ಕೈಗಾ ಅಣು ಸ್ಥಾವರ ಸ್ಥಾಪಿಸಿದ್ದ ವಿಜ್ಞಾನಿ ಶ್ರೀನಿವಾಸನ್‌ ನಿಧನ

| Published : May 21 2025, 02:00 AM IST

ಕೈಗಾ ಅಣು ಸ್ಥಾವರ ಸ್ಥಾಪಿಸಿದ್ದ ವಿಜ್ಞಾನಿ ಶ್ರೀನಿವಾಸನ್‌ ನಿಧನ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಸೇರಿದಂತೆ ದೇಶಾದ್ಯಂತ 18 ಅಣುಸ್ಥಾವರ ಸ್ಥಾಪನೆಯಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಹಿರಿಯ ಪರಮಾಣು ವಿಜ್ಞಾನಿ, ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ, ಕನ್ನಡಿಗ ಎಂ.ಆರ್‌. ಶ್ರೀನಿವಾಸನ್ (95) ಮಂಗಳವಾರ ನಿಧನರಾಗಿದ್ದಾರೆ.

==ದೇಶದ ಪರಮಾಣು ಯೋಜನೇಲಿ ಪ್ರಮುಖ ಪಾತ್ರ

ಅಣು ಶಕ್ತಿ ಆಯೋಗದ ಅಧ್ಯಕ್ಷರೂ ಆಗಿದ್ದ ಕನ್ನಡಿಗ

---

1930ರಲ್ಲಿ ಬೆಂಗಳೂರಲ್ಲಿ ಜನಿಸಿ, ಮೈಸೂರಲ್ಲಿ ವ್ಯಾಸಂಗ

ಬಳಿಕ ಅಣು ಶಕ್ತಿ ಆಯೋಗದಲ್ಲಿ ಹಲವು ಹುದ್ದೆ ನಿರ್ವಹಣೆ

ಭಾರತದ ಅಣು ಪಿತಾಮಹ ಹೋಮಿ ಭಾಬಾ ಜತೆ ಕೆಲಸ

ದೇಶದ ಮೊದಲ ಅಣು ರಿಯಾಕ್ಟರ್‌ ಅಪ್ಸರಾದಲ್ಲೂ ಕರ್ತವ್ಯ

ಪದ್ಮವಿಭೂಷಣ ಸೇರಿ ಹಲವು ಗೌರವಕ್ಕೆ ಶ್ರೀನಿವಾಸನ್ ಪಾತ್ರ

==

ಪಿಟಿಐ ಉದಕಮಂಡಲಂ (ತಮಿಳುನಾಡು)

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಸೇರಿದಂತೆ ದೇಶಾದ್ಯಂತ 18 ಅಣುಸ್ಥಾವರ ಸ್ಥಾಪನೆಯಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಹಿರಿಯ ಪರಮಾಣು ವಿಜ್ಞಾನಿ, ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ, ಕನ್ನಡಿಗ ಎಂ.ಆರ್‌. ಶ್ರೀನಿವಾಸನ್ (95) ಮಂಗಳವಾರ ನಿಧನರಾಗಿದ್ದಾರೆ.

ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಗಣ್ಯರು, ವಿಜ್ಞಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

1930ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದ ಶ್ರೀನಿವಾಸನ್‌ ಬೆಂಗಳೂರು ಹಾಗೂ ಮೈಸೂರಿನಲ್ಲಿ ಉನ್ನತ ವ್ಯಾಸಂಗ ಮುಗಿಸಿದ್ದರು. ದೇಶದ ಪರಮಾಣು ಯೋಜನೆಗೆ ಸಂಬಂಧಿಸಿದ ಹಲವು ಪ್ರಾಜೆಕ್ಟ್‌ಗಳನ್ನು ಶ್ರೀನಿವಾಸನ್ ಪರಿಚಯಿಸಿದ್ದರು,

ಅವರ ನಿಧನದ ಬಗ್ಗೆ ಹೇಳಿಕೆ ನೀಡಿರುವ ಪುತ್ರಿ ಶಾರದಾ, ’ಊಟಿಗೆ ತೆರಳಿದ್ದ ತಂದೆ ಸೋಮವಾರ ರಾತ್ರಿ ಹಠಾತ್ತನೆ ಅನಾರೋಗ್ಯಕ್ಕೆ ಒಳಗಾದರು ಮತ್ತು ಮಂಗಳವಾರ ಬೆಳಿಗ್ಗೆ 4 ಗಂಟೆಗೆ ಆಸ್ಪತ್ರೆಯಲ್ಲಿ ಶಾಂತಿಯುತವಾಗಿ ನಿಧನರಾದರು. ನಾವು ಅವರ ಪಾರ್ಥಿವ ಶರೀರ ತರಲು ಬೆಂಗಳೂರಿನಿಂದ ಹೋಗುತ್ತಿದ್ದೇವೆ’ ಎಂದಿದ್ದಾರೆ.

ಸಾಧಕ ಶ್ರೀನಿವಾಸನ್‌:

1955ರಲ್ಲಿ ಪರಮಾಣು ಇಂಧನ ಇಲಾಖೆ ಉದ್ಯೋಗಕ್ಕೆ ಸೇರಿದ್ದರು. ಆ ಬಳಿಕ ದೇಶ ಖ್ಯಾತ ಪರಮಾಣು ವಿಜ್ಞಾನಿಗಳಾಗಿದ್ದ ಡಾ. ಹೋಮಿ ಭಾಬಾ ಅವರೊಂದಿಗೆ ದೇಶದ ಮೊದಲ ಪರಮಾಣು ರಿಯಾಕ್ಟರ್‌ ಅಪ್ಸರಾ ನಿರ್ಮಾಣದಲ್ಲಿ ಕೆಲಸ ಮಾಡಿದ್ದರು. ಅವರು 1959ರಲ್ಲಿ ಮೊದಲ ಪರಮಾಣು ವಿದ್ಯುತ್‌ ಸ್ಥಾವರ ನಿರ್ಮಾಣದ ಯೋಜನೆಯ ಎಂಜಿನಿಯರ್‌ ಆಗಿದ್ದರು.

1967ರಲ್ಲಿ ಮದ್ರಾಸ್‌ ಪರಮಾಣು ವಿದ್ಯುತ್‌ ಸ್ಥಾವರದ ಯೋಜನಾ ಎಂಜಿನಿಯರ್, ಅಣು ಶಕ್ತಿ ಆಯೋಗದ ಎಂಜಿನಿಯರ್‌ ಹುದ್ದೆ, ಡಿಎಇಯ ವಿದ್ಯುತ್‌ ಯೋಜನೆಗಳ ಎಂಜಿನಿಯರಿಂಗ್ ವಿಭಾಗದ ನಿರ್ದೇಶಕ, ಅಣು ವಿದ್ಯುತ್ ಮಂಡಳಿ ಅಧ್ಯಕ್ಷ, ಪರಮಾಣು ಶಕ್ತಿ ಇಲಾಖೆಯ ಕಾರ್ಯದರ್ಶಿ, ಪರಮಾಣು ವಿದ್ಯುತ್‌ ನಿಗಮ ಲಿಮಿಟೆಡ್‌ (ಎನ್‌ಪಿಸಿಐಎಲ್‌) ಸ್ಥಾಪಕ ಅಧ್ಯಕ್ಷರು ಸೇರಿದಂತೆ ಹಲವಾರು ಜವಾಬ್ದಾರಿ ನಿರ್ವಹಿಸಿದ್ದರು.

ಇನ್ನು ಅವರು ದೇಶದ ಪರಮಾಣು ಇಂಧನ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.