2,000 ರು.ಗಿಂತ ಹೆಚ್ಚಿನ ಮೌಲ್ಯದ ಯುಪಿಐ ವ್ಯಾಪಾರಿ ವಹಿವಾಟಿಗೆ ಶೇ.0.4ರಷ್ಟು ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ಕ್ರಮಕ್ಕೆ ವಿಪಕ್ಷಗಳು ತೀವ್ರ ಆಕ್ರೋಶದ ನಡುವೆಯೇ, ಆರ್‌ಎಸ್‌ಎಸ್‌ ಬೆಂಬಲಿತ ಸ್ವದೇಶಿ ಜಾಗರಣ ಮಂಚ್ (ಎಸ್‌ಜೆಎಂ) ಕೂಡ ಈ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

ನವದೆಹಲಿ: 2,000 ರು.ಗಿಂತ ಹೆಚ್ಚಿನ ಮೌಲ್ಯದ ಯುಪಿಐ ವ್ಯಾಪಾರಿ ವಹಿವಾಟಿಗೆ ಶೇ.0.4ರಷ್ಟು ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ಕ್ರಮಕ್ಕೆ ವಿಪಕ್ಷಗಳು ತೀವ್ರ ಆಕ್ರೋಶದ ನಡುವೆಯೇ, ಆರ್‌ಎಸ್‌ಎಸ್‌ ಬೆಂಬಲಿತ ಸ್ವದೇಶಿ ಜಾಗರಣ ಮಂಚ್ (ಎಸ್‌ಜೆಎಂ) ಕೂಡ ಈ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

ಶುಲ್ಕ ಹೇರಿಕೆಯ ನಿರ್ಧಾರವನ್ನು ಪ್ರಶ್ನಿಸಿರುವ ಎಸ್‌ಜೆಎಂನ ಸಹಸಂಚಾಲಕ ಅಶ್ವನಿ ಮಹಾಜನ್‌, ‘ಬ್ಯಾಂಕ್‌ಗಳು ಎಂಡಿಆರ್‌ ಶುಲ್ಕ ಜಾರಿಯ ಬಗ್ಗೆ ಪ್ರಸ್ತಾಪವನ್ನೇ ಮಾಡಿರಲಿಲ್ಲ. ಮೇಲಾಗಿ ಯುಪಿಐ ಡಿಜಿಟಲ್ ಪಾವತಿಯು ಬ್ಯಾಂಕುಗಳ ವಹಿವಾಟು ವೆಚ್ಚವನ್ನು ಕಡಿಮೆ ಮಾಡಿದೆ. ಹೀಗಿರುವಾಗ ಇದರ ಮೇಲೆ ಎಂಡಿಆರ್ ವಿಧಿಸುವುದು ಸೂಕ್ತವಲ್ಲ. ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಜೊತೆಗೆ, ‘ಶುಲ್ಕ ಹೇರಿಕೆಗೆ ಸರ್ಕಾರ ನೀಡುತ್ತಿರುವ ಕಾರಣಗಳಾದ, ಸೈಬರ್‌ ಭದ್ರತೆ ಮತ್ತಿತರೆ ವಿಷಯಗಳು ಬ್ಯಾಂಕ್‌ನ ಸ್ವಂತ ನಿರ್ವಹಣೆಯ ವಿಷಯ. ಹೀಗಾಗಿ ಈ ವೆಚ್ಚವನ್ನು ಯುಪಿಐನ ವೆಚ್ಚ ಎಂದು ಹೇಳಿ ಅದನ್ನು ಎಂಡಿಆರ್‌ ಹೇರಲು ದಾಳವಾಗಿ ಬಳಸಬಾರದು’ ಎಂದು ಮಹಾಜನ್‌ ಹೇಳಿದ್ದಾರೆ.

ಅಲ್ಲದೆ, ಯುಪಿಐಗೆ ಶೂನ್ಯ ಎಂಡಿಆರ್ ಪದ್ಧತಿಯ ಬಗ್ಗೆ ಅಮೆರಿಕದ ವ್ಯಾಪಾರ ಪ್ರತಿನಿಧಿ ಕಳವಳ ವ್ಯಕ್ತಪಡಿಸಿರುವುದನ್ನು ಉಲ್ಲೇಖಿಸಿರುವ ಮಹಾಜನ್, ‘ಇದು ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಸರ್ಕಾರ ಬದಲಾಯಿಸಬಾರದು ಎಂಬುದಕ್ಕೆ ಮತ್ತಷ್ಟು ಬಲವಾದ ಕಾರಣ ನೀಡುತ್ತದೆ’ ಎಂದು ಮಹಾಜನ್‌ ಹೇಳಿದ್ದಾರೆ.

ರಾಹುಲ್ ತರಾಟೆ:

ಈ ನಡುವೆ ಸರ್ಕಾರದ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಅಮೆರಿಕದ ಪ್ರಭಾವಕ್ಕೆ ಒಳಗಾಗಿ ಪ್ರಧಾನಿ ಮೋದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಅಮೆರಿಕದ ಮುಂದೆ ಮಂಡಿಯೂರುವುದನ್ನು ಬಿಟ್ಟು ಬೆನ್ನೆಲುಬು ನೆಟ್ಟಗೆ ಮಾಡಿಕೊಂಡು ನಿಲ್ಲಲಿ. ತಕ್ಷಣವೇ ಈ ಯುಪಿಐ ತೆರಿಗೆಯನ್ನು ಹಿಂಪಡೆಯಲಿ. ಸರ್ಕಾರದ ಈ ಕ್ರಮದಿಂದ ಅಮೆರಿಕಕ್ಕೆ ಭಾರೀ ಆರ್ಥಿಕ ಲಾಭವಾಗಲಿದೆ’ ಎಂದು ಕಿಡಿಕಾರಿದ್ದಾರೆ.

‘ನೋಟಾಕ್ಕೆ ಮೋದಿ ಹೊಸ ಅರ್ಥ

ಮತ್ತೊಂದೆಡೆ, ‘ನೋಟಾಕ್ಕೆ ಮೋದಿ ಹೊಸ ಅರ್ಥ ನೀಡಿದ್ದಾರೆ ಇದೀಗ ನೋಟಾ ಎಂದರೆ ನರೇಂದ್ರಾಸ್‌ ಆನ್‌ಗೋಯಿಂಗ್‌ ಟ್ರಂಪ್‌ ಅಪೀಸ್‌ಮೆಂಟ್‌’ ಎಂದು ಕಾಂಗ್ರೆಸ್‌ ವ್ಯಂಗ್ಯವಾಗಿದೆ. ಅಲ್ಲದೆ ಅಮೆರಿಕದ ಕಾರ್ಡ್‌ ಕಂಪನಿಗಳು ಭಾರತದ ಯುಪಿಐ ಜೊತೆಗೆ ಸ್ಪರ್ಧಿಸಲು ನೆರವಾಗಲಿ ಎಂದು ಸರ್ಕಾರ ಈ ಕ್ರಮ ಕೈಗೊಂಡಿದೆಯೇ ಎಂದು ಪ್ರಶ್ನಿಸಿದೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕದ ವ್ಯಾಪಾರ ಪ್ರತಿನಿಧಿಗಳು, ಭಾರತದ ಯುಪಿಐ ವ್ಯವಸ್ಥೆಯಿಂದಾಗಿ ಅಮೆರಿಕದ ವೀಸಾ ಮತ್ತು ಮಾಸ್ಟರ್‌ಕಾರ್ಡ್‌ ಕಂಪನಿಗಳು ಭಾರತ ಬಿಡುವಂತಾಗಿದೆ ಎಂದು ಆರೋಪಿಸಿದ್ದರು ಎಂಬುದನ್ನು ನೆನಪಿಸಿದೆ.

ವಿಪಕ್ಷಗಳಾದ ಟಿಎಂಸಿ ಹಾಗೂ ಆರ್‌ಜೆಡಿ ನಾಯಕರು ಕೂಡ ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ.