ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯ ನಾಗಲೋಟ ಮುಂದುವರೆದಿದ್ದು ಬುಧವಾರ ಚೆನ್ನೈ ಮತ್ತು ಹೈದರಾಬಾದ್‌ ಮಾರುಕಟ್ಟೆಯಲ್ಲಿ 1 ಕೇಜಿ ಬೆಳ್ಳಿ ಬೆಲೆಯು 4 ಲಕ್ಷ ರು.ಗೆ ತಲುಪಿದೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಬೆಳ್ಳಿ ದರ ಒಂದೇ ದಿನ 10,000 ರು. ಏರಿಕೆ

ನವದೆಹಲಿ: ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯ ನಾಗಲೋಟ ಮುಂದುವರೆದಿದ್ದು ಬುಧವಾರ ಚೆನ್ನೈ ಮತ್ತು ಹೈದರಾಬಾದ್‌ ಮಾರುಕಟ್ಟೆಯಲ್ಲಿ 1 ಕೇಜಿ ಬೆಳ್ಳಿ ಬೆಲೆಯು 4 ಲಕ್ಷ ರು.ಗೆ ತಲುಪಿದೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಬೆಳ್ಳಿ ದರ ಒಂದೇ ದಿನ 10,000 ರು. ಏರಿಕೆಯಾಗಿ 3.80 ಲಕ್ಷ ರು.ಗೆ ತಲುಪಿದೆ. ದೆಹಲಿಯಲ್ಲಿ ಕೂಡಾ 15,000 ರು. ಜಿಗಿದು 3.85 ಲಕ್ಷ ರು.ಗೆ ನೆಗೆದಿದೆ. ಇದು ಬೆಳ್ಳಿಯ ಸಾರ್ವಕಾಲಿಕ ಗರಿಷ್ಠ ದರವಾಗಿದೆ.

ಕಳೆದ ಮೇ ತಿಂಗಳ ಅಂತ್ಯದ ವೇಳೆಗೆ ಪ್ರತಿ ಕೆಜಿ ಬೆಳ್ಳಿ ಬೆಲೆ ಕೇವಲ 1 ಲಕ್ಷ ರು.ನಷ್ಟಿತ್ತು. ಅಂದರೆ ಕೇವಲ 8 ತಿಂಗಳ ಅವಧಿಯಲ್ಲಿ ಬೆಳ್ಳಿ ಬೆಲೆಯಲ್ಲಿ ಭಾರೀ ಎನ್ನಬಹುದಾದ 3 ಲಕ್ಷ ರು.ನಷ್ಟು ಏರಿಕೆ ದಾಖಲಾಗಿದೆ.

ಚಿನ್ನವೂ ಏರಿಕೆ:

ಬೆಂಗಳೂರಿನಲ್ಲಿ 22 ಕ್ಯಾರಟ್‌ ಚಿನ್ನವು 4700 ರು. ಏರಿಕೆಯಾಗಿ 1,53,150 ರು.ಗೆ ಹಾಗೂ 24 ಕ್ಯಾರಟ್‌ ಚಿನ್ನ 5130 ರು. ಜಗಿದು 1,67,080 ರು.ಗೆ ತಲುಪಿದೆ.

ದೆಹಲಿಯಲ್ಲಿ 99.9 ಶುದ್ಧತೆಯ ಚಿನ್ನ 10 ಗ್ರಾಂಗೆ 5000 ರು. ಜಿಗಿದು 1.71 ಲಕ್ಷ ರು.ಗೆ ಏರಿಕೆಯಾಗಿದೆ.

ಏರಿಕೆಗೆ ಕಾರಣ:

ಜಾಗತಿಕ ಅಸ್ಥಿರತೆ, ಅನಿಶ್ಚಿತ ವ್ಯಾಪಾರ ಒಪ್ಪಂದಗಳು, ರುಪಾಯಿ ಅಪಮೌಲ್ಯ, ಹೆಚ್ಚಿದ ಕೈಗಾರಿಕಾ ಬೇಡಿಕೆ, ಪೂರೈಕೆ ಕೊರತೆಯು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿವೆ.

ಏರಿಕೆಗೆ ಕಾರಣಗಳೇನು?

ಅಮೆರಿಕದ ತೆರಿಗೆ ದಾಳಿಯಿಂದ ಜಾಗತಿಕ ಅನಿಶ್ಚಿತತೆ ಹೆಚ್ಚಳ

ಕೈಗಾರಿಕಾ ವಲಯದಿಂದ ಬೆಳ್ಳಿಗೆ ಭಾರೀ ಬೇಡಿಕೆ ಬಂದಿರುವುದು

ಜಾಗತಿಕ ಬೇಡಿಕೆಗೆ ತಕ್ಕಷ್ಟು ಉತ್ಪಾದನೆ, ಪೂರೈಕೆ ಆಗದಿರುವುದು

ಷೇರುಪೇಟೆ ಕುಸಿತ ಕಾರಣ, ಚಿನ್ನ, ಬೆಳ್ಳಿ ಮೇಲಿನ ಹೂಡಿಕೆ ಏರಿಕೆ