ಸಾರಾಂಶ
‘ನಟ ದರ್ಶನ್ ಬಲಗೈಗೆ ಶಸ್ತ್ರಚಿಕಿತ್ಸೆಯಾಗಿದ್ದು, ರಾಡ್ ಹಾಕಲಾಗಿದೆ. ಜೈಲಿನಲ್ಲಿ ಚಾಪೆ ಮೇಲೆ ಮಲಗುತ್ತಿರುವುದರಿಂದ ಚಳಿಯಿಂದ ಕೈಯಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಒಂದೂ ಬೆರಳು ಅಲುಗಾಡಿಸಲು ಆಗುತ್ತಿಲ್ಲ
ಬೆಂಗಳೂರು : ‘ನಟ ದರ್ಶನ್ ಬಲಗೈಗೆ ಶಸ್ತ್ರಚಿಕಿತ್ಸೆಯಾಗಿದ್ದು, ರಾಡ್ ಹಾಕಲಾಗಿದೆ. ಜೈಲಿನಲ್ಲಿ ಚಾಪೆ ಮೇಲೆ ಮಲಗುತ್ತಿರುವುದರಿಂದ ಚಳಿಯಿಂದ ಕೈಯಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಒಂದೂ ಬೆರಳು ಅಲುಗಾಡಿಸಲು ಆಗುತ್ತಿಲ್ಲ. ಚಳಿಯಿಂದ ರಕ್ಷಣೆ ಪಡೆಯಲು ಬೆಚ್ಚಗಿನ ವಸ್ತುಗಳಿಂದ ಕೈ ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕಿದೆ. ಇದರಿಂದ ಹಾಸಿಗೆ, ಹೊದಿಕೆ ಹಾಗೂ ದಿಂಬು ಸೇರಿ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು.’
- ಹೀಗಂತ ದರ್ಶನ್ ಪರ ವಕೀಲರು ನ್ಯಾಯಾಲಯವನ್ನು ಕೋರಿದ್ದಾರೆ.
ಅಲ್ಲದೆ, ‘ದರ್ಶನ್ ಪ್ರಕರಣದ ತನಿಖೆ ನಡೆಯುತ್ತಿದ್ದಾಗ ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ್ ಅವರೇ ಇದೀಗ ಕಾರಾಗೃಹಗಳ ಡಿಜಿಪಿ ಆಗಿದ್ದಾರೆ. ದರ್ಶನ್ ಸೆಲೆಬ್ರಿಟಿ ಆಗಿರುವ ಕಾರಣಕ್ಕೆ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಈ ಸಂಬಂಧ ಜೈಲಧಿಕಾರಿಗಳಿಗೆ ಪ್ರಶಸ್ತಿ ಕೊಡುವುದಾಗಿಯೂ ಡಿಜಿಪಿ ಹೇಳಿದ್ದಾರೆ’ ಎಂದೂ ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ಮತ್ತೊಂದು ಅರ್ಜಿ ಸಲ್ಲಿಕೆ:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಹಾಗೂ ಲಕ್ಷ್ಮಣ್ ಸೇರಿ ಐವರು ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಕೋರಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಜೈಲಿನಲ್ಲಿ ಹಾಸಿಗೆ-ಹೊದಿಕೆ ಇತರೆ ಸೌಲಭ್ಯ ಕಲ್ಪಿಸಲು ಕಾರಾಗೃಹ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ದರ್ಶನ್ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಐ.ಪಿ.ನಾಯ್ಕ್ ಅವರು ಬುಧವಾರ ಈ ಅರ್ಜಿಗಳ ವಾದ-ಪ್ರತಿವಾದ ಆಲಿಸಿ, ಸೆ.9ರಂದು ತೀರ್ಪು ನೀಡುವುದಾಗಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ದರ್ಶನ್, ನಾಗರಾಜ್ ಹಾಗೂ ಲಕ್ಷ್ಮಣ್ ಪರ ವಕೀಲ ಎಸ್.ಸುನೀಲ್ ಕುಮಾರ್ ವಾದ ಮಂಡಿಸಿ, ದರ್ಶನ್ ಬಲಗೈಗೆ ಆಗಿರುವ ಶಸ್ತ್ರ ಚಿಕಿತ್ಸೆ, ಚಳಿಯಿಂದ ಕೈಯಲ್ಲಿ ಕಾಣಿಸಿಕೊಂಡಿರುವ ನೋವಿನ ಬಗ್ಗೆ ತಿಳಿಸಿದರು. ಆದ್ದರಿಂದ ಬಟ್ಟೆ, ಹಾಸಿಗೆ, ತಲೆದಿಂಬು ಒದಗಿಸುವಂತೆ ಕೋರಿದ್ದರೂ ಜೈಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ದಯಾನಂದ ಸೂಚನೆ ಮೇರೆಗೆ ಶಿಫ್ಟ್:
‘ಇನ್ನು ದರ್ಶನ್ ಸೆಲೆಬ್ರಿಟಿ ಆಗಿರುವ ಕಾರಣಕ್ಕೆ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿದ್ದಾಗ ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ್, ಈಗ ರಾಜ್ಯ ಕಾರಾಗೃಹಗಳ ಡಿಜಿಪಿಯಾಗಿದ್ದಾರೆ. ಅವರ ಸೂಚನೆ ಮೇರೆಗೆ ದರ್ಶನ್ ಹಾಗೂ ಇತರೆ ಅರ್ಜಿದಾರರನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡಲು ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ. ಜೈಲು ಅಧಿಕಾರಿಗಳಿಗೆ ಪ್ರಶಸ್ತಿ ಕೊಡುವುದಾಗಿ ಡಿಜಿಪಿ ಹೇಳಿದ್ದಾರೆ. ಎನ್ಐಎ ಪ್ರಕರಣವೊಂದರಲ್ಲಿ ಜೈಲಿನಲ್ಲಿ ಬಂಧಿಯಾಗಿರುವ ವೈದ್ಯ ಆರೋಪಿಗೆ ವಿಶೇಷ ಸೌಲಭ್ಯ ಕೊಡಲಾಗಿದೆ. ಆದರೆ, ದರ್ಶನ್‌ಗೆ ಮಾತ್ರ ಕನಿಷ್ಠ ಸೌಲಭ್ಯವನ್ನೂ ಕೊಡುತ್ತಿಲ್ಲ. ಈ ತಾರತಮ್ಯಕ್ಕೆ ಕಾರಾಗೃಹ ಡಿಜಿಪಿ ದಯಾನಂದ ಅವರೇ ಕಾರಣ’ ಎಂದು ಆರೋಪಿಸಿದರು.
‘ದರ್ಶನ್‌ಗೆ ಕುಟುಂಬ ಸದಸ್ಯರೊಂದಿಗೆ ಪೋನ್ ಮೂಲಕ ಮಾತನಾಡಲು ಹಾಗೂ ವಿಡಿಯೋ ಕಾನ್ಫರೆನ್ಸ್‌ಗೆ ಕೂಡ ಅವಕಾಶ ನೀಡಿಲ್ಲ. ಟೀವಿ-ಪೇಪರ್ ಸಹ ಸಿಗುತ್ತಿಲ್ಲ. ತಮ್ಮ ಪ್ರಕರಣದ ವಿಚಾರಣೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಮಾಹಿತಿಯೂ ಇಲ್ಲವಾಗಿದೆ. ಕಾನೂನು ಪ್ರಕಾರ ಅಗತ್ಯ ಸೌಲಭ್ಯಗಳನ್ನು ಕೊಡಲಿ ಸಾಕು’ ಎಂದು ಕೋರಿದರು.
‘ಪರಪ್ಪನ ಅಗ್ರಹಾರದಲ್ಲಿ 2 ಸಾವಿರಕ್ಕೂ ಹೆಚ್ಚು ಕೈದಿಗಳಿದ್ದರೂ ಕೇವಲ ಅರ್ಜಿದಾರರ ವರ್ಗಾವಣೆಗೆ ಕೋರಲಾಗಿದೆ. ಕಾರಾಗೃಹಗಳ ಕಾಯ್ದೆ-1963ರ ಪ್ರಕಾರ ಮರಣದಂಡನೆ, ಜೀವಾವಧಿ ಶಿಕ್ಷೆಗೆ ಒಳಗಾದ, ದಂಡ ಮೊತ್ತ ಪಾವತಿಸದ ಹಾಗೂ ಸನ್ನಡತೆ ತೋರದ, ಜೈಲಿನಲ್ಲಿ ಶಾಂತಿ ಹಾಳು ಮಾಡುವ ಕೈದಿಗಳನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡಲು ಅವಕಾಶವಿದೆ. ಆದರೆ ದರ್ಶನ್ ಸೇರಿ ಎಲ್ಲ ಅರ್ಜಿದಾರರು ಸನ್ನಡತೆ ತೋರಿದ್ದಾರೆ. ಅರ್ಜಿದಾರರು ಜೈಲಿಗೆ ಹೋದ ಎರಡನೇ ದಿನದಲ್ಲಿ ವರ್ಗಾವಣೆಗೆ ಜೈಲು ಅಧಿಕಾರಿಗಳು ಕೋರಿದ್ದಾರೆ. ಅವರ ಈ ಅರ್ಜಿಗಳು ಊರ್ಜಿತವಲ್ಲ, ಅರ್ಜಿದಾರರನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡದಂತೆ ಆದೇಶಿಸಬೇಕು’ ಎಂದು ಕೋರಿದರು.
ದರ್ಶನ್ ವಕೀಲರ ವಾದ
- ದರ್ಶನ್ ಒಂದು ಕೈಗೆ ಆಪರೇಷನ್ ಆಗಿದೆ, ಚಳಿಯಿಂದ ಕೈಯಲ್ಲಿ ನೋವು
- ಬೆಚ್ಚಗಿನ ವಸ್ತುವಿನಿಂದ ಕೈ ಮುಚ್ಚಿಕೊಳ್ಳಬೇಕಿದೆ, ಆದ್ರೆ ಬೆಚ್ಚಗಿನ ಹೊದಿಕೆ ಸಿಗ್ತಿಲ್ಲ
- ಇಂಥದ್ದರಲ್ಲಿ ನಟನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡೋ ಪ್ರಯತ್ನ ಆಗುತ್ತಿದೆ
- ಇದಕ್ಕಾಗಿ ಡಿಜಪಿ ದಯಾನಂದರಿಂದ ಜೈಲಧಿಕಾರಿಗಳಿಗೆ ಪ್ರಶಸ್ತಿಯ ಆಮಿಷ
- ನಟನ ವಕೀಲರ ವಾದ ಆಲಿಸಿ ಕೋರ್ಟ್. ಸ್ಥಳಾಂತರ ಬಗ್ಗೆ ಸೆ.9ಕ್ಕೆ ತೀರ್ಪು---