ಸರ್ಕಾರಿ ಕಟ್ಟಡಗಳಲ್ಲಿ ಬೀದಿ ನಾಯಿಗೆ ಅಂಕುಶ : ಸುಪ್ರೀಂ ಸುಳಿವು

| N/A | Published : Nov 04 2025, 01:45 AM IST / Updated: Nov 04 2025, 05:37 AM IST

stray dog

ಸಾರಾಂಶ

ಸರ್ಕಾರಿ ಸಂಸ್ಥೆಗಳು, ಕಟ್ಟಡಗಳು ಹಾಗೂ ಕಚೇರಿಗಳಲ್ಲಿ ಬೀದಿ ನಾಯಿಗಳ ಕಾಟಕ್ಕೆ ಸಂಬಂಧಿಸಿದಂತೆ ನ.7 ರಂದು ಹಲವು ನಿರ್ದೇಶನಗಳನ್ನು ನೀಡುವುದಾಗಿ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಸೋಮವಾರ ತಿಳಿಸಿದೆ.

 ನವದೆಹಲಿ :  ಸರ್ಕಾರಿ ಸಂಸ್ಥೆಗಳು, ಕಟ್ಟಡಗಳು ಹಾಗೂ ಕಚೇರಿಗಳಲ್ಲಿ ಬೀದಿ ನಾಯಿಗಳ ಕಾಟಕ್ಕೆ ಸಂಬಂಧಿಸಿದಂತೆ ನ.7 ರಂದು ಹಲವು ನಿರ್ದೇಶನಗಳನ್ನು ನೀಡುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.

ಸಕಾರಿ ಕಚೇರಿ ಹಾಗೂ ಸಂಸ್ಥೆಗಳಲ್ಲೂ ಬೀದಿನಾಯಿಗಳಿದ್ದು, ಅವುಗಳನ್ನು ಬೆಂಬಲಿಸುವ ಹಾಗೂ ತಿಂಡಿ-ಊಟ ನೀಡುವ ನೌಕರರಿದ್ದಾರೆ. ಅಲ್ಲಿ ಯಾವ ರೀತಿ ಈ ಬಗ್ಗೆ ನಿಯಮಗಳಿರಬೇಕು ಎಂದು ನ.7ರಂದು ನಿರ್ದೇಶನಗಳನ್ನು ಹೊರಡಿಸುತ್ತೇವೆ ಎಂದು ದೇಶದಲ್ಲಿ ಹೆಚ್ಚುತ್ತಿರುವ ಬೀದಿನಾಯಿ ಹಾವಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾ। ವಿಕ್ರಂ ನಾಥ್‌, ನ್ಯಾ। ಸಂದೀಪ್ ಮೆಹ್ತಾ ಹಾಗೂ ನ್ಯಾ। ಎನ್‌.ವಿ. ಅಂಜಾರಿಯಾ ಅವರ ಪೀಠ ಹೇಳಿದೆ.

ಈ ಮೂಲಕ ಸರ್ಕಾರಿ ಕಟ್ಟಡ, ಸಂಸ್ಥೆಗಳಲ್ಲಿ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕುವುದಕ್ಕೆ ನಿಯಂತ್ರಣ ಹೇರುವ ಸುಳಿವು ನೀಡಿದೆ. ಸುಪ್ರೀಂ ಕೋರ್ಟ್‌ ಸೇರಿ ಅನೇಕ ಸರ್ಕಾರಿ ಕಟ್ಟಡಗಳಲ್ಲಿ ಬೀದಿನಾಯಿಗಳು ಇದ್ದು, ಅವನ್ನು ಅಲ್ಲಿದ್ದವರೇ ಪೋಷಣೆ ಮಾಡುತ್ತಿರುವುದು ಇಲ್ಲಿ ಗಮನಾರ್ಹವಾಗಿದೆ.

ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಅಫಿಡವಿಟ್‌, ಮತ್ತಿತರ ವಿಚಾರಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ವಲಯದ ಇನ್‌ಸ್ಟಿಟ್ಯೂಷನ್‌ಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿ ನಿರ್ದೇಶನಗಳನ್ನು ಹೊರಡಿಸಲಿದ್ದೇವೆ. ಬೀದಿ ನಾಯಿಗಳನ್ನು ಬೆಂಬಲಿಸುವ ಸಿಬ್ಬಂದಿ ಇರುವ ಸಂಸ್ಥೆಗಳಿಗೆ ಇದು ಅನ್ವಯವಾಗಲಿದೆ ಎಂದು ತಿಳಿಸಿದೆ.

ಎಲ್ಲಾ ರಾಜ್ಯಗಳ ಸಿಎಸ್‌ಗಳು ಹಾಜರ್‌:

ಬೀದಿನಾಯಿ ಹಾವಳಿ ನಿಯಂತ್ರಣ ಬಗ್ಗೆ ಅಫಿಡವಿಟ್‌ ಸಲ್ಲಿಸಿಲ್ಲ ಎಂದು ಇತ್ತೀಚೆಗೆ ಕೋರ್ಟ್ ರಾಜ್ಯ ಸರ್ಕಾರಗಳ ಮೇಲೆ ಗರಂ ಆಗಿತ್ತು ಹಾಗೂ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಹಾಜರಾತಿಗೆ ಆದೇಶಿಸಿತ್ತು. ಹೀಗಾಗಿ ಕೋರ್ಟ್‌ನ ಎಚ್ಚರಿಕೆಯ ಬಳಿಕ ಎಲ್ಲ ಕೇಂದ್ರಾಡಳಿತ ಮತ್ತು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು (ಸಿಎಸ್‌ಗಳು) ಸೋಮವಾರ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಕೇರಳದ ಮುಖ್ಯ ಕಾರ್ಯದರ್ಶಿ ಗೈರಾಗಿದ್ದರು. ಅವರ ಬದಲು ಪ್ರಧಾನ ಕಾರ್ಯದರ್ಶಿಗೆ ವಿಚಾರಣೆ ವೇಳೆ ಉಪಸ್ಥಿತರಿರಲು ಕೋರ್ಟ್‌ ಅವಕಾಶ ಮಾಡಿಕೊಟ್ಟಿತು.

ತ್ರಿಸದಸ್ಯ ಪೀಠ ಹೇಳಿದ್ದೇನು?

- ಸರ್ಕಾರಿ ಸಂಸ್ಥೆ, ಕಟ್ಟಡಗಳಲ್ಲೂ ಬೀದಿ ನಾಯಿ ಪ್ರೋತ್ಸಾಹಕರಿದ್ದಾರೆ

- ಅಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ?

- ಈ ಬಗ್ಗೆ ನ.7ರಂದು ನಿರ್ದೇಶನ ನೀಡುತ್ತೇವೆ: ತ್ರಿಸದಸ್ಯ ಪೀಠ

Read more Articles on