ಹರ್ಯಾಣ ಅಭ್ಯರ್ಥಿಗಳಿಗೆ ಹೆಚ್ಚು ಅಂಕ: ಸುಪ್ರೀಂನಿಂದ ನೀತಿ ರದ್ದು

| Published : Jun 25 2024, 12:32 AM IST / Updated: Jun 25 2024, 05:06 AM IST

ಸಾರಾಂಶ

ನೇಮಕಾತಿ ಪರೀಕ್ಷೆಗಳಲ್ಲಿ ತನ್ನ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.5ರಷ್ಟು ಹೆಚ್ಚುವರಿ ಅಂಕ ನೀಡಲು ಹರ್ಯಾಣ ಸರ್ಕಾರ ರೂಪಿಸಿದ್ದ ನೀತಿಯನ್ನು ಸುಪ್ರೀಂಕೋರ್ಟ್‌ ಕೂಡ ರದ್ದುಗೊಳಿಸಿದೆ.

 ನವದೆಹಲಿ : ನೇಮಕಾತಿ ಪರೀಕ್ಷೆಗಳಲ್ಲಿ ತನ್ನ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.5ರಷ್ಟು ಹೆಚ್ಚುವರಿ ಅಂಕ ನೀಡಲು ಹರ್ಯಾಣ ಸರ್ಕಾರ ರೂಪಿಸಿದ್ದ ನೀತಿಯನ್ನು ಸುಪ್ರೀಂಕೋರ್ಟ್‌ ಕೂಡ ರದ್ದುಗೊಳಿಸಿದೆ. ಈ ಸಂಬಂಧ ಪಂಜಾಬ್‌ ಹಾಗೂ ಹರ್ಯಾಣ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.

ಜನಪ್ರಿಯತೆ ಗಳಿಸಲು ಜಾರಿಗೆ ತಂದಿರುವ ಕ್ರಮ ಇದಾಗಿದೆ. ಹೈಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಯಾವುದೇ ಲೋಪ ಕಂಡುಬರುತ್ತಿಲ್ಲ ಎಂದು ಹೇಳಿದ ಸುಪ್ರೀಂಕೋರ್ಟ್‌, ಹರ್ಯಾಣ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿತು.

ಪ್ರತಿಭಾವಂತ ವಿದ್ಯಾರ್ಥಿ 60 ಅಂಕ ಗಳಿಸಿರುತ್ತಾನೆ. ಮತ್ತೊಬ್ಬ ಕೂಡ 60 ಅಂಕ ಪಡೆದುಕೊಂಡಿರುತ್ತಾನೆ. 5 ಹೆಚ್ಚುವರಿ ಅಂಕ ಗಳಿಸಿ ಆತ ಮೇಲಕ್ಕೆ ಹೋಗುತ್ತಾನೆ. ಇಂತಹ ಕ್ರಮವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ಕೋರ್ಟ್‌ ಚಾಟಿ ಬೀಸಿತು.

ನೇಮಕಾತಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಸಾಮಾಜಿಕ ಹಾಗೂ ಆರ್ಥಿಕ ಸ್ಥಾನಮಾನವನ್ನು ಪರಿಗಣಿಸಿ, ರಾಜ್ಯದ ನಿವಾಸಿಗಳಾಗಿರುವ ವಿದ್ಯಾರ್ಥಿಗಳಿಗೆ ಶೇ.5ರಷ್ಟು ಹೆಚ್ಚುವರಿ ಅಂಕ ನೀಡುವ ನೀತಿಯನ್ನು ಹರ್ಯಾಣ ಸರ್ಕಾರ ರೂಪಿಸಿತ್ತು. ಮೇ 31ರಂದು ಹೈಕೋರ್ಟ್‌ ಇದನ್ನು ರದ್ದುಗೊಳಿಸಿತ್ತು. ಇದರ ವಿರುದ್ಧ ಹರ್ಯಾಣ ಸಿಬ್ಬಂದಿ ನೇಮಕಾತಿ ಆಯ್ಕೆ ಆಯೋಗ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.