ದುಬೈ ಚಿನ್ನ ಆಮದಿಗೆ ಕೇಂದ್ರ ಲಗಾಮು

| Published : May 21 2025, 12:01 AM IST

ಸಾರಾಂಶ

ಯುಎಇ ಜತೆಗಿನ ವ್ಯಾಪಾರ ಒಪ್ಪಂದದ ದುರ್ಬಳಕೆ ಮಾಡಿಕೊಂಡು ದುಬೈನಿಂದ ಪ್ಲಾಟಿನಂ ಮಿಶ್ರಲೋಹದ ಹೆಸರಲ್ಲಿ ಚಿನ್ನದ ಆಮದು ಮಾಡಿಕೊಳ್ಳುತ್ತಿದ್ದ ದಂಧೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

- ಮಾನ್ಯತೆ ಪಡೆದ ಆಮದುದಾರರಿಗಷ್ಟೆ ಚಿನ್ನ ಆಮದಿಗೆ ಅನುಮತಿ

- ದುಬೈನಿಂದ ಪ್ಲಾಟಿನಂ ಮಿಶ್ರಲೋಹ ಹೆಸರಲ್ಲಿ ಚಿನ್ನ ಆಮದಿಗೆ ಬ್ರೇಕ್‌

- ತೆರಿಗೆ ವಿನಾಯ್ತಿ ಪಡೆಯುತ್ತಿದ್ದ ರಫ್ತುದಾರರಿಗೆ ಕಡಿವಾಣ

ನವದೆಹಲಿ: ಯುಎಇ ಜತೆಗಿನ ವ್ಯಾಪಾರ ಒಪ್ಪಂದದ ದುರ್ಬಳಕೆ ಮಾಡಿಕೊಂಡು ದುಬೈನಿಂದ ಪ್ಲಾಟಿನಂ ಮಿಶ್ರಲೋಹದ ಹೆಸರಲ್ಲಿ ಚಿನ್ನದ ಆಮದು ಮಾಡಿಕೊಳ್ಳುತ್ತಿದ್ದ ದಂಧೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಯುಎಇಯಿಂದ ಕಚ್ಚಾ, ಪೂರ್ಣರೂಪದಲ್ಲಿ ಉತ್ಪಾದನೆಯಾಗದ ಮತ್ತು ಪೌಡರ್‌ ರೂಪದಲ್ಲಿರುವ ಚಿನ್ನ ಮತ್ತು ಬೆಳ್ಳಿಯ ಆಮದಿನ ಮೇಲೆ ನಿರ್ಬಂಧ ವಿಧಿಸಿದೆ. ಇನ್ನು ಮುಂದೆ ಮಾನ್ಯತೆ ಪಡೆದ ಆಮದುದಾರರಷ್ಟೇ ಈ ರೀತಿಯ ಚಿನ್ನ, ಬೆಳ್ಳಿ ಆಮದು ಮಾಡಿಕೊಳ್ಳಬಹುದಾಗಿದೆ,

ಅಂದರೆ ಈ ರೀತಿಯ ಚಿನ್ನ, ಬೆಳ್ಳಿಯು ನಾಮನಿರ್ದೇಶಿತ ಏಜೆನ್ಸಿಗಳು, ಅರ್ಹ ಜ್ಯುವೆಲ್ಲರಿ ವ್ಯಾಪಾರಿಗಳು ಮತ್ತು ಭಾರತ ಮತ್ತು ಯುಎಇ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದ (ಸಿಎಪಿಎ) ಅಡಿ ತೆರಿಗೆ ವಿನಾಯ್ತಿಗೆ ಮಾನ್ಯತೆ ಪಡೆದ ಆಮದುದಾರರ ಮೂಲಕವಷ್ಟೇ ದೇಶದೊಳಗೆ ಪ್ರವೇಶಿಸಬಹುದಾಗಿದೆ.

ಪ್ಲಾಟಿನಂ ಹೆಸರಲ್ಲಿ ಚಿನ್ನ ಆಮದು ಹೇಗೆ?:

ಯುಎಇಯಿಂದ ಭಾರತ ಪ್ರತಿವರ್ಷ 200 ಮೆಟ್ರಿಕ್‌ ಟನ್‌ನಷ್ಟು ಚಿನ್ನವನ್ನು ಶೇ.1ರಷ್ಟು ತೆರಿಗೆ ಕಡಿತದೊಂದಿಗೆ ಟಿಆರ್‌ಕ್ಯೂ (ಅಧಿಕೃತ ತೆರಿಗೆ ಮೀಸಲು ನಿಯಮ) ಅಡಿ ತರಿಸಿಕೊಳ್ಳಲು ಅವಕಾಶ ಇದೆ. ಕೆಲ ವ್ಯಾಪಾರಿಗಳು ಪ್ಲಾಟಿನಂ ಮಿಶ್ರಲೋಹ ಎಂದು ಲೇಬಲ್‌ ಹಾಕಿ ದುಬೈನಿಂದ ಶೇ.99ರಷ್ಟು ಶುದ್ಧ ಚಿನ್ನ ಆಮದು ಮಾಡಿಕೊಳ್ಳುವ ಮೂಲಕ ಸುಂಕ ವಿನಾಯ್ತಿ ಪಡೆದು ಸರ್ಕಾರಕ್ಕೆ ವಂಚಿಸುತ್ತಿದ್ದರು. ಇಂಥ ಅಕ್ರಮಕ್ಕೆ ಕಡಿವಾಣ ಹಾಕಲೆಂದೇ ಈ ಬಾರಿಯ ಬಜೆಟ್‌ನಲ್ಲಿ ಹೊಸ ಎಚ್‌ಎಸ್‌ (ಹಾರ್ಮೊನೈಸ್ಡ್‌ ಸಿಸ್ಟಂ-ಸುಂಕದ ಕೋಡ್‌) ಅನ್ನು ದುಬಾರಿ ಲೋಹದ ಆಮದಿಗೆ ಪರಿಚಯಿಸಲು ಉದ್ದೇಶಿಸಲಾಗಿತ್ತು.

ಅದರಂತೆ ಶುದ್ಧ ಪ್ಲಾಟಿನಂ ಮೇಲೆ ಪ್ರತ್ಯೇಕ ಕೋಡ್‌ ಪರಿಚಯಿಸಲಾಗಿದೆ. ಈ ರೀತಿಯ ಕೋಡ್‌ ಹೊಂದಿರುವ ಶುದ್ಧ ಪ್ಲಾಟಿನಂ ಆಮದಿನ ಮೇಲಷ್ಟೇ ಸಿಇಪಿಎ ಅಡಿ ತೆರಿಗೆ ವಿನಾಯ್ತಿ ಪಡೆಯಬಹುದಾಗಿದೆ. ಇತರೆ ಪ್ಲಾಟಿನಂ ಮಿಶ್ರ ಲೋಹಗಳಿಗೆ ತೆರಿಗೆ ವಿನಾಯ್ತಿ ಸಿಗುವುದಿಲ್ಲ. ಈ ಮೂಲಕ ಪ್ಲಾಟಿನಂ ಮಿಶ್ರಲೋಹ (ಶೇ.1ರಷ್ಟು ಪ್ಲಾಟಿನಂ, ಶೇ.99 ಚಿನ್ನ) ಹೆಸರಲ್ಲಿ ನಡೆಯುತ್ತಿದ್ದ ಚಿನ್ನದ ಆಮದಿನ ಮೇಲೆ ನಿರ್ಬಂಧ ಬೀಳಲಿದೆ.