂದು ಕರೆದರೂ ಅಡ್ಡಿಯಿಲ್ಲ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇದೇ ವೇಳೆ ರಾಜನಾಥ್‌ ಸಿಂಗ್‌ ಸೈನಿಕರ ಹಣೆಗೆ ತಿಲಕವಿಡುವ ಮೂಲಕ ಹೋಳಿ ಆಚರಿಸಿದರು. ರಾಜನಾಥ್‌ ಹಣೆಗೂ ಸೈನಿಕರು ಬಣ್ಣ ಹಚ್ಚಿದರು.

ಶೌರ್ಯದ ರಾಜಧಾನಿ: ಭಾರತಕ್ಕೆ ದೆಹಲಿ ರಾಷ್ಟ್ರ ರಾಜಧಾನಿಯಾದರೆ ಮುಂಬೈ ಆರ್ಥಿಕ ರಾಜಧಾನಿಯಾಗಿದೆ. ಬೆಂಗಳೂರು ತಾಂತ್ರಿಕ ರಾಜಧಾನಿಯಾಗಿ ಗುರುತಿಸಲ್ಪಟ್ಟಿದೆ. 

ಪ್ರತಿಕೂಲ ಹವಾಮಾನದಲ್ಲೂ ಸೈನಿಕರು ಶತ್ರುಗಳ ವಿರುದ್ಧ ಸದಾಕಾಲ ಕೆಚ್ಚೆದೆಯಿಂದ ಹೋರಾಡುವುದರಿಂದ ಲೇಹ್‌ಅನ್ನು ಭಾರತದ ಶೌರ್ಯ ಮತ್ತು ಧೈರ್ಯದ ರಾಜಧಾನಿ ಎನ್ನಬಹುದು ಎಂದು ತಿಳಿಸಿದರು. 

ಕೊನೇ ಕ್ಷಣದಲ್ಲಿ ಸಿಯಾಚಿನ್‌ ಕಾರ್ಯಕ್ರಮ ರದ್ದು: ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್‌ ಸಿಯಾಚಿನ್‌ನಲ್ಲಿ ಹೋಳಿ ಆಚರಿಸುವ ಕಾರ್ಯಕ್ರಮ ಲೇಹ್‌ಗೆ ಸ್ಥಳಾಂತರ ಮಾಡಲಾಯಿತು.

ಈ ವೇಳೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರಿಗೆ ಹೋಳಿ ಶುಭಾಶಯ ತಿಳಿಸಿ ನಮ್ಮ ದೇಶದಲ್ಲಿ ಹಬ್ಬಗಳು ಸಿಯಾಚಿನ್‌, ಮರುಭೂಮಿ ಮತ್ತು ಸಾಗರದಾಳದಂತಹ ಪ್ರದೇಶಗಳಲ್ಲಿ ಮೊದಲು ಆಚರಿಸಬೇಕು ಎಂದು ಕರೆ ನೀಡಿದರು. 

ನಿಮ್ಮ ರಕ್ಷಣೆ ನಮ್ಮ ಜವಾಬ್ದಾರಿ: ಇದೇ ವೇಳೆ ಸೇನಾ ಸಿಬ್ಬಂದಿಯ ರಕ್ಷಣೆ ಕುರಿತು ಭರವಸೆ ನೀಡುತ್ತಾ, ‘ನೀವು ನಮ್ಮ ದೇಶವನ್ನು ಎಷ್ಟು ದಕ್ಷತೆಯಿಂದ ರಕ್ಷಣೆ ಮಾಡುತ್ತೀರೋ ಅಷ್ಟೇ ದಕ್ಷತೆಯಿಂದ ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಕಾಪಾಡುವ ಕೆಲಸ ಸರ್ಕಾರದ ವತಿಯಿಂದ ಆಗುತ್ತದೆ’ ಎಂದು ಭರವಸೆ ನೀಡಿದರು.