ಸಾರಾಂಶ
ಮಂದಿರ ಕಟ್ಟಿದರೆ ಸಾಲದು, ರಾಮನ ತತ್ವ ಪಾಲಿಸಿ ಎಂದು ಬಿಜೆಪಿಗರಿಗೆ ಹಿರಿಯ ನಾಯಕ ಶಾಂತಕುಮಾರ್ ಬುದ್ಧಿಮಾತು ಹೇಳಿ ಹಿಮಾಚಲದಲ್ಲಿ ಬಿಜೆಪಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಮ್ಲಾ: ಬಿಜೆಪಿಯು ರಾಮಮಂದಿರವನ್ನು ಕಟ್ಟುವ ಜೊತೆಗೆ ರಾಮನ ತತ್ವಾದರ್ಶಗಳನ್ನೂ ಮೈಗೂಡಿಸಿಕೊಂಡು ಪಾಲನೆ ಮಾಡಬೇಕಾದ ಅಗತ್ಯವಿದೆ ಎಂದು ಹಿಮಾಚಲ ಪ್ರದೇಶದ ಬಿಜೆಪಿ ನಾಯಕ ಶಾಂತಕುಮಾರ್ ಹೇಳಿದ್ದಾರೆ.
ಈ ಮೂಲಕ ಬಿಜೆಪಿಯಲ್ಲೇ ಇದ್ದರೂ ಆಗಾಗ ಪಕ್ಷದ ನಡೆಗಳಿಗೆ ಅಸಮಾಧಾನ ವ್ಯಕ್ತಪಡಡಿಸುತ್ತಿದ್ದ ಅವರು, ಈಗ ಮತ್ತೊಮ್ಮೆ ಭುಸುಗುಟ್ಟಿದ್ದಾರೆ.
ಹಿಮಾಚಲದಲ್ಲಿ ಬಿಜೆಪಿಗೆ ಕಾಂಗ್ರೆಸ್‌ನ ಆರು ಮತ್ತು ಮೂರು ಪಕ್ಷೇತರ ಶಾಸಕರು ರಾಜೀನಾಮೆ ನೀಡಿ ಬಂದದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತದಲ್ಲಿ ರಾಜಕಾರಣವು ಗುಲಾಮರಿಂದ ಬಂದ ಬಳುವಳಿಯಾಗಿದೆ. ಆದರೆ ಸ್ವತಂತ್ರ ಭಾರತದಲ್ಲೂ ರಾಜಕಾರಣ ಎಂಬುದು ನಿರ್ಲಜ್ಜವಾಗಿದೆ.
ಈ ರಾಜಕಾರಣದ ಹೊಲಸೆಂಬ ಅಲೆಯಲ್ಲಿ ನಮ್ಮ ಪಕ್ಷವೂ ಕೊಚ್ಚಿಕೊಂಡು ಹೋಗುತ್ತಿರುವುದನ್ನು ನೋಡಿ ದುಃಖವುಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕೇವಲ ರಾಮಮಂದಿರ ಕಟ್ಟಿದರೆ ಸಾಲದು. ಆತನ ತತ್ವಗಳನ್ನೂ ಪಾಲನೆ ಮಾಡಬೇಕು’ ಎಂದರು.