ಸಾರಾಂಶ
ಕೊಯಮತ್ತೂರಿನ ಸದ್ಗುರು ಅವರ ಈಶ ಫೌಂಡೇಶನ್‌ನಲ್ಲಿ ತಮ್ಮ ಇಬ್ಬರು ಪುತ್ರಿಯರನ್ನು ಬಂಧಿಯಾಗಿರಿಸಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ
ನವದೆಹಲಿ : ಕೊಯಮತ್ತೂರಿನ ಸದ್ಗುರು ಅವರ ಈಶ ಫೌಂಡೇಶನ್‌ನಲ್ಲಿ ತಮ್ಮ ಇಬ್ಬರು ಪುತ್ರಿಯರನ್ನು ಬಂಧಿಯಾಗಿರಿಸಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ ಮತ್ತು ಮಹಿಳೆಯರು ಅಲ್ಲಿ ಸ್ವಯಂಪ್ರೇರಣೆಯಿಂದ ಮತ್ತು ಯಾವುದೇ ಬಲವಂತವಿಲ್ಲದೆ ವಾಸಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದೆ.
‘ಪುತ್ರಿಯರನ್ನು ಅಕ್ರಮ ಬಂಧನದಲ್ಲಿ ಇರಿಸಲಾಗಿದೆ. ಅವರ ಬ್ರೇನ್‌ವಾಶ್ ಮಾಡಲಾಗಿದೆ’ ಎಂದು ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಿಚಾರಣೆ ನಡೆಸುತ್ತಿತ್ತು ಹಾಗೂ ಆಶ್ರಮದ ವಿರುದ್ಧ ತನಿಖೆಗೆ ಆದೇಶಿಸಿತ್ತು. ಹೀಗಾಗಿ ಸುಮಾರು 150 ಪೊಲೀಸರು ಇತ್ತೀಚೆಗೆ ಆಶ್ರಮಕ್ಕೆ ಹೋಗಿ ಆಶ್ರಮವಾಸಿಗಳ ವಿಚಾರಣೆ ಮಾಡಿದ್ದರು. ಇದನ್ನು ಪ್ರಶ್ನಿಸಿ ಆಶ್ರಮವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ ಅವರ ಪೀಠ, ‘ಇಬ್ಬರೂ ಹೆಣ್ಣುಮಕ್ಕಳು ಸ್ವಯಂಪ್ರೇರಿತವಾಗಿ ತಾವು ಆಶ್ರಮದಲ್ಲಿದ್ದೇವೆ ಎಂದು ಖುದ್ದು ಕೋರ್ಟ್ ಮುಂದೆ ಹೇಳಿದ್ದಾರೆ. ಹೀಗಾಗಿ ಅವರ ಹೇಳಿಕೆಗಳನ್ನು ದಾಖಲಿಸಿದ ನಂತರವೂ ವಿಷಯವನ್ನು ಜೀವಂತವಾಗಿಟ್ಟುಕೊಂಡು ಹೈಕೋರ್ಟ್ ವಿಚಾರಣೆ ಮುಂದುವರಿಸಿದ್ದು ಸರಿಯಲ್ಲ. ಹೈಕೋರ್ಟ್ ಅಧಿಕಾರ ವ್ಯಾಪ್ತಿಯನ್ನು ಮೀರಿದೆ’ ಎಂದು ಹೇಳಿ ವಿಚಾರಣೆ ರದ್ದುಗೊಳಿಸಿತು.
ಆದರೆ ತನ್ನ ಆದೇಶ ಕೇವಲ ಇಬ್ಬರು ಮಹಿಳೆಯರ ಆಶ್ರಮ ವಾಸಕ್ಕೆ ಸಂಬಂಧಿಸಿದ್ದಾಗಿದೆ. ಇನ್ನು ಆಶ್ರಮದಲ್ಲಿನ ವೈದ್ಯರೊಬ್ಬರ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿತು.