ರಾಷ್ಟ್ರ ರಾಜಧಾನಿ ದೆಹಲಿಯ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣ ವಚನ

| N/A | Published : Feb 21 2025, 12:45 AM IST / Updated: Feb 21 2025, 04:49 AM IST

ಸಾರಾಂಶ

ಅಚ್ಚರಿಯ ರೀತಿಯಲ್ಲಿ ದೆಹಲಿ ಸಿಎಂ ಹುದ್ದೆಗೆ ನಾಮನಿರ್ದೇಶನಗೊಂಡಿದ್ದ ಮೊದಲ ಬಾರಿಯ ಶಾಸಕಿ ರೇಖಾ ಗುಪ್ತಾ, ಅವರು ರಾಷ್ಟ್ರ ರಾಜಧಾನಿಯ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

ನವದೆಹಲಿ: ಅಚ್ಚರಿಯ ರೀತಿಯಲ್ಲಿ ದೆಹಲಿ ಸಿಎಂ ಹುದ್ದೆಗೆ ನಾಮನಿರ್ದೇಶನಗೊಂಡಿದ್ದ ಮೊದಲ ಬಾರಿಯ ಶಾಸಕಿ ರೇಖಾ ಗುಪ್ತಾ, ಅವರು ರಾಷ್ಟ್ರ ರಾಜಧಾನಿಯ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಹಿರಿಯ ಮುಖಂಡರು, ಎನ್‌ಡಿಎ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ರೇಖಾ ಗುಪ್ತ ಅವರು ಪ್ರಮಾಣವಚನ ಸ್ವೀಕರಿಸಿದರು.

ಮುಖ್ಯಮಂತ್ರಿ ಜತೆಗೆ ಸಂಪುಟ ಸದಸ್ಯರಾಗಿ ಸಿಎಂ ಸ್ಥಾನಾಕಾಂಕ್ಷಿ ಆಗಿದ್ದ ಪರ್ವೇಶ್‌ ವರ್ಮಾ, ಆಶಿಶ್ ಸೂಡಾ, ಮಜಿಂದರ್‌ ಸಿಂಗ್‌ ಸಿರ್ಸಾ, ಮಾಜಿ ಆಪ್‌ ನಾಯಕ ಕಪಿಲ್‌ ಮಿಶ್ರಾ, ರವೀಂದರ್‌ ಇಂದ್ರಜ್‌ ಸಿಂಗ್‌ ಮತ್ತು ಪಂಕಜ್‌ ಸಿಂಗ್‌ ಅವರೂ ಪ್ರಮಾಣ ಸ್ವೀಕರಿಸಿದ್ದು, ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ಪ್ರಮಾಣವಚನ ಬೋಧಿಸಿದರು. ಈ ಆರು ಮಂದಿಗೆ ಇನ್ನಷ್ಟೇ ಖಾತೆಗಳು ಹಂಚಿಕೆಯಾಗಬೇಕಿದೆ.

ಎನ್‌ಡಿಎ ಬಲಪ್ರದರ್ಶನ:

ರೇಖಾ ಗುಪ್ತಾ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎನ್‌ಡಿಎ ನಾಯಕರಾದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಗೋವಾ ಸಿಎಂ ಪ್ರಮೋದ್ ಸಾವಂತ್‌, ಹರ್ಯಾಣ ಸಿಎಂ ನಯಾಬ್‌ ಸಿಂಗ್‌, ನಾಗಲ್ಯಾಂಡ್‌ ಸಿಎಂ ಕೋನರ್ಡ್‌ ಸಂಗ್ಮಾ, ಉತ್ತರ ಪ್ರದೇಶ ಡಿಸಿಎಂಗಳಾದ ಕೇಶವ್‌ ಪ್ರಸಾದ್‌ ಮೌರ್ಯ, ಬ್ರಿಜೇಶ್‌ ಪಾಠಕ್‌, ಆಂಧ್ರದ ಡಿಸಿಎಂ ಪವನ್‌ ಕಲ್ಯಾಣ್‌ ಮತ್ತಿತರರೂ ಸಾಕ್ಷಿಯಾದರು.

ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 10 ವರ್ಷದಿಂದ ಅಧಿಕಾರದಲ್ಲಿದ್ದ ಆಮ್ ಆದ್ಮಿ ಪಕ್ಷವನ್ನು ಮಣಿಸಿ ಬಿಜೆಪಿಯು 26 ವರ್ಷಗಳ ಬಳಿಕ ಅಭೂತಪೂರ್ವ ಗೆಲುವು ಸಾಧಿಸಿತ್ತು. ತೀವ್ರ ಪೈಪೋಟಿಯ ನಡುವೆ ಅಚ್ಚರಿ ಎಂಬಂತೆ ಶಾಲಿಮಾರ್‌ ಬಾಗ್‌ ಕ್ಷೇತ್ರದ ಶಾಸಕಿ ರೇಖಾ ಗುಪ್ತಾ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ಆಯ್ಕೆ ಮಾಡಿತ್ತು.

ರೇಖಾ ಗುಪ್ತಾ ಹಳೇ ‘ಗಲಾಟೆ’ ವಿಡಿಯೋ ವೈರಲ್‌

ನವದೆಹಲಿ: ದೆಹಲಿ ನೂತನ ಸಿಎಂ ರೇಖಾ ಗುಪ್ತಾ ಈ ಹಿಂದೆ ದಿಲ್ಲಿ ಪಾಲಿಕೆ ಸದಸ್ಯೆ ಆಗಿದ್ದಾಗ ಹಾಗೂ ಬಿಜೆಪಿ ನಾಯಕಿ ಆಗಿದ್ದಾಗ ಸಾರ್ವಜನಿಕವಾಗಿ ವರ್ತಿಸಿದ ಹಲವು ವಿಡಿಯೋಗಳು ವೈರಲ್‌ ಆಗಿವೆ.2023ರಲ್ಲಿ ಆಪ್-ಬಿಜೆಪಿ ಸದಸ್ಯರ ನಡುವೆ ದಿಲ್ಲಿ ಪಾಲಿಕೆಯಲ್ಲಿ ಸಂಘರ್ಷ ನಡೆದಾಗ ಪಾಲಿಕೆಯ ಸದನದ ಪೋಡಿಯಂ ಅನ್ನು ರೇಖಾ ಧ್ವಂಸ ಮಾಡಿ ಸುದ್ದಿ ಮಾಡಿದ್ದರು. ಆ ವಿಡಿಯೋ ಈಗ ಹರಿದಾಡುತ್ತಿದೆ. ಇದರ ನಡುವೆ, ಅಂದಿನ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಅವರು ಬಳಸಿದ ಭಾಷೆಯ ವಿಡಿಯೋ ಕೂಡ ಮತ್ತೆ ಚಾಲ್ತಿ ಪಡೆದಿವೆ.

ಗುಪ್ತಾ ಅವರ ಹಳೆಯ ಟ್ವೀಟ್‌ಗಳ ಬಗ್ಗೆ ಪೋಸ್ಟ್ ಮಾಡಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಸಾಗರಿಕಾ ಘೋಷ್ , ‘ಕಠಿಣ ಪರಿಶ್ರಮಿ ಮತ್ತು ದಯೆಯುಳ್ಳ ಶೀಲಾ ದೀಕ್ಷಿತ್ ಮತ್ತು ಸ್ಪಷ್ಟವಾಗಿ ಮಾತನಾಡುತ್ತಿದ್ದ ಸುಷ್ಮಾ ಸ್ವರಾಜ್ ಅವರ ಮಾತುಗಳಿಗಿಂತ ರೇಖಾ ಗುಪ್ತಾ ಅವರ ನಿಂದನಾತ್ಮಕ ನಡೆ ನುಡಿ ತುಂಬಾ ಭಿನ್ನವಾಗಿದೆ. ಆದರೆ ಇದು ‘ಹೊಸ’ ಬಿಜೆಪಿ.. ಅಲ್ಲಿ ನಿಂದನೆ ಹಾಗೂ ಕೆಟ್ಟ ವರ್ತನೆ ಸಾಮಾನ್ಯ’ ಎಂದಿದ್ದಾರೆ.

ಆಯುಷ್ಮಾನ್‌ ಭಾರತ ಜಾರಿ: ರೇಖಾ ಮೊದಲ ನಿರ್ಧಾರ

ನವದೆಹಲಿ: ಸಿಎಂ ಹುದ್ದೆಗೇರುತ್ತಿದ್ದಂತೆ ರೇಖಾ ಗುಪ್ತಾ ತಮ್ಮ ಕೆಲಸ ಶುರು ಮಾಡಿದ್ದಾರೆ. ಚುನಾವಣೆಗೂ ಮುನ್ನ ಬಿಜೆಪಿ ಪ್ರಣಾಳಿಕೆಯ ಪ್ರಮುಖ ಭರವಸೆಗಳಲ್ಲಿ ಒಂದಾದ, ಆಯುಷ್ಮಾನ್‌ ಭಾರತ ಯೋಜನೆನ್ನು ದಿಲ್ಲಿಯಲ್ಲಿ ಜಾರಿಗೊಳಿಸಲು ರೇಖಾ ನೇತೃತ್ವದ ಮೊದಲ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಹಿಂದಿನ ಆಪ್‌ ಸರ್ಕಾರ ಈ ಯೋಜನೆ ಜಾರಿ ಮಾಡಿರಲಿಲ್ಲ.

ಇನ್ನು ಆಪ್‌ ಸರ್ಕಾರದ ಅಕ್ರಮಗಳ ಅಂಶಗಳಿವೆ ಎನ್ನಲಾದ 14 ಸಿಎಜಿ ವರದಿಗಳನ್ನು ಮಂಡಿಸಲು ನಿರ್ಧರಿಸಲಾಗಿದೆ,ಕರ್ನಾಟಕದ ಗೃಹಲಕ್ಷ್ಮಿ ಮಾದರಿಯ, ಮಹಿಳೆಯರಿಗೆ ಪ್ರತಿ ತಿಂಗಳು 2,500 ರು. ನೀಡುವುದನ್ನು ಮಾ.8ರಿಂದ ಆರಂಭಿಸುವುದಾಗಿ ಅವರು ಘೋಷಿಸಿದ್ದಾರೆ.

ಅತ್ತ ಮತ್ತೊಂದು ಪ್ರಮುಖ ಭರವಸೆಯಾಗಿದ್ದ ಯಮುನಾ ನದಿ ಸ್ವಚ್ಛತೆಗೂ ಚಾಲನೆ ನೀಡಲಾಗಿದೆ. ಸಿಎಂ ಸೇರಿ 6 ಸಚಿವರು ಮೊದಲ ದಿನ ಯಮುನಾ ತೀರಕ್ಕೆ ಭೇಟಿ ನೀಡಿ ಯಮುನಾ ಆರತಿ ಮಾಡಿದರು.