ಸಾರಾಂಶ
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ನಾಲ್ಕನೇ ದಿನವಾದ ಗುರುವಾರ ಕೂಡಾ ವಿಪಕ್ಷಗಳ ಗದ್ದಲದ ಕಾರಣ ಉಭಯ ಸದನಗಳಲ್ಲೂ ಯಾವುದೇ ಕಲಾಪ ಸಾಧ್ಯವಾಗದೇ ಹೋಗಿದೆ.
ಗುರುವಾರ ಬೆಳಗ್ಗೆ ಲೋಕಸಭೆ ಕಲಾಪ ಆರಂಭವಾಗುತ್ತಲೇ ನೂತನ ಸದಸ್ಯರಾದ ಪ್ರಿಯಾಂಕಾ ಗಾಂಧಿ ಮತ್ತು ರವೀಂದ್ರ ಚೌಹಾಣ್ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ವಕ್ಫ್ ಮಸೂದೆ ಕುರಿತ ಜೆಪಿಸಿ ಅವಧಿ ವಿಸ್ತರಣೆಯ ಕುರಿತು ಸ್ಪೀಕರ್ ಓಂ ಬಿರ್ಲಾ ಘೋಷಣೆ ಮಾಡಿದರು. ಇದಾದ ತಕ್ಷಣವೇ ವಿಪಕ್ಷಗಳು ಸದನದ ಬಾವಿಗೆ ಧುಮುಕಿ, ಅದಾನಿ ಹಗರಣದ ಕುರಿತು ತನಿಖೆ ನಡೆಸಬೇಕು, ಉತ್ತರಪ್ರದೇಶದ ಸಂಭಲ್‌ನಲ್ಲಿ ಹಿಂಸಾಚಾರ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಘೋಷಣೆ ಕೂಗತೊಡಗಿದವು.
ಈ ವೇಳೆ ಮಧ್ಯಪ್ರವೇಶಿಸಿದ ಸಂಸದೀಯ ಖಾತೆ ಸಚಿವ ಕಿರಣ್ ರಿಜಿಜು, ಜೆಪಿಸಿ ಅವಧಿ ವಿಸ್ತರಣೆಗೆ ಸರ್ಕಾರ ಸಮ್ಮತಿಸಿದ್ದರೂ ವಿಪಕ್ಷಗಳು ವಿನಾಕಾರಣ ಕಲಾಪಕ್ಕೆ ಅಡ್ಡಿ ಮಾಡುತ್ತಿವೆ ಎಂದು ಟೀಕಿಸಿದರು. ಆದರೂ ಗದ್ದಲ ಕಡಿಮೆಯಾಗದ ಹಿನ್ನೆಲೆಯಲ್ಲಿ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.
ರಾಜ್ಯಸಭೆಯಲ್ಲೂ ಸದಸ್ಯರು ಅದಾನಿ, ಸಂಭಲ್, ಮಣಿಪುರ ವಿಷಯ ಚರ್ಚೆಗೆ ಆಗ್ರಹಿಸಿ ಪ್ರಶ್ನೋತ್ತರ ಕಲಾಪಕ್ಕೆ ಅಡ್ಡಿ ಮಾಡಿದವು. ಈ ಹಿನ್ನೆಲೆಯಲ್ಲಿ 2 ಬಾರಿ ಕಲಾಪ ಮುಂದೂಡಿ ಅಂತಿಮವಾಗಿ ಶುಕ್ರವಾರಕ್ಕೆ ಕಲಾಪ ಮುಂದೂಡಲಾಯಿತು.