ಒಬ್ಬನೇ ಮತದಾರನಿಗೆ ಒಂದು ಮತಗಟ್ಟೆ!

| Published : Apr 20 2024, 01:06 AM IST / Updated: Apr 20 2024, 07:18 AM IST

ಸಾರಾಂಶ

ಮಲೋಗಮ್ ಮತಗಟ್ಟೆ ತಲುಪಲು ಅಧಿಕಾರಿಗಳು 40 ಕಿ.ಮೀ ಪ್ರಯಾಣ ಮಾಡಿ ಸೋಕೇಲಾ ತಯಾಂಗ್‌ ಎಂಬ ಏಕೈಕ ಮತದಾರ ತನ್ನ ಅಮೂಲ್ಯ ಮತ ಚಲಾಯಿಸಲು ಅನುವು ಮಾಡಿಕೊಟ್ಟರು.

ಇಟಾನಗರ: ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಮಲೋಗಮ್ ಮತಗಟ್ಟೆಯು ಏಕೈಕ ಮತದಾರ ಮತ ಚಲಾಯಿಸುವ ಮೂಲಕ ವಿಶಿಷ್ಟ ಘಟನೆಗೆ ಸಾಕ್ಷಿಯಾಯಿತು.

ಮಲೋಗಮ್ ಮತಗಟ್ಟೆಯು ಒಬ್ಬರೇ ಒಬ್ಬ ಮತದಾರರನ್ನು ಹೊಂದಿದೆ. ಮತಗಟ್ಟೆಯ ಏಕೈಕ ಮತದಾರರಾಗಿದ್ದ 41 ವರ್ಷದ ಸೊಕೇಲಾ ತಯಾಂಗ್ ಶುಕ್ರವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ಮತಗಟ್ಟೆಯ ಒಂದೇ ಒಂದು ಮತ ದಾಖಲಿಸಲು ಚುನಾವಣಾ ಅಧಿಕಾರಿಗಳು 40 ಕಿಮೀ ದೂರ ಗುಡ್ಡಗಾಡು ಪ್ರದೇಶದಲ್ಲಿ ಪ್ರಯಾಣಿಸಿದ್ದರು.

ಚುನಾವಣಾ ಅಧಿಕಾರಿಗಳ ಪ್ರಕಾರ, ಮಲೋಗಮ್ ಹಳ್ಳಿಯಲ್ಲಿ ಕೆಲವೇ ಕೆಲವು ಕುಟುಂಬಗಳು ವಾಸಿಸುತ್ತಿವೆ .ತಯಾಂಗ್ ಅವರನ್ನು ಹೊರತು ಪಡಿಸಿ, ಉಳಿದವರು ಬೇರೆ ಮತಗಟ್ಟೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.  ಹೀಗಾಗಿ ತಯಾಂಗ್ ರಿಗಾಗಿ ಮಲೋಗಮ್ ನಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು.