‘ಜೈಹೋ’ ಖ್ಯಾತಿಯ ನಟ ಮುಕುಲ್ ದೇವ್ ನಿಧನ

| N/A | Published : May 25 2025, 02:06 AM IST / Updated: May 25 2025, 05:05 AM IST

Mukul Dev

ಸಾರಾಂಶ

‘ಸನ್ ಆಫ್‌ ಸರ್ದಾರ್‌’ , ‘ಜೈ ಹೋ’ ಸಿನಿಮಾ ಖ್ಯಾತಿಯ ನಟ ಮುಕುಲ್ ದೇವ್ (54) ನಿಧನರಾಗಿದ್ದಾರೆ.

ಮುಂಬೈ: ‘ಸನ್ ಆಫ್‌ ಸರ್ದಾರ್‌’ , ‘ಜೈ ಹೋ’ ಸಿನಿಮಾ ಖ್ಯಾತಿಯ ನಟ ಮುಕುಲ್ ದೇವ್ (54) ನಿಧನರಾಗಿದ್ದಾರೆ.

ಕಳೆದ 8- 10 ದಿನಗಳಿಂದ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದರು. ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಮ್ಮ ತಾಯಿಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ನಟ ಸರಿಯಾಗಿ ತಮ್ಮ ಆರೋಗ್ಯವನ್ನು ನೋಡಿಕೊಳ್ಳುತ್ತಿರಲಿಲ್ಲ ಎಂದು ಆಪ್ತ ಮೂಲಗಳು ತಿಳಿಸಿವೆ. ಖ್ಯಾತ ನಟ ರಾಹುಲ್‌ ದೇವ್‌ ಅವರು ಮುಕುಲ್‌ ದೇವ್‌ ಅವರ ಸೋದರೂ ಹೌದು.

1996ರಲ್ಲಿ ಸಿನಿ ರಂಗ ಪ್ರವೇಶಿಸಿದ ಅವರು ಸುಷ್ಮಿತಾ ಸೇನ್ ಮತ್ತು ಶರದ್‌ ಕಪೂರ್ ಜೊತೆಗಿನ ದಸ್ತಕ್ ಸಿನಿಮಾದಲ್ಲಿ ಮೊದಲ ಸಲ ಬಣ್ಣ ಹಚ್ಚಿದರು. ಆ ಬಳಿಕ ಹಿಂದಿ, ಪಂಜಾಬಿ, ಬಂಗಾಳಿ,ತೆಲುಗು ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿದ್ದರು. ಅವರು ‘ಸನ್ ಆಫ್‌ ಸರ್ದಾರ್’, ‘ಜೈಹೋ’,‘ಯಮ್ಲಾ ಪಗ್ಲಾ ದೀವಾನಾ’, ‘ಕೋಹ್ರಾಂ’‘, ‘ಆರ್‌ ರಾಜಕುಮಾರ್ ’ಸೇರಿದಂತೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದರು.

ದೇವ್ ಕಿರುತೆರೆಯಲ್ಲಿ ಘರ್ವಾಲಿ ಉಪರ್ವಾಲಿ, ಕುಂಕುಮ್, ಕುಟುಂಬ, ಕಶಿಶ್‌ ಧಾರಾವಾಹಿಗಳಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿದ್ದರು.

ರಾಜಸ್ಥಾನ: ಕಳ್ಳತನ ಆರೋಪ ಹೊರಿಸಿ ಉಲ್ಟಾ ನೇತುಹಾಕಿ ಟ್ರಕ್‌ ಚಾಲಕನಿಗೆ ಥಳಿತ

ಜೈಪುರ: ಕಳ್ಳತನ ಮಾಡಿರುವ ಶಂಕೆಯಿಂದ ಟ್ರಕ್‌ ಚಾಲಕನೊಬ್ಬನನ್ನು ತಲೆಕೆಳಗಾಗಿ ಜೆಸಿಬಿಗೆ ನೇತುಹಾಕಿ ಥಳಿಸಿದ ಅಮಾನವೀಯ ಘಟನೆ ಬೇವಾರ್‌ ಜಿಲ್ಲೆಯಲ್ಲಿ ನಡೆದಿದೆ. ಇದರ ವಿಡಿಯೋ ಕೂಡ ವೈರಲ್‌ ಆಗುತ್ತಿದೆ.ಘಟನೆ ಬಗ್ಗೆ ಮಾತನಾಡಿರುವ ರಾಯ್ಪುರ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌, ‘ಕಾರ್ಖಾನೆಯೊಂದರ ಮಾಲೀಕನಾಗಿರುವ ತೇಜ್‌ಪಾಲ್‌, ಸಿಮೆಂಟ್‌ ತುಂಬಿದ ಲಾರಿಯೊಂದಿಗೆ ತನ್ನ ಡ್ರೈವರ್‌ ಯಾಕೂಬ್‌ನನ್ನು ಕಳಿಸಿದ್ದ. ಆಗ ಯಾಕೂಬ್‌ ಡೀಸೆಲ್‌ ಮತ್ತು ಸಿಮೆಂಟ್‌ ಕದ್ದಿರಬಹುದು ಎಂಬ ಅನುಮಾನದಿಂದ ಆತನನ್ನು ಥಳಿಸಲಾಗಿದೆ. ಬಳಿಕ ಗಾಯಕ್ಕೆ ಉಪ್ಪುನೀರು ಸುರಿಯಲಾಗಿದೆ’ ಎಂದು ಹೇಳಿದ್ದಾರೆ. ಆರೋಪಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ 170ನೇ ಸೆಕ್ಷನ್‌ನ ಅಡಿ ಬಂಧಿಸಲಾಗಿದೆ. ಆದರೆ ಈ ಬಗ್ಗೆ ಸಂತ್ರಸ್ತ ದೂರು ದಾಖಲಿಸಿಲ್ಲ.ಘಟನೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಆಡಳಿತಾರೂಢ ಬಿಜೆಪಿಯ ಮೇಲೆ ಹರಿಹಾಯ್ದಿದ್ದು, ‘ರಾಜಸ್ಥಾನದಲ್ಲಿ ಮಾಫಿಯಾ ಆಡಳಿತ ಇನ್ನೆಷ್ಟು ಕಾಲ ನಡೆಯಲಿದೆ?’ ಎಂದು ಮಾಜಿ ಸಿಎಂ ಅಶೋಕ್‌ ಗೆಹ್ಲೋಟ್ ಪ್ರಶ್ನಿಸಿದ್ದಾರೆ.

ಕೇರಳ: ‘ಪಾಕಿಸ್ತಾನ ಮುಕ್ಕು’ ಸರ್ಕಲ್ ಹೆಸರು ಬದಲಿಗೆ ಸರ್ಕಾರಕ್ಕೆ ಮನವಿ

ಕೊಲ್ಲಂ: ಪಾಕಿಸ್ತಾನದ ವಿರುದ್ಧ ಭಾರತೀಯರು ಸಿಟ್ಟಿಗೆದ್ದಿರುವ ನಡುವೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿನ ಹಳ್ಳಿಯೊಂದರಲ್ಲಿನ ‘ಪಾಕಿಸ್ತಾನ ಮುಕ್ಕು’ ಎನ್ನುವ ಹಳೆಯ ಜಂಕ್ಷನ್‌ ಹೆಸರನ್ನು ಬದಲಿಸಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯತ್‌, ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.ಇಲ್ಲಿನ ಕುನ್ನತ್ತೂರ್‌ ಪಂಚಾಯತ್‌ನಲ್ಲಿ ಪಾಕಿಸ್ತಾನ ಮುಕ್ಕು ಎನ್ನುವ ಜಂಕ್ಷನ್‌ ಇದೆ. ಮುಸ್ಲಿಂ ಬಾಹುಳ್ಯ ಇರುವ ಪ್ರದೇಶವಾಗಿರುವುದರಿಂದ ಪಾಕಿಸ್ತಾನ ಮುಕ್ಕು ಹೆಸರಿನಿಂದ ಜನ ಕರೆಯುತ್ತಾರೆ ಎನ್ನಲಾಗಿದೆ. ಆದರೆ ಹೆಸರು ಬದಲಾವಣೆ ಅಧಿಕಾರ ತನಗೆ ಇರದ ಕಾರಣ, ಸರ್ಕಾರಕ್ಕೆ ಗ್ರಾಮ ಪಂಚಾಯ್ತಿ ಮನವಿ ಮಾಡಿದೆ.

ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸಮರ ಮತ್ತಷ್ಟು ಬಿಗಡಾಯಿಸಿರುವುದರಿಂದ ಹೆಸರು ಬದಲಾವಣೆಗೆ ಬಿಜೆಪಿ ಗ್ರಾ.ಪಂ ಸದಸ್ಯರೊಬ್ಬರು ಇತ್ತೀಚಿನ ಸಭೆಯಲ್ಲಿ ಆಗ್ರಹಿಸಿದ್ದರು. ಇದಕ್ಕೆ ಯಾರೂ ವಿರೋಧವನ್ನೂ ವ್ಯಕ್ತಪಡಿಸಿರಲಿಲ್ಲ.

24 ತಾಸಲ್ಲಿ ಅತ್ಯಧಿಕ ವಿಮಾ ಪಾಲಿಸಿ ಮಾರಾಟ: ಗಿನ್ನೆಸ್‌ ದಾಖಲೆ ಬರೆದ ಎಲ್‌ಐಸಿ

ನವದೆಹಲಿ: ದೇಶದ ಅತಿ ದೊಡ್ಡ ಜೀವ ವಿಮಾ ಕಂಪನಿಯಾಗಿರುವ ಎಲ್‌ಐಸಿ, 24 ಗಂಟೆಗಳಲ್ಲಿ ಅತ್ಯಧಿಕ ಜೀವ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸಿದೆ.ಈ ಕುರಿತು ಎಲ್‌ಐಸಿ ಘೋಷಿಸಿಕೊಂಡಿದ್ದು, ‘2025ರ ಜ.20ರಂದು 4,52,839 ಏಜೆಂಟ್‌ಗಳು ದೇಶಾದ್ಯಂತ 5,88,107 ಜೀವ ವಿಮೆಗಳನ್ನು ಮಾಡಿಸಿದರು. ನಿಗಮದ ಈ ಅಸಾಧಾರಣ ಕಾರ್ಯಕ್ಷಮತೆಯನ್ನು ಗಿನ್ನೆಸ್‌ ವಿಶ್ವ ದಾಖಲೆ ಗುರುತಿಸಿದೆ. ಅಂತೆಯೇ, ಏಜೆಂಟ್‌ಗಳ ಸಮರ್ಪಣೆ, ಕೌಶಲ್ಯ ಮತ್ತು ದಣಿವರಿಯದ ಕೆಲಸದಿಂದ ಹೊಸ ಜಾಗತಿಕ ಮಾನದಂಡ ಸ್ಥಾಪಿಸಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಕೋವಿಡ್ ಹೆಚ್ಚಳದ ಮೇಲೆ ಕೇಂದ್ರ ನಿಗಾ: ನಿಯಂತ್ರಣಕ್ಕೆ ಕ್ರಮ

ನವದೆಹಲಿ: ಕೇರಳ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಸೇರಿ ಕೆಲವೆಡೆ ಕೋವಿಡ್-19 ಹೆಚ್ಚುತ್ತಿರುವ ಮೇಲೆ ಕೇಂದ್ರ ಸರ್ಕಾರ ನಿಗಾ ಇರಿಸಿದ್ದು, ಶನಿವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪರಿಶೀಲನಾ ಸಭೆ ನಡೆಸಿದ್ದಾರೆ. ಹೆಚ್ಚಿನ ಪ್ರಕರಣ ಸೌಮ್ಯವಾಗಿದ್ದು, ಮನೆ ಆರೈಕೆಯಲ್ಲಿವೆ. ಆದರೂ ಸೋಂಕು ನಿಯಂತ್ರಣಕ್ಕೆ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಒಟ್ಟು ಕೇಸಲ್ಲಿ ಜೆಎನ್‌.1 ವೈರಸ್‌ ತಳಿ ಪಾಲು ಶೇ.53 ಆಗಿದೆ. ಒಂದು ಎನ್‌ಬಿ.1.8.1 ಮತ್ತು 4 ಎಲ್‌ಎಫ್‌.7 ತಳಿಯ ಕೇಸಿವೆ ಎಂದು ಮೂಲಗಳು ಹೇಳಿವೆ.

Read more Articles on