ಸಾರಾಂಶ
ನವದೆಹಲಿ/ಲಖನೌ : ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತೆರಳಿ ಐತಿಹಾಸಿಕ ಅಂತರಿಕ್ಷ ಯಾನ ಮುಗಿಸಿ ಭೂಮಿಗೆ ಹಿಂದಿರುಗಿರುವ ಗಗನಯಾತ್ರಿ ಶುಭಾಂಶು ಶುಕ್ಲಾ, ಕಾರ್ಯಾಚರಣೆ ಮುಗಿದ ಬಳಿಕ ಇದೇ ಮೊದಲ ಬಾರಿಗೆ ತಾಯ್ನಾಡು ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಭಾನುವಾರ ದೆಹಲಿಗೆ ಬರಲಿರುವ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಆ ಬಳಿಕ ತಮ್ಮ ಹುಟ್ಟೂರು ಉತ್ತರ ಪ್ರದೇಶದ ಲಖನೌಗೆ ತೆರಳಲಿದ್ದಾರೆ. ಲಖನೌ ನಿವಾಸಿಗಳು ಅವರ ಬರುವಿಕೆಗೆ ಕಾದಿದ್ದು, ‘ಭವ್ಯ ವಿಜಯ ಮೆರವಣಿಗೆ’ ಹಮ್ಮಿಕೊಂಡಿದ್ದಾರೆ.
ಆ.22-23ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನದ ಆಚರಣೆಯಲ್ಲಿಯೂ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಭಾರತಕ್ಕೆ ವಿಮಾನ ಹತ್ತಿ ಅದರ ಫೋಟೋ ಜತೆಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ‘ಭಾರತಕ್ಕೆ ಮರಳಲು ವಿಮಾನದಲ್ಲಿ ಕುಳಿತಾಗ ನನ್ನ ಹೃದಯದಲ್ಲಿ ಮಿಶ್ರಭಾವ ಉಂಟಾಗುತ್ತಿದೆ. ಕಳೆದ ಒಂದು ವರ್ಷದಿಂದ ನನ್ನ ಬೆನ್ನಿಗೆ ನಿಂತ ಅದ್ಭುತ ಗೆಳೆಯರನ್ನು ಬಿಟ್ಟು ಬರುತ್ತಿದ್ದೇನೆ. ಆದರೆ ಕಾರ್ಯಾಚರಣೆ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿರುವ ನನ್ನೆಲ್ಲ ಸ್ನೇಹಿತರು, ಕುಟುಂಬವನ್ನು ಭೇಟಿ ಮಾಡಲು ಉತ್ಸುಕನೂ ಆಗಿದ್ದೇನೆ. ಎಲ್ಲವೂ ಒಂದೇ ಬಾರಿಗೆ- ಜೀವನ ಎಂದರೆ ಇದೇ ಎನಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ರಷ್ಯಾ ಗಗನಯಾನಿ ಯೂರಿ ಗಗರಿನ್ 1961ರಲ್ಲಿ ಭಾರತಕ್ಕೆ ಬಂದಾಗ ಅವರಿಗಾಗಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಮೆರವಣಿಗೆ ಏರ್ಪಡಿಸಿದ್ದರು. 1984ರಲ್ಲಿ ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ರಾಕೇಶ್ ಶರ್ಮಾ ಗಗನಯಾನದಿಂದ ಭಾರತಕ್ಕೆ ಮರಳಿದಾಗ ಮೆರವಣಿಗೆ ನಡೆದಿತ್ತು,