ತೆಲಂಗಾಣ ಸಿಎಂ ಆಗಿ ರೇವಂತ್‌ರೆಡ್ಡಿ: ಗುರುವಾರ ಪದಗ್ರಹಣ

| Published : Dec 06 2023, 01:15 AM IST

ಸಾರಾಂಶ

ಕಾಂಗ್ರೆಸ್‌ ಅಧಿಕೃತ ಘೋಷಣೆ. ಎಬಿವಿಪಿ ಮೂಲದ ರೇವಂತ್‌.

ಹೈದರಾಬಾದ್‌: ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ರೇವಂತ್‌ ರೆಡ್ಡಿ ಅವರನ್ನು ನೂತನ ಮುಖ್ಯಮಂತ್ರಿನ್ನಾಗಿ ಕಾಂಗ್ರೆಸ್‌ ಪಕ್ಷ ಆಯ್ಕೆ ಮಾಡಿದೆ. ಗುರುವಾರ ರೇವಂತ್‌ ರಾಜ್ಯದ 2ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಪಕ್ಷ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ.ಹೈದರಾಬಾದ್‌ನಲ್ಲಿ ಡಿ.7ರ ಗುರುವಾರ ಮುಂಜಾನೆ 10.28 ಗಂಟೆಯ ‘ಶುಭ ಮುಹೂರ್ತ’ದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ಆಯೋಜಿಸಲಾಗಿದೆ ಎಂದು ಮೂಲಗಳು ಹೇಳಿವೆ. ಆದರೆ ಸಮಯವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.2 ದಿನದ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸರಳ ಬಹುಮತ ಸಂಪಾದಿಸಿತ್ತು ಹಾಗೂ 10 ವರ್ಷದಿಂದ ಆಡಳಿತ ನಡೆಸುತ್ತಿದ್ದ ಬಿಆರ್‌ಎಸ್‌ಗೆ ಗೇಟ್‌ಪಾಸ್‌ ನೀಡಿತ್ತು. ಬಳಿಕ ರೇವಂತ್‌ ರೆಡ್ಡಿ ಸೇರಿ ಮೂವರ ನಡುವೆ ಸಿಎಂ ಸ್ಥಾನಕ್ಕೆ ಭಾರಿ ಸ್ಪರ್ಧೆ ಏರ್ಪಟ್ಟಿತ್ತು.ಈ ಬಗ್ಗೆ ದಿಲ್ಲಿಯಲ್ಲಿ ಮಂಗಳವಾರ ಇಡೀ ದಿನ ಪಕ್ಷದ ಕೇಂದ್ರೀಯ ವೀಕ್ಷಕ ಹಾಗೂ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಇತರ ವೀಕ್ಷಕರಾದ ಕರ್ನಾಟಕದ ಸಚಿವ ಕೆ.ಜೆ. ಜಾರ್ಜ್‌, ಪಕ್ಷದ ನಾಯಕಿ ದೀಪಾ ದಾಸಮುನ್ಷಿ ಹಾಗೂ ಮಾಣಿಕ್‌ರಾವ್‌ ಠಾಕ್ರೆ ಅವರು ದಿಲ್ಲಿಯಲ್ಲಿ ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಚರ್ಚೆ ನಡೆಸಿದರು. ಬಳಿಕ ಸಂಜೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರು ರೇವಂತ್‌ ರೆಡ್ಡಿ ಹೆಸರು ಘೋಷಿಸಿದರು.ಆದರೆ ಎಷ್ಟು ಜನರು ಸಂಪುಟದಲ್ಲಿ ಇರುತ್ತಾರೆ ಎಂಬ ಮಾಹಿತಿಯನ್ನು ವೇಣು ನೀಡಲಿಲ್ಲ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಿರಿಯ ಕಾಂಗ್ರೆಸ್ ನಾಯಕರಾದ ಉತ್ತಮ್ ಕುಮಾರ್ ರೆಡ್ಡಿ ಮತ್ತು ಭಟ್ಟಿ ವಿಕ್ರಮಾರ್ಕ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಅಥವಾ ಇತರ ಉತ್ತಮ ಖಾತೆ ನೀಡಬಹುದು ಎನ್ನಲಾಗಿದೆ.

-------- ಎಬಿವಿಪಿಯಲ್ಲಿ ಬೆಳೆದ ಹುಡುಗ ರೇವಂತ್‌54 ವರ್ಷದ ರೇವಂತ್‌ ಆರೆಸ್ಸೆಸ್/ಬಿಜೆಪಿ ಕೃಪಾಕಟಾಕ್ಷದ ಎಬಿವಿಪಿಯಿಂದ ಬೆಳೆದು ಬಂದವರು. ಕಾಲಾನಂತರ ಅವರು ತೆಲುಗುದೇಶಂನಲ್ಲಿದ್ದರು. 2017 ರಲ್ಲಿ ತೆಲುಗುದೇಶಂ (ಟಿಡಿಪಿ) ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಕಳೆದ ವರ್ಷವಷ್ಟೇ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.